ಶ್ರೀನಗರ(ಜೂ.20): ಕಾಶ್ಮೀರದ ಪುಲ್ವಾಮಾ ಹಾಗೂ ಶೋಪಿಯಾನ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 24 ತಾಸುಗಳ ಅವಧಿಯಲ್ಲಿ 8 ಜೈಷ್‌-ಎ-ಮೊಹಮ್ಮದ್‌ ಹಾಗೂ ಹಿಜ್ಬುಲ್‌ ಮುಜಾಹಿದೀನ್‌ ಉಗ್ರರನ್ನು ಭದ್ರತಾ ಪಡೆಗಳು ಸಂಹಾರ ಮಾಡಿವೆ. ಪುಲ್ವಾಮಾದಲ್ಲಿ ಉಗ್ರರು ಮಸೀದಿಯ ಅಡಗಿದ್ದರೂ ಮಸೀದಿಯ ಪಾವಿತ್ರ್ಯ ರಕ್ಷಿಸಿ ಅವರನ್ನು ಸದೆಬಡಿದಿರುವುದು ಗಮನಾರ್ಹ.

ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ನಡೆದ ಚಕಮಕಿ ಅಂತ್ಯಗೊಂಡಿದ್ದು, 3 ಉಗ್ರರನ್ನು ಸಾಯಿಸಲಾಗಿದೆ. ಶೋಪಿಯಾನ್‌ನಲ್ಲಿ 5 ಉಗ್ರರನ್ನು ಸದೆಬಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ನಿವಾಸಿಗಳಿಗೆ ಭಯೋತ್ಪಾದನೆ ಸಾಕಾಗಿದೆ; ಸೇನಾ ಮುಖ್ಯಸ್ಥ!

‘ಅವಂತಿಪೋರಾದ ಮೀಜ್‌ ಗ್ರಾಮದ ಜಾಮಿಯಾ ಮಸೀದಿಯಲ್ಲಿ ಉಗ್ರರು ಅಡಗಿದ ಮಾಹಿತಿ ಅರಿತು ಭದ್ರತಾ ಪಡೆಗಳು ದಾಳಿ ನಡೆಸಿದವು. ಮಸೀದಿಯ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ಗನ್‌ ಅಥವಾ ಬಾಂಬ್‌ ಬಳಸದೇ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದೆವು. ಆಗ ವಶಕ್ಕೆ ಸಿಕ್ಕ 3 ಉಗ್ರರನ್ನು ಸದೆಬಡಿಯಲಾಯಿತು. ಮಸೀದಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಅಷ್ಟೊಂದು ವೃತ್ತಿಪರ ಕಾರ್ಯಾಚರಣೆ ನಡೆಸಲಾಯಿತು’ ಎಂದು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನೊಂದೆಡೆ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮುನಂದ್‌ ಪ್ರದೇಶದಲ್ಲಿ ಗುರುವಾರ ಒಬ್ಬ ಹಾಗೂ ಶುಕ್ರವಾರ ನಾಲ್ವರನ್ನು ಸಾಯಿಸಲಾಗಿದೆ. ಚಕಮಕಿ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.