ಪಹರಿಗಳಿಗೆ ಮೀಸಲಾತಿ ನೀಡುವುದಕ್ಕೆ ಗುಜ್ಜಾರರು ಹಾಗೂ ಬಕರ್‌ವಾಲ್‌ಗಳಿಗೆ ಕೆಲವರು ಪ್ರಚೋದನೆ ನಡೆಸುವ ಪ್ರಯತ್ನ ಮಾಡಿದರು. ಆದರೆ, ಇದು ಸಾಧ್ಯವಾಗಲಿಲ್ಲ ಎಂದು ಜಮ್ಮುವಿನ ರಜೌರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಜಮ್ಮು ಕಾಶ್ಮೀರದ ಪಹರಿ ಸಮುದಾಯಕ್ಕೆ ಶೀಘ್ರದಲ್ಲೇ ಎಸ್‌ಟಿ ಸಮುದಾಯದಡಿ ಮೀಸಲಾತಿ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಜಮ್ಮು ಕಾಶ್ಮೀರದ ರಜೌರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದ್ದು, ಈ ವೇಳೆ ಗುಜ್ಜಾರರು ಹಾಗೂ ಬಕರ್‌ವಾಲ್ ಸಮುದಾಯಗಳ ಜತೆಗೆ ಪಹರಿ ಸಮುದಾಯಕ್ಕೂ ಮೀಸಲಾತಿ ಘೋಷಿಸಿದ್ದಾರೆ. ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀಡಲಾಗುತ್ತದೆ ಪಹರಿಗಳಿಗೆ ಎಸ್‌ಟಿ ಮೀಸಲಾತಿ ದೊರೆತರೆ, ದೇಶದಲ್ಲಿ ಇದೇ ಮೊದಲ ಬಾರಿಗೆ ಭಾಷಾವಾರು ಗುಂಪೊಂದಕ್ಕೆ ಭಾರತದಲ್ಲಿ ಮೀಸಲಾತಿ ದೊರೆತಂತಾಗುತ್ತದೆ. ಇನ್ನು, ಈ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. 

ಲೆಫ್ಟಿನೆಂಟ್‌ ಗವರ್ನರ್ ರಚನೆ ಮಾಡಿದ್ದ ಸಮಿತಿ ವರದಿ ಕಳಿಸಿದ್ದು, ಅವರು ಗುಜ್ಜಾರ್‌, ಬಕರ್‌ವಾಲ್‌ ಹಾಗೂ ಪಹರಿ ಸಮುದಾಯಗಳಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದೆ. ಅದನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಅಮಿತ್‌ ಶಾ ರ್ಯಾಲಿಯಲ್ಲಿ ಘೋಷಿಸಿದ್ದಾರೆ. ಮುಂದಿನ ವರ್ಷ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈ ಮೂಲಕ ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ಆರಂಭಿಸಿದೆ.

ಇದನ್ನು ಓದಿ: ಜಮ್ಮು ವೈಷ್ಣೋದೇವಿ ದೇವಾಲಯದಲ್ಲಿ Amit Shah ಪ್ರಾರ್ಥನೆ: Video ನೋಡಿ

ಇನ್ನು, ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ಬಳಿಕ ಅಥವಾ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕವಷ್ಟೇ ಈ ಮೀಸಲಾತಿ ಸಾದ್ಯವಾಗಿದೆ ಎಂದು ಅಮಿತ್‌ ಶಾ ಹೇಳಿಕೊಂಡಿದ್ದಾರೆ. ಈಗ ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಪಹರಿಗಳು ಸಹ ತಮ್ಮ ಹಕ್ಕು ಪಡೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇನ್ನು, ಪಹರಿಗಳಿಗೆ ಮೀಸಲಾತಿ ನೀಡುವುದಕ್ಕೆ ಗುಜ್ಜಾರರು ಹಾಗೂ ಬಕರ್‌ವಾಲ್‌ಗಳಿಗೆ ಕೆಲವರು ಪ್ರಚೋದನೆ ನಡೆಸುವ ಪ್ರಯತ್ನ ಮಾಡಿದರು. ಆದರೆ, ಇದು ಸಾಧ್ಯವಾಗಲಿಲ್ಲ ಎಂದೂ ಅಮಿತ್ ಶಾ ತಿಳಿಸಿದ್ದಾರೆ. ಅಲ್ಲದೆ, 35 ಎ ಹಾಗೂ 370ನೇ ವಿಧಿಯನ್ನು ರದ್ದು ಮಾಡಿದ ಕ್ರಮಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಬೇಕೆಂದೂ ಸಭೆಯಲ್ಲಿ ನೆರೆದಿದ್ದ ಜನರಿಗೆ ಕೇಂದ್ರ ಗೃಹ ಸಚಿವರು ಮನವಿ ಮಾಡಿಕೊಂಡಿದ್ದಾರೆ.

ಅಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ 2 ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆಯಾಗಿದ್ದು, ಇದರ ನಂತರ ಮುಂದಿನ ವರ್ಷ ಮೊದಲ ಬಾರಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. 
ಇನ್ನೊಂದೆಡೆ, ಇಲ್ಲಿ ಆಳಿದ 3 ಕುಟುಂಬಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಮುಕ್ತಿ ನೀಡಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದೂ ಜಮ್ಮುವಿನ ರಜೌರಿಯಲ್ಲಿ ಅಮಿತ್ ಶಾ ಹೇಳಿದ್ದಾರೆ. ಈ ವೇಳೆ, ಆ 3 ಕುಟುಂಬಗಳ ಹೆಸರು ಹೇಳದಿದ್ದರೂ, ಅವರು ಪರೋಕ್ಷವಾಗಿ ಪಿಡಿಪಿಯ ಮುಫ್ತಿ ಕುಟುಂಬ, ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಅಬ್ದುಲ್ಲಾ ಕುಟುಂಬ ಹಾಗೂ ಕಾಂಗ್ರೆಸ್‌ನ ಗಾಂಧಿ ಕುಟುಂಬದ ವಿರುದ್ಧ ಈ ಹೇಳಿಕೆ ನೀಡಿದ್ದಾರೆ ಎಂದು ಅಂದಾಜಿಸಬಹುದು. 

ಇದನ್ನೂ ಓದಿ: ಬಿಹಾರಕ್ಕೆ ಭೇಟಿ ನೀಡಲು ಅಮಿತ್ ಶಾಗೆ ನಿತೀಶ್ ಮತ್ತು ಲಾಲು ಅವರಿಂದ ಪಾಸ್‌ಪೋರ್ಟ್‌ ಅಗತ್ಯವಿಲ್ಲ!

2018 ರಲ್ಲಿ ಜಮ್ಮು ಕಾಶ್ಮೀರ ರಾಜ್ಯವಾಗಿದ್ದಾಗ ಪಿಡಿಪಿಯೊಂದಿಗೆ ಸೇರಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಆ ವೇಳೆಯೂ ಮೆಹಬೂಮಾ ಮುಫ್ತಿ ಅಲ್ಲಿನ ಮುಖ್ಯಮಂತ್ರಿಯಾಗಿದ್ದರು. ಇನ್ನು, ನ್ಯಾಷನಲ್‌ ಕಾನ್ಫರೆನ್ಸ್‌ ಸಹ ಕೇಂದ್ರದ ಎನ್‌ಡಿಎ ಸರ್ಕಾರದ ಭಾಗವಾಗಿತ್ತು. ಇನ್ನು, ಈ ಹಿಂದೆ ಕೇಂದ್ರ ಸರ್ಕಾರ ಅಭಿವೃದ್ಧಿಗೆ ಕಳಿಸಿದ ಹಣವನ್ನು ಕೆಲವರು ಮಾತ್ರ ಬಳಸಿಕೊಳ್ಳುತ್ತಿದ್ದರು. ಆದರೆ, ಈಗ ಸಂಪೂರ್ಣ ಹಣವನ್ನು ಅಭಿವೃದ್ಧಿಗಾಗಿಯೇ ಮೀಸಲಿಡಲಾಗುತ್ತಿದೆ. ಅಲ್ಲದೆ, ಮೋದಿ ಸರ್ಕಾರ ಉಗ್ರರ ವಿರುದ್ಧ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮದಿಂದಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಸಾಕಷ್ಟು ಉತ್ತಮವಾಗಿದೆ ಎಂದೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮುವಿನ ರಜೌರಿಯಲ್ಲಿ ಹೇಳಿಕೊಂಡಿದ್ದಾರೆ.