ಮುಂಬೈ(ಅ.18): ನಷ್ಟದ ಕಾರಣ ಈಗಾಗಲೇ ಮುಚ್ಚಲ್ಪಟ್ಟಿರುವ ಖಾಸಗಿ ವಲಯದ ಜೆಟ್‌ ಏರ್‌ವೇಸ್‌ ವಿಮಾನಯಾನ ಕಂಪನಿಗೆ ಮರುಜೀವ ನೀಡುವ ಮಹತ್ವದ ಸಾಲ ತೀರುವಳಿ ಕ್ರಮಗಳ ಯೋಜನೆಗೆ ‘ಜೆಟ್‌ ಏರ್‌ವೇಸ್‌ ಸಾಲಗಾರರ ಸಮಿತಿ‘ (ಸಿಇಸಿ), ಶನಿವಾರ ಅಂಗೀಕಾರ ನೀಡಿದೆ. ಒಂದು ವೇಳೆ ಈ ಪ್ರಸ್ತಾಪ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ ಜೆಟ್‌ ಏರ್‌ವೇಸ್‌ ಮತ್ತೆ ತನ್ನ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಜೆಟ್‌ ಏರ್‌ವೇಸ್‌ ಸುಮಾರು 8 ಸಾವಿರ ಕೋಟಿ ರು. ಸಾಲವನ್ನು ಬ್ಯಾಂಕ್‌ಗಳಿಗೆ ಕಟ್ಟಬೇಕಿದೆ. ಈ ಹಿನ್ನೆಲೆಯಲ್ಲಿ ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಸಾಲವನ್ನು ಹೇಗೆ ವಸೂಲಿ ಮಾಡಬೇಕು ಎಂಬ ಕ್ರಮಗಳ ಯೋಜನೆ ನೀಡಬಲ್ಲ ಕಂಪನಿಗಳಿಗೆ ಸಾಲಗಾರ ಬ್ಯಾಂಕ್‌ಗಳು ಎದುರು ನೋಡುತ್ತಿವೆ. ಇದರ ಅಂಗವಾಗಿ ಬ್ರಿಟನ್‌ನ ಕ್ಯಾಲ್ರಾಕ್‌ ಕ್ಯಾಪಿಟಲ್‌ ಹಾಗೂ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ) ಮೂಲದ ಉದ್ಯಮಿ ಮುರಾರಿಲಾಲ್‌ ಜಲನ್‌ ಅವರು ರೆಸಲ್ಯೂಶನ್‌ ಪ್ಲಾನ್‌ ಸಲ್ಲಿಸಿದ್ದವು.

ಪ್ರಸ್ತಾವದಲ್ಲಿ, ಹೊಸದಾಗಿ 1000 ಕೋಟಿ ರು. ಬಂಡವಾಳ ಹೂಡಿಕೆ, 6 ಹಳೆಯ ವಿಮಾನ ಮಾರಾಟ, ಸಾಲ ನೀಡಿದ ಕಂಪನಿಗಳಿಗೂ ಹೊಸ ಕಂಪನಿಯಲ್ಲಿ ಷೇರು ನೀಡುವ ಅಂಶಗಳಿವೆ.