ನವದೆಹಲಿ(ಫೆ.07): ಮದುವೆಯಲ್ಲಿ ವಧು-ವರರ ಫೋಟೋ ತೆಗೆಯುವುದೇ ಫೋಟೋಗ್ರಾಫರ್‌ ಕೆಲಸ. ಆದರೆ, ಇಲ್ಲೊಬ್ಬ ಫೋಟೋಗ್ರಾಫರ್‌ ವಧುವಿನ ತೀರಾ ಹತ್ತಿರಕ್ಕೆ ಹೋಗಿ ಫೋಟೋ ತೆಗೆದ ಕಾರಣಕ್ಕೆ ವರನ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ವಧು ವರರ ಫೋಟೋ ಕ್ಲಿಕ್ಕಿಸುತ್ತಿದ್ದ ಫೋಟೋಗ್ರಾಫರ್ ನೊಡ ನೋಡುತ್ತಿದ್ದಂತೆಯೇ ವರನನ್ನು ಬದಿಗೆ ತಳ್ಳಿ ವಧುವಿನ ಫೋಟೋ ತೆಗೆಯುತ್ತಾ ನಿಂತಿದ್ದಾನೆ. ಸಾಲದೆಂಬಂತೆ ತೀರಾ ಹತ್ತಿರ ಹೋಗಿ ಫೋಟೋ ಕ್ಲಿಕ್ಕಿಸಲಾರಂಭಿಸಿದ್ದಾನೆ.

ಹೀಗಿರುವಾಗ ಪಕ್ಕದಲ್ಲಿ ನಿಂತು ನೋಡುವಷ್ಟು ನೋಡಿದ ವರ, ಫೋಟೋಗ್ರಾಫರ್‌ನ ಬೆನ್ನಿಗೆ ಸರಿಯಾಗಿ ಒಂದು ಬಾರಿಸಿ, ಕೆಳಗೇ ನಿಂತು ಫೋಟೋ ತೆಗೆಯಬಾರದಾ? ಎಂದು ಪ್ರಶ್ನಿಸಿ ವೇದಿಕೆಯಿಂದ ಕೆಳಗೆ ಕಳುಹಿಸಿದ್ದಾನೆ. ಇದನ್ನು ನೋಡಿ ವಧು ಬಿದ್ದು ಬಿದ್ದು ನಕ್ಕಿದ್ದಾಳೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.