Asianet Suvarna News Asianet Suvarna News

370 ರದ್ದಾದ ಬಳಿಕ ಮಹತ್ತರ ಬದಲಾವಣೆ; ಕಾಶ್ಮೀರದಲ್ಲಿ ಮೊದಲ ಕ್ಯಾಬ್ ಸರ್ವೀಸ್!

  • ಕಾಶ್ಮೀರದಲ್ಲಿ ಪ್ರತ್ಯೇಕ ಕ್ಯಾಬ್ ಸರ್ವೀಸ್ ಅತ್ಯಂತ ಯಶಸ್ವಿ
  • ಎಂಜನೀಯರ್ ಕಂಡ ಬಹುದೊಡ್ಡ ಕನಸು ನನಸು
  • ಒಲಾ, ಉಬರ್‌ನಂತೆ ಕಾಶ್ಮೀರದಲ್ಲಿ  ನೋವಾ ಕ್ಯಾಬ್ ಸರ್ವೀಸ್
Jammu and Kashmir witness First cab service facility after Article 370 abrogation ckm
Author
Bengaluru, First Published Aug 30, 2021, 5:48 PM IST

ಕಾಶ್ಮೀರ(ಆ.30): ಜಮ್ಮು ಮತ್ತು ಕಾಶ್ಮೀರ ನಿಧಾನವಾಗಿ ಉಗ್ರರ ಕರಿನೆರಳಿನಿಂದ ಮುಕ್ತವಾಗತೊಡಗಿದೆ. ಸದಾ ಗುಂಡಿನ ಶಬ್ದದಿಂದಲೇ ಮಾತನಾಡುತ್ತಿದ್ದ ಕಣಿವೆ ರಾಜ್ಯ ಇದೀಗ ಹೊಸ ಯುಗದಲ್ಲಿ ಸಂಚರಿಸುತ್ತಿದೆ. ಹಾಗಂತ ಕಾಶ್ಮೀರ ಸಂಪೂರ್ಣ ಶಾಂತವಾಗಿದೆ ಎಂದಲ್ಲ. ಈ ಹಿಂದಿನ ಆತಂಕ ಈಗಿಲ್ಲ ಅನ್ನೋದೆ ಸಮಾಧಾನ. ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಮಹತ್ತರ ಬದಲಾವಣೆ ಕಂಡಿದೆ. ಇದಕ್ಕೆ ಪ್ರತ್ಯೇಕ್ ಕ್ಯಾಬ್ ಸರ್ವೀಸ್ ಕೂಡ ಸೇರಿಕೊಂಡಿದೆ.

ಮಹಿಳೆಯರಿಂದ ಮಹಿಳೆಯರಿಗಾಗಿ ಟ್ಯಾಕ್ಸಿ ಸೇವೆ; ಸುರಕ್ಷತೆಗೆ ಆದ್ಯತೆ!

ಆರ್ಟಿಕಲ್ 370 ರದ್ದಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.  ಶ್ರೀಗನರದ ಯುವ ಎಂಜಿನೀಯರ್ ಕಾಶ್ಮೀರದಲ್ಲಿ ಪ್ರತ್ಯೇಕ ಕ್ಯಾಬ್ ಸರ್ವೀಸ್ ಆರಂಭಿಸಿ ಯಶಸ್ಸು ಕಂಡಿದ್ದಾನೆ. ಓಲಾ, ಉಬರ್ ಮಟ್ಟದಲ್ಲಿ ಇಲ್ಲದಿದ್ದರೂ, ಅದೇ ರೀತಿಯ ಕ್ಯಾಬ್ ಸರ್ವೀಸ್ ಹಾಗೂ ಗುಣಮಟ್ಟದ ಸೇವೆ ಕಣಿವೆ ರಾಜ್ಯದ ಜನರಿಗೆ ಸಿಗುತ್ತಿದೆ. ಕಾಶ್ಮೀರದಲ್ಲಿ ಆರಂಭಗೊಂಡು ಯಶಸ್ಸು ಸಾಧಿಸಿದ ನೋವಾ ಕ್ಯಾಬ್ ಸರ್ವೀಸ್ ಹಿಂದೆ ಎಂಜನಿಯರ್ ಯುವಕನ ಬಹುದೊಡ್ಡ ಕನಿಸಿದೆ.

29 ವರ್ಷದ ಶ್ರೀನಗರದ ಎಂಜನೀಯರ್ ಅಬ್ದುಲ್ ಮಜೀದ್ ಜರ್ಗರ್ ಈ ನೋವಾ ಕ್ಯಾಬ್ ಹಿಂದಿನ ರೂವಾರಿ. 2019ರಲ್ಲಿ ಕ್ಯಾಬ್ ಸರ್ವೀಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದ. ಆದರೆ ಆರ್ಟಿಕಲ್ 370 ರದ್ದತಿ ಹಾಗೂ ಇಂಟರ್ನೆಟ್ ಸೇವೆ ಮೇಲಿನ ನಿರ್ಬಂಧದಿಂದ ಕ್ಯಾಬ್ ಸರ್ವೀಸ್ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 2021ರಲ್ಲಿ ಮಜೀದ್ ನೋವಾ ಕ್ಯಾಬ್ ಸರ್ವೀಸ್ ಆರಂಭಿಸಿ ಇದೀಗ ಯಶಸ್ಸು ಕಂಡಿದ್ದಾನೆ.

ಕಾಶ್ಮೀರದಲ್ಲಿ ಪ್ರಯಾಣ ಸ್ವಂತ ವಾಹನವಿದ್ದರಿವರಿಗೆ ಒಳಿತು ಅನ್ನೋ ಮಾತಿದೆ. ಆದರೆ ಸ್ವಂತ ವಾಹನ ಖರೀದಿ ಎಲ್ಲರಿಗೂ ಸಾಧ್ಯವಿಲ್ಲ. ಬಾಡಿಗೆ ವಾಹನ ಪ್ರಯಾಣ ಮತ್ತಷ್ಟು ದುಬಾರಿ. ಹೀಗಾಗಿ ಮಜೀದ್ ಆರಂಭಿಸಿದ ನೋವಾ ಕ್ಯಾಬ್ ಸರ್ವೀಸ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸದ್ಯ 100ಕ್ಕೂ ಹೆಚ್ಚು ಕಾರುಗಳು ನೋವಾ ಕ್ಯಾಬ್ ಸರ್ವೀಸ್ ನೀಡುತ್ತಿದೆ.

18 ತಿಂಗಳ ಬಳಿಕ ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಆರಂಭ!

ಮಾರುತಿ ಇಕೋ, ಇಟಿಯೋಸ್, ಸ್ಯಾಂಟ್ರೋ, ವ್ಯಾಗನ್ಆರ್ ಸೇರಿದಂತೆ ಹಲವು ಕಾರುಗಳು, ಟ್ಯಾಕ್ಸಿ ಜೊತೆ ಒಪ್ಪಂದ ಮಾಡಿಕೊಂಡು ಸೇವೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಓಲಾ ರೀತಿ ಆಟೋ ಸೇವೆಯೂ ಲಭ್ಯವಾಗಲಿದೆ. ಕಳೆದ ಹಲವು ದಶಕಗಳಿಂದ ಕಾಶ್ಮೀರ ಜನರು ಪಡುತ್ತಿರುವ ಸಂಕಷ್ಟ ಎಲ್ಲರಿಗೂ ತಿಳಿದಿದೆ.  ಇದೀಗ ಕ್ಯಾಬ್ ಸರ್ವೀಸ್ ವಿಸ್ತರಿಸಲು ಹಲವರು ಮನವಿ ಮಾಡಿದ್ದಾರೆ ಎಂದು ಮಜೀದ್ ಹೇಳಿದ್ದಾರೆ.

ಭದ್ರತೆಯ ಕಾರಣದಿಂದ ಕಾಶ್ಮೀರದಲ್ಲಿ ರಾತ್ರಿ ಪ್ರಯಾಣ ಅಸಾಧ್ಯ. ಹೀಗಾಗಿ ಸದ್ಯ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆ ವರೆಗೆ ನೋವಾ ಕ್ಯಾಬ್ ಸರ್ವೀಸ್ ಲಭ್ಯವಿದೆ. ಇದೀಗ ಜಮ್ಮು ಕಾಶ್ಮೀರ ಆಡಳಿತ ಮಂಡಳಿ ಹಾಗೂ ಭದ್ರತಾ ಅಧಿಕಾರಿಗಳ ಜೊತೆ ಸಮಾಲೋಚನ ನಡೆಸಿ ದಿನದ 24 ಗಂಟೆಯೂ ಸೇವೆ ನೀಡಲು ನೋವಾ ಮುಂದಾಗಿದೆ.

ಮಹಿಳೆಯರಿಗೆ ಸುರಕ್ಷತೆ:
ಆರ್ಟಿಕಲ್ 370 ರದ್ದಾದ ಬಳಿಕ, ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸೇವೆಗೆ ಮತ್ತಷ್ಟು ವೇಗ ಸಿಕ್ಕಿದೆ. ಇದರಿಂದ ಜನರು ಸ್ಮಾರ್ಟ್ ಫೋನ್ ಬಳಕೆ ಸಾಧ್ಯವಾಗುತ್ತಿದೆ. ಇದು ನೋವಾ ಕ್ಯಾಬ್ ಸರ್ವೀಸ್‌‌ಗೆ ನೆರವಾಗಿದೆ. ಮಹಿಳೆಯರಿಗೆ ಗರಿಷ್ಠ ಸುರಕ್ಷತೆ ನೀಡುವುದು ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಎಲ್ಲಾ ತಂತ್ರಜ್ಞಾನ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವು ಪಡೆದುಕೊಳ್ಳಲಾಗಿದೆ ಎಂದು ಮಜೀದ್ ಹೇಳಿದ್ದಾರೆ.

ಮಹಿಳೆಯರ ಸುರಕ್ಷತೆಗೆ ನೋವಾ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಮಹಿಳೆಯರು ಕ್ಯಾಬ್ ಬುಕ್ ಮಾಡಿದಾಗ ಅವರ ಫೋನ್ ನಂಬರ್, ಮಾಹಿತಿ ಕ್ಯಾಬ್ ಚಾಲಕನಿಗೆ ಲಭ್ಯವಾಗುವಿದ್ದಿಲ್ಲ. ಕೇವಲ ರೂಟ್ ಮ್ಯಾಪ್ ಮಾಹಿತಿ ಮಾತ್ರ ಚಾಲಕನಿಗೆ ಲಭ್ಯವಾಗಲಿದೆ. 

ಕೊರೋನಾದಿಂದ ಚಾಲಕ ಉದ್ಯೋಗ ಕಳೆದುಕೊಂಡ ಹಲವರು ಇದೀಗ ನೋವಾ ಕ್ಯಾಬ್ ಜೊತೆ ಬುಕ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಮತ್ತಷ್ಟು ಮಂದಿಯನ್ನು ಉದ್ಯೋಗಕ್ಕಾಗಿ ನೇಮಕ ಮಾಡಲಿದ್ದೇವೆ. ಹೆಚ್ಚಿನ ಕ್ಯಾಬ್ ಸೇವೆ ನೀಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದು ಮಜೀದ್ ಹೇಳಿದ್ದಾರೆ.

ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಜೀದ್ ಕಾಶ್ಮೀರದಲ್ಲಿ ಕ್ಯಾಬ್ ಸರ್ವೀಸ್ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಕಾಶ್ಮೀರದಲ್ಲಿನ ಬದಲಾವಣೆ ಗಾಳಿ ಈ ಉದ್ಯಮ ಆರಂಭಿಸಲು ಸಾಧ್ಯವಾಯಿತು ಎಂದು ಮಜೀದ್ ಹೇಳಿದ್ದಾರೆ.
 

Follow Us:
Download App:
  • android
  • ios