ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!
ಕೊರೋನಾದಿಂದ ಸದ್ಯ ಇಡೀ ವಿಶ್ವವೇ ಕಂಗಾಲಾಗಿದೆ| ಕಣ್ಣಿಗೆ ಕಾಣದ ವೈರಸ್ ದಿನಗಳೆದಂತೆ ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡಿದೆ| ಹೀಗಿರುವಾಗ ಸದ್ಯ ಔಷಧಿಯೊಂದು ಇಡೀ ವಿಶ್ವಕ್ಕೇ ಗುಡ್ ನ್ಯೂಸ್ ಕೊಟ್ಟಿದೆ
ವಾಚಷಿಂಗ್ಟನ್(ಏ.30): ಕೊರೋನಾದಿಂದ ಸದ್ಯ ಇಡೀ ವಿಶ್ವವೇ ಕಂಗಾಲಾಗಿದೆ. ದೂರದ ವುಹಾನ್‌ನಲ್ಲಿ ಹುಟ್ಟಿಕೊಂಡ ಈ ಕಣ್ಣಿಗೆ ಕಾಣದ ವೈರಸ್ ದಿನಗಳೆದಂತೆ ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡಿದೆ. ಅಪಾರ ಸಾವು- ನೋವು ಉಂಟು ಮಾಡಿರುವ ಈ ಮಹಾಮಾರಿಗೆ ಬೆಚ್ಚಿಬಿದ್ದ ಬಹುತೇಕ ಎಲ್ಲಾ ರಾಷ್ಟ್ರಗಳು ಆರ್ಥಿಕ ನಷ್ಟವನ್ನು ಕಡೆಗಣಿಸಿ, ಜೀವಕ್ಕೆ ಬೆಲೆ ಕೊಟ್ಟು ಲಾಕ್‌ಡೌನ್ ಘೋಷಿಸಿವೆ. ಈ ನಡುವೆ ಕೊರೋನಾ ಹೊಡೆದೋಡಿಸುವ ಲಸಿಕೆಗಾಗಿ ಸಂಶೋಧನೆ ತೀವ್ರಗೊಂಡಿದ್ದು, ಮಾನವರ ಮೇಲೆ ಏಳು ಲಸಿಕೆಗಳ ಪ್ರಯೋಗವೂ ನಡೆದಿದೆ. ಹೀಗಿರುವಾಗ ಸದ್ಯ ಔಷಧಿಯೊಂದು ಇಡೀ ವಿಶ್ವಕ್ಕೇ ಗುಡ್ ನ್ಯೂಸ್ ಕೊಟ್ಟಿದೆ.
ಹೌದು ಅಮೆರಿಕಾ ವಿಜ್ಞಾನಿಗಳು ಈ ಹಿಂದೆ ಕಾಡಿದ್ದ ಎಬೋಲಾವನ್ನು ನಿರ್ನಾಮ ಮಾಡಲು ತಯಾರಿಸಿದ್ದ ಔಷಧಿ ರೆಮ್ಡೇಸಿವಿರ್(Remdesivir) ಕೊರೋನಾ ಸೋಂಕಿತರ ಮೇಲೆ ಅಚ್ಚರಿಯ ಪರಿಣಾಮ ಬೀರಿದೆ. ಅಮೆರಿಕಾ ವಿಜ್ಞಾನಿಗಳು ಈ ಮಾಹಿತಿ ಬಹಿರಂಗಪಡಿಸಿದ ಬಳಿಕ, ಸದ್ಯಕ್ಕೀಗ ಮಹಾಮಾರಿ ವಿರುದ್ಧದ ಸಮರದಲ್ಲಿ ವಿಶ್ವದಾದ್ಯಂತ ಹೆಚ್ಚು ಭರವಸೆ ಮೂಡಿದೆ.
ಕೊರೋನಾ ಲಸಿಕೆ ಎಲ್ಲಿಗೆ ಬಂತು?, ಸೆಪ್ಟೆಂಬರ್‌ನೊಳಗೆ ರೆಡಿಯಾಗುತ್ತಾ?
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರ ಡಾ. ಆಂಟನಿ ಫಾವ್ಸಿ ಈ ಸಂಬಂಧ ಮಾಹಿತಿ ನೀಡಿದ್ದು, 'ರೆಮ್ಡೇಸಿವಿರ್(Remdesivir) ಔಷಧಿ, ಸೋಂಕಿತರು ಗುಣಮುಖರಾಗುವ ಸಮಯದಲ್ಲಿ ಸ್ಪಷ್ಟ, ಅತ್ಯಂತ ಪ್ರಭಾವಿ ಹಾಗೂ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂಬುವುದು ಅಂಕಿ ಅಂಶಗಳಿಂದ ಬಯಲಾಗಿದೆ' ಎಂದಿದ್ದಾರೆ. ಅಲ್ಲದೇ ಈ ರೆಮ್ಡೇಸಿವಿರ್(Remdesivir)ರನ್ನು ಅಮೆರಿಕಾ, ಯೂರೋಪ್ ಹಾಗೂ ಏಷ್ಯಾದ 68 ರಾಷ್ಟ್ರಗಳ 1063 ಸೋಂಕಿತರ ಮೇಲೆ ಪ್ರಯೋಗ ಮಾಡಲಾಗಿದೆ. ಈ ಪ್ರಯೋಗದಲ್ಲಿ ರೆಮ್ಡೇಸಿವಿರ್(Remdesivir) ಈ ವೈರಸ್ ತಡೆಯುವ ಸಾಮರ್ಥ್ಯ ಹೊಂದಿದೆ ಎಂಬುವುದಿ ಸಾಬೀತಾಗಿದೆ ಎಂದೂ ಅವರು ತಿಳಿಸಿದ್ದಾರೆ.
ವಿಶ್ವದ ಭರವಸೆ ಹೆಚ್ಚಿಸಿದ ರೆಮ್ಡೇಸಿವಿರ್(Remdesivir)
ಇದಕ್ಕೂ ಮೊದಲು ರೆಮ್ಡೇಸಿವಿರ್(Remdesivir) ಔಷಧಿ ಎಬೋಲಾ ತಡೆಯಲು ನಡೆಸಿದ್ದ ಪ್ರಯೋಗದಲ್ಲಿ ವಿಫಲಗೊಂಡಿತ್ತು. ಇಷ್ಟೇ ಅಲ್ಲದೇ ವಿಶ್ವಸಂಸ್ಥೆ ಕೂಡಾ ತನ್ನದೊಂದು ಸೀಮಿತ ಅಧ್ಯಯನದ ಬಳಿಕ, ವುಹಾನ್‌ನಲ್ಲೂ ಈ ಔಷಧಿ ರೋಗಿಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದಿತ್ತು. ಇನ್ನು ವುಹಾನ್‌ನಲ್ಲೇ ಮೊದಲ ಕೊರೋನಾ ವೈರಸ್ ಸೋಂಕು ಪ್ರಕರಣ ಬೆಳಕಿಗೆ ಬಂದಿತ್ತು.
ಸದ್ಯ ಕೊರೋನಾ ನಿಯಂತ್ರಿಸುವ ಲಸಿಕೆ ಸಂಶೋಧನೆ ನಡೆಯುತ್ತಿದ್ದು, ಅದು ಲಭ್ಯವಾಗುವವರೆಗೆ ಈ ಔಷಧಿಯೇ ಜಗತ್ತಿಗೆ ಶಕ್ತಿ ತುಂಬಲಿದೆ.