ಬಿಜಾಪುರದಲ್ಲಿ ಕಾಣೆಯಾಗಿದ್ದ ಪತ್ರಕರ್ತ ಮುಖೇಶ್ ಚಂದ್ರಾಕರ್ ಮೃತದೇಹ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆ. ಗುತ್ತಿಗೆದಾರರೊಬ್ಬರ ಮನೆಯಲ್ಲಿ ಕಾಂಕ್ರೀಟ್‌ನಿಂದ ಮುಚ್ಚಿದ್ದ ಟ್ಯಾಂಕ್‌ನಲ್ಲಿ ಮೃತದೇಹ ಪತ್ತೆಯಾಗಿದ್ದು, ತಲೆ ಹಾಗೂ ಬೆನ್ನಿನ ಮೇಲೆ ಗಾಯಗಳಿವೆ. ರಸ್ತೆ ಕಾಮಗಾರಿ ಅವ್ಯವಹಾರ ವರದಿ ಮಾಡಿದ್ದ ಮುಖೇಶ್, ಬೆದರಿಕೆ ಎದುರಿಸುತ್ತಿದ್ದರು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಯ್‌ಪುರ (ಜ.7): ಛತ್ತೀಸ್‌ಗಢದಲ್ಲಿ ಕಣ್ಮರೆಯಾದ ಪತ್ರಕರ್ತನ ಮೃತದೇಹ ಪತ್ತೆಯಾಗಿದೆ. ರಸ್ತೆ ಗುತ್ತಿಗೆದಾರರ ಸೆಪ್ಟಿಕ್ ಟ್ಯಾಂಕ್‌ನಲ್ಲಿ 28 ವರ್ಷದ ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಾಕರ್ ಅವರ ಮೃತದೇಹವು ಶುಕ್ರವಾರ ಬಿಜಾಪುರದ ಚಟ್ಟನ್‌ಪಾರಾ ಬಸ್ತಿಯಲ್ಲಿ ಪತ್ತೆಯಾಗಿದೆ. ಬಿಜಾಪುರ ನಗರದ ರಸ್ತೆ ಗುತ್ತಿಗೆದಾರರ ಮನೆಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಯುವ ಪತ್ರಕರ್ತನ ಮೃತದೇಹ ಪತ್ತೆಯಾಗಿದೆ.
ಎನ್‌ಡಿಟಿವಿಗೂ ವರದಿ ಮಾಡುತ್ತಿದ್ದ ಮುಖೇಶ್ ಚಂದ್ರಾಕರ್ ಜನವರಿ 1 ರಿಂದ ಕಾಣೆಯಾಗಿದ್ದರು. ಕಾಂಕ್ರೀಟ್‌ನಿಂದ ಹೊಸದಾಗಿ ಮುಚ್ಚಿದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ಮುಖೇಶ್ ಅವರ ತಲೆ ಮತ್ತು ಬೆನ್ನಿನ ಮೇಲೆ ಹಲವಾರು ಗಾಯಗಳಾಗಿವೆ. ಟ್ಯಾಂಕ್‌ನ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಧರಿಸಿದ್ದ ಬಟ್ಟೆಗಳ ಮೂಲಕ ಗುರುತಿಸಲಾಗಿದೆ.
ಭಾರತದಲ್ಲಿ ಮೊದಲ ಬಾರಿಗೆ ಶೇ.5ಕ್ಕಿಂತ ಕೆಳಗಿಳಿದ ಗ್ರಾಮೀಣ ಬಡತನ!
ಗುತ್ತಿಗೆದಾರರ ಸಂಬಂಧಿ ಕರೆದ ನಂತರ ಅವರನ್ನು ಭೇಟಿ ಮಾಡಲು ಪತ್ರಕರ್ತ ಹೋಗಿದ್ದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮುಖೇಶ್ ವಾಪಸ್ ಬಾರದ ಕಾರಣ ಅವರ ಹಿರಿಯ ಸಹೋದರ, ದೂರದರ್ಶನ ಪತ್ರಕರ್ತ ಯುಕೇಶ್ ಚಂದ್ರಕರ್ ನಗರದಲ್ಲಿ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು. ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಮುಖೇಶ್ ಮತ್ತು ಸಹೋದರ ಯುಕೇಶ್ ಚಂದ್ರಾಕರ್ ಒಟ್ಟಿಗೆ ವಾಸಿಸುತ್ತಿದ್ದರು. ಸಹೋದರನ ದೂರಿನ ಮೇರೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.
ಮುಖೇಶ್ ಅವರ ಮೊಬೈಲ್‌ನ ಕೊನೆಯ ಟವರ್ ಸ್ಥಳವು ಸುರೇಶ್ ಚಂದ್ರಾಕರ್ ಎಂಬ ಗುತ್ತಿಗೆದಾರರ ಕಟ್ಟಡದ ಸಮೀಪದಲ್ಲಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಅವರ ಉದ್ಯೋಗಿಗಳು ಈ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಹೊಸದಾಗಿ ಕಾಂಕ್ರೀಟ್‌ನಿಂದ ಮುಚ್ಚಿದ ಸೆಪ್ಟಿಕ್ ಟ್ಯಾಂಕ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಂಶಯದ ಮೇರೆಗೆ ಸೆಪ್ಟಿಕ್ ಟ್ಯಾಂಕ್ ಅನ್ನು ಒಡೆದು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಸುರೇಶ್ ಚಂದ್ರಾಕರ್ ಸೇರಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯುವ ಪತ್ರಕರ್ತನ ಸಾವಿಗೆ ಇತ್ತೀಚೆಗೆ ಪ್ರಕಟಿಸಿದ ವರದಿಗಳಿಗೆ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸಹೋದರ ಯುಕೇಶ್ ದೂರಿನಲ್ಲಿ ಗಂಗಾಳೂರಿನಿಂದ ನೆಲಸನಾರ್ ಗ್ರಾಮಕ್ಕೆ ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಇತ್ತೀಚೆಗೆ ಮುಕೇಶ್ ವರದಿ ಮಾಡಿದ್ದ ಕಥೆಯನ್ನು ಉಲ್ಲೇಖಿಸಲಾಗಿದೆ. ವರದಿಯು ಯೋಜನೆಯ ಅವ್ಯಾವಹಾರದ ತನಿಖೆಯನ್ನು ಪ್ರೇರೇಪಿಸಿತು ಮತ್ತು ಗುತ್ತಿಗೆದಾರ ಸುರೇಶ್ ಚಂದ್ರಕರ್ ಸೇರಿದಂತೆ ಮೂವರು ವ್ಯಕ್ತಿಗಳಿಂದ ಬೆದರಿಕೆಗಳನ್ನು ಯುಕೇಶ್ ಉಲ್ಲೇಖಿಸಿದ್ದಾರೆ. ಶವ ಪತ್ತೆಯಾದ ಕಾಂಪೌಂಡ್ ಅನ್ನು ಕಾರ್ಮಿಕರ ವಸತಿ ಮತ್ತು ಬ್ಯಾಡ್ಮಿಂಟನ್ ಆಡಲು ಬಳಸಲಾಗುತ್ತಿತ್ತು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಚೀನಾ ಕುತಂತ್ರ: ಲಡಾಖ್ನಲ್ಲಿ ಎರಡು ಹೊಸ ಕೌಂಟಿ ಘೋಷಣೆ, ಭಾರತದ ತೀವ್ರ ಆಕ್ಷೇಪ
ಬಸ್ತಾರ್ ಪ್ರದೇಶದ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ 'ಬಸ್ತಾರ್ ಜಂಕ್ಷನ್' ಎಂಬ ಯೂಟ್ಯೂಬ್ ಚಾನೆಲ್ ಅನ್ನು ಮುಖೇಶ್ ಚಂದ್ರಾಕರ್ ನಡೆಸುತ್ತಿದ್ದರು. ಈ ಚಾನೆಲ್‌ಗೆ 1.59 ಲಕ್ಷ ಚಂದಾದಾರರಿದ್ದಾರೆ. 2021 ರ ಏಪ್ರಿಲ್‌ನಲ್ಲಿ, ಮಾವೋವಾದಿಗಳು ಅಪಹರಿಸಿದ್ದ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಬಿಡುಗಡೆ ಮಾಡುವಲ್ಲಿ ಮುಖೇಶ್ ನಿರ್ಣಾಯಕ ಪಾತ್ರ ವಹಿಸಿದ್ದರು. ಇದಕ್ಕಾಗಿ ರಾಜ್ಯ ಪೊಲೀಸರಿಂದ ಪ್ರಶಂಸೆ ಪಡೆದಿದ್ದರು. ಈ ಘಟನೆಗೆ ಸಂತಾಪ ಸೂಚಿಸಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಖಚಿತಪಡಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.
