ಕೋಲ್ಕತಾ(ಮೇ.22): ಮೊದಲು ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಇದ್ದ ಉದ್ಯೋಗವೂ ಹೋಗಿತ್ತು. ಈಗ ಅಂಫಾನ್‌ ಚಂಡಮಾರುತ ಇದ್ದ ಒಂದು ಪಟ್ಟಮನೆಯನ್ನೂ ನಾಶಪಡಿಸಿತು. ಇದು, ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಗ್ರಾಮಕ್ಕೆ ತೆರಳಿದ್ದ ವಲಸೆ ಕಾರ್ಮಿಕ ಜಮಾಲ್‌ ಮೊಂಡಾಲ್‌ (45) ಎಂಬಾತನ ನೋವಿನ ಕತೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದ ಆತ, ಸೋಮವಾರವಷ್ಟೇತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡಿದ್ದ. ಆದರೆ, ಜಮಾಲ್‌ ಸಂತಸ ಹೆಚ್ಚು ಹೊತ್ತು ಇರಲಿಲ್ಲ. ಬುಧವಾರ ರಾತ್ರಿ ಅಂಫಾನ್‌ ಚಂಡ ಮಾರುತದಿಂದ ಜಮಾಲ್‌ ಮೊಂಡಲ್‌ನ ಮಣ್ಣಿನ ಮನೆ ಕುಸಿದುಬಿದ್ದಿತ್ತು. ಹೀಗಾಗಿ ಮೊಂಡಲ್‌ ಕುಟುಂಬ ಅತಂತ್ರಸ್ಥಿತಿಗೆ ಸಿಲುಕಿದೆ. ನಾಲ್ವರು ಮತ್ತು ಪತ್ನಿಯ ಜೊತೆ ಮೊಂಡಲ್‌ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

‘ಅಂಫನ್‌’ ಚಂಡಮಾರುತ ವಿರುದ್ಧ ಗೆದ್ದ ಪಟ್ನಾಯಕ್‌: ಮಮತಾ ಫೇಲ್‌!

‘ಸೋಮವಾರ ನಾನು ಮನೆಗೆ ಹೋಗಿ ಮುಟ್ಟಿದಾಗ ನನ್ನ ಕಷ್ಟಗಳೆಲ್ಲವೂ ಮುಗಿದು ಹೋಯಿತೆಂದು ಅಂದುಕೊಂಡಿದ್ದೆ. ಆದರೆ, ಆಗಿದ್ದೇ ಬೇರೆ. ಚಂಡ ಮಾರುತದಿಂದ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಮುಂದೇನು ಮಾಡುವುದು, ಕುಟುಂಬವನ್ನು ಹೇಗೆ ನಿಭಾಯಿಸುವುದು ಎಂದು ತೋಚದಂತಾಗಿದೆ’ ಎಂದು ಎಂದು ಜಮಾಲ್‌ ಮೊಂಡಲ್‌ ಮಾಧ್ಯಮದ ಮುಂದೆ ತಮ್ಮ ನೋವನ್ನು ಹೇಳಿಕೊಂಡಿದ್ದಾನೆ.

ಇದು ಜಮಾಲ್‌ ಒಬ್ಬನ ಕಥೆಯಲ್ಲ. ಲಾಕ್ಡೌನ್‌ನಿಂದ ಉದ್ಯೋಗ ಕಳೆದುಕೊಂಡು ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಮರಳಿದ್ದ ನೂರಾರು ವಲಸಿಗ ಕಾರ್ಮಿಕರ ಕಥೆ.