ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ಬರೋಬ್ಬರಿ 100 ಅಡಿ ಎತ್ತರದಿಂದ ಅತೀ ದೊಡ್ಡ ಕೆರೆಗೆ ಹಾರಿದ್ದಾನೆ. ಅತೀ ಹೆಚ್ಚು ಲೈಕ್ಸ್, ನಿನ್ನ ಸಾಹಸಕ್ಕೆ ಮೆಚ್ಚಿದ್ದೇನೆ ಅನ್ನೋ ಕಮೆಂಟ್ಸ್‌ಗಾಗಿ ಈ ರೀತಿಯ ಸ್ಟಂಟ್ ಮಾಡಿದ್ದಾನೆ. ಆದರೆ ಈ ವಿಡಿಯೋ ಲೈಕ್ಸ್, ಕಮೆಂಟ್ ನೋಡಲು ಈಗ ಆತನೇ ಇಲ್ಲ.
ರಾಂಚಿ(ಮೇ.24) ರೀಲ್ಸ್ ಹುಚ್ಚಿಗೆ ಹಲವರು ಪ್ರಾಣ ಬಿಟ್ಟಿದ್ದಾರೆ. ಮತ್ತೆ ಹಲವರು ಇನ್ನೂ ನರಕ ಯಾತನೆ ಅನುಭವಿಸಿದ್ದಾರೆ. ಆದರೂ ರೀಲ್ಸ್ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ 18ರ ಹರೆಯದ ಯುವಕ ಬರೋಬ್ಬರಿ 100 ಅಡಿ ಎತ್ತರದಿಂದ ಅತೀ ದೊಡ್ಡ ಕೆರೆಗೆ ಹಾರಿದ್ದಾನೆ. ಇತ್ತ ಯುವಕನ ಹುಚ್ಚಾಟವನ್ನು ಗೆಳೆಯರು ಶೂಟ್ ಮಾಡಿದ್ದಾರೆ. ಆದರೆ ಗರಿಷ್ಠ ನೀರು, ಆಳದ ಕಾರಣ ಯುವಕ ಈಜಿ ದಡ ಸೇರಲು ಸಾಧ್ಯವಾಗಿಲ್ಲ. ಗೆಳೆಯರು ನೀರಿಗೆ ಹಾರಿ ರಕ್ಷಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ಘಟನೆ ಜಾರ್ಖಂಡ್‌ನ ಸಾಹೀಬ್‌ಗಂಜ್‌ನಲ್ಲಿ ನಡೆದಿದೆ.
ಮೃತನನ್ನು ತೌಸಿಫ್ ಎಂದು ಗುರುತಿಸಲಾಗಿದೆ. ಕಲ್ಲಿನ ಕ್ವಾರಿಯಿಂದ ನಿರ್ಮಾಣವಾಗಿರುವ ಬೃಹತ್ ಕೆರೆಯಲ್ಲಿ ಈ ರೀಲ್ಸ್ ಶೂಟಿಂಗ್ ನಡೆಸಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವಿಡಿಯೋ ಪೋಸ್ಟ್ ಮಾಡಿ ವೈರಲ್ ಆಗಲು ಹುಚ್ಚಾಟಕ್ಕೆ ಮುಂದಾಗಿದ್ದಾನೆ. ಒಂದಿಷ್ಟು ಗೆಳೆಯರು ಇದೇ ಕೆರೆಯಲ್ಲಿ ಈಜಾಡುತ್ತಿದ್ದರೆ, ಮತ್ತೆ ಕೆಲವರು ಈತನ ವಿಡಿಯೋ ಶೂಟ್ ಮಾಡಲು ಮುಂದಾಗಿದ್ದಾರೆ.
ಮೆಟ್ರೋ ರೈಲು ಹತ್ತುವ ರೀಲ್ಸ್ ಹುಚ್ಚಾಟದಲ್ಲಿ ಯುವತಿ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲೇ ಬಾಕಿ!
ಮೇಲಿನಿಂದ ಓಡಿ ಬಂದು ಬರೋಬ್ಬರಿ 100ಕ್ಕೂ ಹೆಚ್ಚು ಅಡಿ ಎತ್ತರಿಂದ ಕೆರೆಗೆ ಹಾರಿದ್ದಾನೆ. ಆದರೆ ಎತ್ತರ, ಹಾರಿದ ರಭಸಕ್ಕೆ ತೌಸಿಫ್‌ಗೆ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಈಜಿ ದಡ ಸೇರಲು ಸಾಧ್ಯವಾಗಿಲ್ಲ. ಕೆಲ ಹೊತ್ತಾದರೂ ತೌಸಿಫ್ ನೀರಿನ ಮೇಲೆ ಬಂದಿಲ್ಲ. ಆತಂಕಗೊಂಡ ಗೆಳೆಯರು ತೌಸಿಫ್ ಹುಡುಕು ಪ್ರಯತ್ನ ಮಾಡಿದ್ದಾರೆ. ಆದರೆ ತೌಸಿಫ್ ಸಿಗಲಿಲ್ಲ.
ಆತಂಕಗೊಂಡ ಗೆಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಈಜುಗಾರರನ್ನು, ರಕ್ಷಣಾ ತಂಡವನ್ನು ಕರೆಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. 5 ಗಂಟೆಗಳ ಬಳಿಕ ತೌಸಿಪ್ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೆಳೆಯರಿಗೂ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಈ ರೀತಿಯ ಜೀವಕ್ಕೆ ಅಪಾಯ ತರುವ ಹುಚ್ಚಾಟಕ್ಕೆ ಗೆಳೆಯರು ಸಾಥ್ ನೀಡಿದ ಕಾರಣ ಗೆಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಮನಗರ: ರೀಲ್ಸ್ ಮಾಡಲು ಹೋಗಿ ಮೂವರು ಬಾಲಕರು ನೀರಲ್ಲಿ ಮುಳುಗಿ ಸಾವು
ದುಸ್ಸಾಹಸಕ್ಕೆ ಜೀವ ಬಲಿಯಾಗಿದೆ. ಮೃತಪಟ್ಟ ಕಾರಣದಿಂದ ಈತನ ವಿಡಿಯೋ ವೈರಲ್ ಆಗಿದೆ. ಆದರೆ ಲೈಕ್ಸ್ ಕಮೆಂಟ್ಸ್ ನೋಡಲು ಇದೀಗ ತೌಸಿಫ್ ಇಲ್ಲ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಈ ರೀತಿಯ ಸಾಹಸದ ಮೂಲಕ ಜನಪ್ರಿಯರಾಗುವುದಿಲ್ಲ, ರೀಲ್ಸ್ ಹುಚ್ಚಿನಿಂದ ಹೊರಬನ್ನಿ ಎಂದು ಸಲಹೆ ನೀಡಿದ್ದಾರೆ.
