ನವದೆಹಲಿ(ಆ.08): ಜಮ್ಮ ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗರ್ವನರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗಿರೀಶ್ ಚಂದ್ರ ಮುರ್ಮು ಇದೀಗ ಕಂಪ್ಟ್ರೋಲರ್ ಆಡಿಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. 1985ರ ಬ್ಯಾಚ್‌ನ ಗುಜರಾತ್ ಕೆಡರ್ IAS ಅಧಿಕಾರಿ ಗಿರೀಶ್ ಚಂದ್ರ ಇದೀಗ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹ ಯಾರು?

ಕಳೆದ 30 ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿರುವ 1978ರ ಬ್ಯಾಚ್ IAS ಅಧಿಕಾರಿ ರಾಜೀವ್ ಮೆಹೆರಿಶಿ ಇಂದು( ಆಗಸ್ಟ್ 07)ನಿವೃತ್ತಿ ಹೊಂದಿದ್ದಾರೆ. ರಾಜಸ್ಥಾನ ಕೇಡರ್ IAS ಅಧಿಕಾರಿಯಾಗಿರುವ ರಾಜೀವ್, ಗೃಹ ಕಾರ್ಯದರ್ಶಿಯಾಗಿದ್ದರು. 2017ರ ಸೆಪ್ಟಂಬರ್‌ನಲ್ಲಿ ರಾಜೀವ್ ಮೆಹೆರಿಶಿ ಅವರನ್ನು  ಕಂಪ್ಟ್ರೋಲರ್ ಆಡಿಟರ್ ಜನರಲ್ ಆಗಿ ನೇಮಕ ಮಾಡಲಾಗಿತ್ತು. ಇದೀಗ ನಿವೃತ್ತಿಯಾಗಿರುವ ಕಾರಣ,  ಈ ಸ್ಥಾನಕ್ಕೆ ಗಿರೀಶ್ ಚಂದ್ರ ಮುರ್ಮು ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ನಿಲ್ಲಲ್ಲ' ಓಮರ್ ಶಪಥ. 

ಜಮ್ಮ ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ಒಂದು ವರ್ಷವಾದ ಬೆನ್ನಲ್ಲೇ ಗಿರೀಶ್ ಚಂದ್ರ ಮುರ್ಮು ದಿಢೀರ್ ರಾಜೀನಾಮೆ ನೀಡಿದ್ದರು. ಜಿಸಿ ಮುರ್ಮು ರಾಜೀನಾಮೆ ಅಚ್ಚರಿಗೆ ಕಾರಣವಾಗಿತ್ತು. ಮುರ್ಮು ರಾಜೀನಾಮೆಯಿಂದ ತೆರವಾಗಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹ ಅವರನ್ನು ನೇಮಕ ಮಾಡಲಾಗಿದೆ.

ಗಿರೀಶ್ ಚಂದ್ರ ಮುರ್ಮು ಪರಿಚಯ:
ನವೆಂಬರ್ 21, 1959ರಲ್ಲಿ ಒಡಿಶಾದ ಮಯೂರ್ಭಾಂಜ್ ಜಿಲ್ಲೆಯ ಬೆಟ್ನೋಟಿ ಗ್ರಾಮದಲ್ಲಿ ಹುಟ್ಟಿದ ಗಿರೀಶ್ ಚಂದ್ರ ಮುರ್ಮು, ಉತ್ಕಲ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರದಲ್ಲಿ ಎಂಎ ಪದವಿಯನ್ನು ಪಡೆದಿದ್ದಾರೆ. ಬರ್ಮಿಂಗ್‌ಹ್ಯಾಮ್ ಯುನಿವರ್ಸಿಟಿಯಲ್ಲಿ MBA ಪದವಿ ಪಡೆದಿದ್ದಾರೆ.

1985ರಲ್ಲಿ ಗುಜರಾತ್ ಕೆಡರ್ IAS ಅಧಿಕಾರಿಯಾದ ಗಿರೀಶ್ ಚಂದ್ರ ಮುರ್ಮು ಗುಜರಾತ್ ಸರ್ಕಾರದ ಸೇವೆಯಲ್ಲಿ ತೊಡಗಿಸಿಕೊಂಡರು. 2001ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ಗಿರೀಶ್ ಚಂದ್ರ ಮುರ್ಮು ರಿಲೀಫ್ ಕಮಿಶನರ್ ಆಗಿ ನೇಮಕಗೊಂಡರು. 2004ರಲ್ಲಿ ಗುಜರಾತ್ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಗಿರೀಶ್ ಚಂದ್ರ ಮುರ್ಮು ಅವರನ್ನು ನೇಮಕ ಮಾಡಲಾಯಿತು.

ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಮುರ್ಮು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅಮಿತ್ ಶಾ ನಾಯಕತ್ವದಲ್ಲಿ ಮುರ್ಮು ಅವರ ಸಾಧನೆಯನ್ನು ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಶ್ಲಾಘಿಸಿದ್ದರು. ಅಮಿತ್ ಶಾ ಜೈಲು ಸೇರಿದ್ದಾಗ 2002 ಗುಜರಾತ್ ಗಲಭೆ ಪ್ರಕರಣವನ್ನು ನಿಭಾಯಿಸಿದ್ದರು. 

2019ರ ಆಗಸ್ಟ್ 5 ರಂದು ಜಮ್ಮ ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಯಿತು. ಈ ವೇಳೆ ಗಿರೀಶ್ ಚಂದ್ರ ಮುರ್ಮು ಅವರನ್ನು ಜಮ್ಮ ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಯಿತು. ಜಮ್ಮ ಕಾಶ್ಮೀರದ ಮೊದಲ ಗರ್ವನರ್ ಅನ್ನೋ ಹೆಗ್ಗಳಿಕೆಗೆ ಗಿರೀಶ್ ಚಂದ್ರ ಮುರ್ಮು ಪಾತ್ರರಾಗಿದ್ದಾರೆ. 

ಇದೀಗ ಗಿರೀಶ್ ಚಂದ್ರ ಅವರನ್ನು ಭಾರತದ 14ನೇ   ಕಂಪ್ಟ್ರೋಲರ್ ಆಡಿಟರ್ ಜನರಲ್ ಆಗಿ ನೇಮಕ ಮಾಡಲಾಗಿದೆ.