ಪಾಟ್ನಾ[ಜ.05]: ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅವರ ದೇಹದಿಂದ ಪದೇ ಪದೇ ರಕ್ತ ತೆಗೆಯಬೇಕಾದ ಅನಿವಾರ್ಯತೆ ಬಂದೊದಗಿದೆ,. ಹೀಗಾಗದಿದ್ದಲ್ಲಿ ಅವರು ಹೃದಯಾಘಾತ ಅಥವಾ ಸ್ಟ್ರೋಕ್ ಸಂಭವಿಸುವ ಸಾಧ್ಯತೆಗಳಿವೆ. ಆಜಾದ್ ವೈದ್ಯರು ಟ್ವೀಟ್ ಮಾಡುತ್ತಾ ಈ ಕುರಿತಾದ ಮಾಹಿತಿ ಬಹಿರಂಗಪಡಿಸಿದ್ದಾರೆ.

ಹೌದು ಚಂದ್ರಶೇಖರ್ ಆಜಾದ್ ರವರ ವೈದ್ಯ ಹರ್ಜೀತ್ ಸಿಂಗ್ ಭಟ್ಟೀ ಟ್ವಿಟ್ ಒಂದನ್ನು ಮಾಡುತ್ತಾ 'ಆಜಾದ್ ಗೆ ಕೂಡಲೇ ಚಿಕಿತ್ಸೆ ನೀಡಬೇಕಿದೆ. ಆದರೆ ಪದೇ ಪದೇ ಮನವಿ ಮಾಡಿಕೊಂಡರೂ ಚಿಕಿತ್ಸೆ ಕೊಡುತ್ತಿಲ್ಲ. ಇದು ಮಾನವ ಹಕ್ಕು ಉಲ್ಲಂಘನೆಯಾಗಿದೆ. ಆಜಾದ್ ಗೆ ಕೂಡಲೇ ಚಿಕಿತ್ಸೆ ನೀಡದಿದ್ದಲ್ಲಿ ಅವರ ಜೀವಕ್ಕೇ ಅಪಾಯವಿದೆ' ಎಂದಿದ್ದಾರೆ.

ಪೌರತ್ವ ಕಾಯ್ದೆ ವಿರೋಧ: ಭೀಮ್‌ ಆರ್ಮಿ 'ರಾವಣ' ಆಜಾದ್ ಅರೆಸ್ಟ್!

ಏಮ್ಸ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ ಡಾಕ್ಟರ್ ಭಟ್ಟೀ ಈ ಸಂಬಂಧ ಪ್ರತಿಕ್ರಿಯಿಸಿದ್ದು 'ಕಳೆದೊಂದು ವರ್ಷದಿಂದ ಏಮ್ಸ್ ಆಸ್ಪತ್ರೆಯ ಹೆಮೆಟಾಲಜಿ ವಿಭಾಗದಲ್ಲಿ ಆಜಾದ್ ರವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವರನ್ನು ಕಾಡುತ್ತಿರುವ ಕಾಯಿಲೆಗೆ ಅವರ ಶರೀರದಿಂದ ರಕ್ತ ಹೊರ ತೆಗೆಯುವುದು ಅನಿವಾರ್ಯ. ಹೀಗಾಗದಿದ್ದಲ್ಲಿ ರಕ್ತ ಗಡಸಾಗಲಾರಂಭಿಸುತ್ತದೆ. ಇದರಿಂದ ಹೃದಯಾಘಾತಥವಾ ಸ್ಟ್ರೋಕ್ ಆಗುವ ಸಾಧ್ಯತೆಗಳಿವೆ' ಎಂದಿದ್ದಾರೆ. ಈ ಸಂಬಂಧ ಡಾ. ಭಟ್ಟೀ ಸರಣಿ ಟ್ವೀಟ್ ಮಾಡಿದ್ದು, ಚಂದ್ರಶೇಖರ್ ಆಜಾದ್ ಗೆ ಚಿಕಿತ್ಸೆ ನೀಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಲಿಸಿಥೀಮಿಯಾದಿಂದ ಬಳಲುತ್ತಿರುವ ಆಜಾದ್

ಕಳೆದ ಹಲವಾರು ದಿನಗಳಿಂದ ಚಂದ್ರಶೇಖರ್ ಆಜಾದ್ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಅವರು ಹಲವಾರು ಬಾರಿ ಜೈಲು ಸಿಬ್ಬಂದಿಗೆ ತನ್ನನ್ನು ಕಾಡುತ್ತಿರುವ ರೋಗದ ಬಗ್ಗೆ ತಿಳಿಸಿದ್ದಾರೆ. ಆದರೆ ಯಾರೂ ಅವರ ಸಮಸ್ಯೆ ಆಲಿಸುತ್ತಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇನ್ನು ತಾನೇ ದೆಹಲಿ ಪೊಲೀಸ್ ಹಾಗೂ ಗೃಹ ಸಚಿವ ಅಮಿತ್ ಶಾಗೆ ಬಳಿ ಈ ಸಂಬಂದ ಮಾತನಾಡಿ ಚಿಕಿತ್ಸೆ ನೀಡುವಂತೆ ಮನವಿ ಮಾಡುವುದಾಗಿ ಡಾ. ಭಟ್ಟೀ ತಿಳಿಸಿದ್ದಾರೆ.

ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಆಜಾದ್: ಹೈಡ್ರಾಮಾಗಳಿಗೆ ಸಾಕ್ಷಿಯಾದ ದೆಹಲಿ!

ಲಭ್ಯವಾದ ಮಾಹಿತಿ ಅನ್ವಯ ಚಂದ್ರಶೇಖರ್ ಆಜಾದ್ ಪಾಲಿಸಿಥೀಮಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ಕಾಯಿಲೆಗೀಡಾದವರ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಹೀಗಿರುವಾಗ ದೇಹದಲ್ಲಿ ಹೆಮೆಟೋಕ್ರೆಟ್ ಮಟ್ಟವನ್ನು ಕಾಪಾಡುವುದು ಅಗತ್ಯ. ಆಜಾದ್ ದೇಹದ  ಹೆಮೆಟೋಕ್ರೆಟ್ ಮಟ್ಟ ಶೇ. 45ಕ್ಕಿಂತ ಕೆಳಗಿರಬೇಕು. ಆದರೀಗ ಅವರ ದೇಹದ  ಹೆಮೆಟೋಕ್ರೆಟ್ ಮಟ್ಟ ಶೇ. 50ಕ್ಕಿಂತ ಹೆಚ್ಚು ಇದೆ. ಹೀಗಾಗಿ ಕೂಡಲೇ ಅವರ ದೇಹದಿಂದ ರಕ್ತ ತೆಗೆಯಬೇಕಾಗಿದೆ. ಈ ಸಮಸ್ಯೆಯಿಂದ ಆಜಾದ್ ಆರೋಗ್ಯ ಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿದೆ. ಕೂಡಲೇ ಏಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿ ಎಂದು ಆಜಾದ್ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ರನ್ನು ದೆಹಲಿಯ ಜಮಾ ಮಸೀದಿ ಆವರಣದಲ್ಲಿನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಬೃಹತ್ ಪ್ರತಿಭಟನೆ ವೇಳೆ ಬಂಧಿಸಲಾಗಿತ್ತು.

ಆಜಾದ್ ಆರೋಗ್ಯ ಸರಿಯಾಗಿದೆ, ಸಮಸ್ಯೆ ಇಲ್ಲ

ಇನ್ನು ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಆಜಾದ್ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು 'ಆಜಾದ್ ಆರೋಗ್ಯ ಸರಿಯಾಗಿದೆ. ಅವರು ಈ ಸಂಬಂಧ ಯಾವುದೇ ದೂರು ನೀಡಿಲ್ಲ. ಶನಿವಾರದಂದು ಅವರ ತಪಾಸಣೆ ನಡೆಸಿದ್ದು, ಅವರು ಚೆನ್ನಾಗಿದ್ದಾರೆಂಬ ವರದಿ ಬಂದಿದೆ. ಅವರಿಗೆ ಈ ಹಿಂದಿನಿಂದಲೂ ಕಾಡುತ್ತಿರುವಬ ಸಮಸ್ಯೆಗೆ ನಿಯಮಿತವಾಗಿ ಔಷಧಿ ನೀಡುತ್ತಿದ್ದೇವೆ. ಅಪಾಯ ಎನ್ನುವಂತಹ ಪರಿಸ್ಥಿತಿ ಇಲ್ಲ' ಎಂದಿದ್ದಾರೆ.

ಮೋದಿ ವಿರುದ್ಧ ಭೀಮ್‌ ಆರ್ಮಿ 'ರಾವಣ' ಕಣಕ್ಕೆ!