ನ್ಯೂ ಬನ್ಸ್‌ರ್‍ವಿಕ್‌ (ಅ.14): ಅಮೆರಿಕದಲ್ಲಿ ನಡೆಯುತ್ತಿರುವ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ ಆರಂಭಿಸಿದ್ದ ಕೊರೋನಾ ವೈರಸ್‌ ಸಿಂಗಲ್‌ ಡೋಸ್‌ ಲಸಿಕೆಯ ಕೊನೆಯ ಹಂತದ ಪ್ರಯೋಗವನ್ನು ಹಠಾತ್ತನೇ ಸ್ಥಗಿತಗೊಂಡಿದೆ.

ಲಸಿಕೆ ಪ್ರಯೋಗಕ್ಕೆ ಒಳಪಟ್ಟವರಲ್ಲಿ ಒಬ್ಬರು ಏಕಾಏಕಿ ಅಸ್ವಸ್ಥರಾಗಿದ್ದಾರೆ. ಆದರೆ ಅವರು ಲಸಿಕೆಯ ಅಡ್ಡಪರಿಣಾಮದಿಂದ ಅಸ್ವಸ್ಥರಾದರೋ ಅಥವಾ ಬೇರೆ ಕಾರಣಕ್ಕೋ ಎಂಬುದು ಪರೀಕ್ಷೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಈ ಕುರಿತಾದ ಅಧ್ಯಯನ ನಡೆಸಲು ನಿರ್ಧರಿಸಲಾಗಿದ್ದು, ಅಲ್ಲಿಯವರೆಗೂ ಲಸಿಕೆ ಪ್ರಯೋಗವನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ತಿಳಿಸಿದೆ.

ಇತ್ತೀಚೆಗೆ ಕೊನೆಯ ಹಂತದ ಆಸ್ಟ್ರಾಜೆನೆಕಾ ಹಾಗೂ ಆಕ್ಸಫರ್ಡ್‌ ವಿವಿ ಲಸಿಕೆ ಪ್ರಯೋಗವೂ ಅಮೆರಿಕದಲ್ಲಿ ಸ್ಥಗಿತಗೊಂಡಿತ್ತು. ಲಸಿಕೆ ಪಡೆದವರು ಅನಾರೋಗ್ಯಕ್ಕೆ ಒಳಗಾಗಿದ್ದೇ ಇದಕ್ಕೆ ಕಾರಣವಾಗಿತ್ತು.

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಅಮೆರಿಕ ಹಾಗೂ ಇತರ ದೇಶಗಳಲ್ಲಿ 60 ಸಾವಿರ ಜನರ ಮೇಲೆ ಸಿಂಗಲ್‌ ಡೋಸ್‌ ಲಸಿಕೆ ಪ್ರಯೋಗ ಆರಂಭಿಸಿದೆ. ಅಮೆರಿಕದ ಇತರ ಲಸಿಕೆ ಪ್ರಯೋಗಗಳು 2 ಡೋಸ್‌ ಲಸಿಕೆಗಳಾಗಿದ್ದರೆ, ಜಾನ್ಸನ್‌ ಲಸಿಕೆ ಸಿಂಗಲ್‌ ಡೋಸ್‌ನದ್ದಾಗಿದೆ.