ಹರಿಯಾಣದ ಜೀಂದ್-ಸೋನಿಪತ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಾರತದ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ದಾಳಿಯಿಂದ ರೈಲಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿ ಕಾಲ್ತುಳಿತದ ವಾತಾವರಣ ನಿರ್ಮಾಣವಾಗಿದೆ.
ದೇಶದಲ್ಲೇ ಪ್ರಥಮ ಬಾರಿಗೆ ಜೀಂದ್ ಮತ್ತು ಸೋನಿಪತ್ ನಡುವೆ ಸಂಚಾರ ಆರಂಭಿಸಿದ್ದ ಪರಿಸರ ಸ್ನೇಹಿ ಹೈಡ್ರೋಜನ್ ರೈಲಿನ ಮೇಲೆ ದುಷ್ಕರ್ಮಿಗಳು ಭೀಕರ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಹರಿಯಾಣದ ರೈಲ್ವೆ ನಿಲ್ದಾಣವೊಂದರಲ್ಲಿ ಈ ಕೃತ್ಯ ನಡೆದಿದ್ದು, ಕೆಲವೇ ಕ್ಷಣಗಳಲ್ಲಿ ರೈಲ್ವೇ ಸ್ಟೇಷನ್ ರಣರಂಗವಾಗಿ ಪರಿಣಮಿಸಿದೆ.
ನಿಲ್ಲದ ಕಲ್ಲು ತೂರಾಟ!
ಸಾಮಾನ್ಯ ದಿನದಂತೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ರೈಲ್ವೆ ನಿಲ್ದಾಣಕ್ಕೆ ಹೈಡ್ರೋಜನ್ ರೈಲು ಬಂದು ತಲುಪುತ್ತಿದ್ದಂತೆಯೇ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಪುಂಡರ ಗುಂಪೊಂದು ರೈಲನ್ನು ಗುರಿಯಾಗಿಸಿಕೊಂಡು ಕಲ್ಲುತೂರಾಟ ನಡೆಸಲು ಪ್ರಾರಂಭಿಸಿತು. ಕಲ್ಲುಗಳ ಮಳೆಯೇ ಹರಿದುಬಂದಿದ್ದರಿಂದ ರೈಲಿನ ಕಿಟಕಿ ಗ್ಲಾಸ್‌ಗಳು ಪುಡಿಪುಡಿಯಾದವು. ಈ ದಿಢೀರ್ ದಾಳಿಯಿಂದ ಕಂಗಾಲಾದ ಪ್ರಯಾಣಿಕರು ಹಾಗೂ ಸ್ಟೇಷನ್‌ನಲ್ಲಿದ್ದ ಸಾರ್ವಜನಿಕರು ಜೀವಭಯದಿಂದ ಚೆಲ್ಲಾಪಿಲ್ಲಿಯಾಗಿ ಇತ್ತ-ಅತ್ತ ಓಡಲು ಪ್ರಾರಂಭಿಸಿದರು.
ನಿಲ್ದಾಣದಲ್ಲಿ ಕಾಲ್ತುಳಿತ!
ಘಟನೆಯಿಂದಾಗಿ ರೈಲ್ವೇ ನಿಲ್ದಾಣದಲ್ಲಿ ಭಾರಿ ಕಾಲ್ತುಳಿತದ ವಾತಾವರಣ ಮತ್ತು ಅಸ್ತವ್ಯಸ್ತತೆ ಉಂಟಾಯಿತು. ಹಲವು ಪ್ರಯಾಣಿಕರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ರೈಲ್ವೆ ರಕ್ಷಣೆ ಪಡೆ ಮತ್ತು ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ದೇಶದ ಅತ್ಯಾಧುನಿಕ ಹಾಗೂ ಹೆಮ್ಮೆಯ ಹೈಡ್ರೋಜನ್ ರೈಲನ್ನು ಗುರಿಯಾಗಿಸಿಕೊಂಡು ಈ ರೀತಿಯ ಕಲ್ಲುತೂರಾಟ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೃತ್ಯಕ್ಕೆ ಕಾರಣರಾದ ಪುಂಡರನ್ನು ಸಿಸಿಟಿವಿ (CCTV) ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆ ಹಚ್ಚಲಾಗುತ್ತಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.


