ಶ್ರೀನಗರ(ಜೂ. 20): ಭಾರತ ಹಾಗೂಪಾಕಿಸ್ತಾನದ ಗಡಿ ಭಾಗ ಜಮ್ಮುಕಾಶ್ಮೀರದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನದ ಡ್ರೋನ್​ನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಶನಿವಾರ ಹೊಡೆದುರುಳಿಸಿದ್ದಾರೆ. ಕತುವಾ ಜಿಲ್ಲೆಯಲ್ಲಿ ಹಾರಾಡುತ್ತಿದ್ದ ಡ್ರೋನ್‌ ಮೇಲೆ ಗುಂಡು ಹಾರಿಸಿ ಹೊಡೆದುರುಳಿಸಿದ್ದು, ಇದಕ್ಕೆ ಅಳವಡಿಸಲಾಗಿದ್ದ ಶಸ್ತ್ತಾಸ್ತ್ರಗಳನ್ನು BSF ವಶಪಡಿಸಿಕೊಂಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

24 ತಾಸಿನಲ್ಲಿ 8 ಭಯೋತ್ಪಾದಕರ ಹತ್ಯೆ, ಮಸೀದಿಗೆ ಧಕ್ಕೆಯಾದಗದಂತೆ ಕಾರ್ಯಾಚರಣೆ!

ಕತುವಾ ಜಿಲ್ಲೆಯ ಹಿರಾನಗರ ತಾಲ್ಲೂಕಿನ ರಾತುವಾ ಗ್ರಾಮದಲ್ಲಿರುವ ಫಾರ್ವರ್ಡ್ ಪೋಸ್ಟ್‌ನಲ್ಲಿ ಇಂದು ಮುಂಜಾನೆ 5.10ಕ್ಕೆ ಈ ಘಟನೆ ನಡೆದಿದೆ. ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಡ್ರೋನ್​ನ್ನು ಪಾನ್ಸಾರ್​ ಪೋಸ್ಟ್ ಸಮೀಪ ಗಸ್ತು ತಿರುಗುತ್ತಿದ್ದ ಬಿಎಸ್​ಎಫ್​ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಶಸ್ತ್ತಾಸ್ತ್ರ ಸಾಗಾಣೆ ಮತ್ತೆ ಪತ್ತೆದಾರಿಕೆಗೆ ಇದನ್ನು ಬಳಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ

ಹಿರಾನಗರ ಸೆಕ್ಟರ್‌ನ ಕತುವಾ ಪ್ರದೇಶದಲ್ಲಿ ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್​ನತ್ತ 19 ಬೆಟಾಲಿಯನ್‌ನ BSF​ ಪೆಟ್ರೋಲಿಂಗ್ ತಂಡ 9 ಬಾರಿ ಫೈರಿಂಗ್​ ಮಾಡಿದ ಬಳಿಕ, ಅದು ಕೆಳಗೆ ಬಿದ್ದಿದೆ.