ಜಮ್ಮು(ಜೂ.23): ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಸೇನಾ ಯೋಧರೊಬ್ಬರು ಹುತಾತ್ಮರಾದ ಘಟನೆ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದೆ. ಇದರೊಂದಿಗೆ ಈ ತಿಂಗಳು ಪಾಕಿಸ್ತಾನದ ದಾಳಿಗೆ ಭಾರತದ ನಾಲ್ವರು ಯೋಧರು ಬಲಿಯಾದಂತಾಗಿದೆ.

ಇನ್ನೊಂದೆಡೆ ಪಾಕಿಸ್ತಾನ ಸೇನೆ ಹಾಗೂ ಅರೆಸೇನಾ ಪಡೆಯ ‘ರೇಂಜರ್‌’ ಯೋಧರು ಭಾರತದ ಕೃಷ್ಣಾಘಾಟಿ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಹಾಗೂ ಕಠೂವಾ ಜಿಲ್ಲೆಯ ಹೀರಾನಗರ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಕೂಡ ದಾಳಿ ನಡೆಸಿದ್ದಾರೆ. ಇದಕ್ಕೆ ಭಾರತದ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ‘ರಜೌರಿ ಜಿಲ್ಲೆಯ ಗಡಿ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ಅಪ್ರಚೋದಿತ ದಾಳಿ ನಡೆಸಿದಾಗ ಹವಿಲ್ದಾರ್‌ ದೀಪಕ್‌ ಕರ್ಕಿ ಗಾಯಗೊಂಡರು. ನಂತರ ಅವರು ಸಾವನ್ನಪ್ಪಿದರು’ ಎಂದು ಸೇನೆಯ ವಕ್ತಾರರು ಹೇಳಿದ್ದಾರೆ.

ಆದರೆ ಬೆಳಗ್ಗೆ 5.30ಕ್ಕೆ ಆರಂಭವಾದ ಈ ದಾಳಿಗೆ ಭಾರತದ ಯೋಧರು ದಿಟ್ಟ ಉತ್ತರ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ ಪಾಕಿಸ್ತಾನದ ಕಡೆ ಯಾವುದೇ ಸಾವು ನೋವು ಸಂಭವಿಸದ ಮಾಹಿತಿ ಸಿಕ್ಕಿಲ್ಲ. ಈ ವರ್ಷ ಜೂನ್‌ 10ರವರೆಗೆ ಪಾಕಿಸ್ತಾನ 2027 ಕದನ ವಿರಾಮ ಉಲ್ಲಂಘಿಸಿದೆ.