ಮೋದಿ ವಿರುದ್ಧ ಭೀಮ್ ಆರ್ಮಿ 'ರಾವಣ' ಕಣಕ್ಕೆ!
ಮೋದಿ ವಿರುದ್ಧ ಭೀಮ್ ಆರ್ಮಿ ಆಜಾದ್ ಕಣಕ್ಕೆ| ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದೆ ವಾರಾಣಸಿ
ನವದೆಹಲಿ[ಮಾ.16]: ಉತ್ತರಪ್ರದೇಶದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದು, ಮೋದಿ ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ. ಭೀಮ್ ಆರ್ಮಿಯ ಈ ನಡೆ ಎಸ್ಪಿ-ಬಿಎಸ್ಪಿ ಮೈತ್ರಿಗೆ ಉತ್ತರ ಪ್ರದೇಶದಾದ್ಯಂತ ತೊಡಕಾಗುವ ಸಾಧ್ಯತೆ ಇದೆ.
ಬಿಎಸ್ಪಿ ಸ್ಥಾಪಕ ಕ್ಯಾನ್ಶಿರಾಂ ಅವರ 85ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಯಾತ್ರೆಯಲ್ಲಿ ಮಾತನಾಡಿದ ಅವರು, ‘ನಾನು ವಾರಾಣಸಿಯಿಂದ ಸ್ಪರ್ಧಿಸುವೆ ಎಂಬ ಸುಳಿವು ಮೋದಿ ಅವರಲ್ಲಿ ನಡುಕ ಸೃಷ್ಟಿಯಾಗಿದೆ. ಹೀಗಾಗಿ ಹೆದರಿದ ಅವರು ಪ್ರಯಾಗ್‌ರಾಜ್‌ನಲ್ಲಿ ಪೌರಕಾರ್ಮಿಕರ ಪಾದ ತೊಳೆದರು’ ಎಂದು ವ್ಯಂಗ್ಯವಾಡಿದರು.
ಮಾಯಾ, ಮೋದಿಗೆ ಸಡ್ಡು ಹೊಡೆದ ಪ್ರಿಯಾಂಕಾ!: ಸಂಚಲನ ಮೂಡಿಸಿದ ಆ ಭೇಟಿ!
ಇದೇ ವೇಳೆ, ಕೇಂದ್ರ ಸಚಿವ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿಯ ಎಲ್ಲ ಖ್ಯಾತನಾಮರ ವಿರುದ್ಧ ಭೀಮ್ ಆರ್ಮಿ ಸ್ಪರ್ಧಿಸಲಿದೆ ಎಂದರು.
‘ಮೇಲ್ವರ್ಗಕ್ಕೆ ಶೇ.10ರ ಮೀಸಲಾತಿ ಮೂಲಕ ಮೋದಿ ಸರ್ಕಾರ ಸಂವಿಧಾನದ ಮೇಲೆ ದಾಳಿ ನಡೆಸಿದೆ. ಇನ್ನು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದಿರುವ ಮುಲಾಯಂ ಸಿಂಗ್ ಯಾದವ್ ಅವರ ಮಾತಿಗೆ ಎಸ್ಪಿ ಅಧ್ಯಕ್ಷ ಅಖಿಲೇಶ ಪ್ರತಿಕ್ರಿಯೆ ಏನು? ಇದರಿಂದ ಅವರಿಗೆ ಮತ ನೀಡಿದ ದಲಿತರ ಕ್ಷೇಮ ಸಾಧ್ಯವೇ’ ಎಂದು ಆಜಾದ್ ಪ್ರಶ್ನಿಸಿದರು. ಯಾತ್ರೆಯಲ್ಲಿ ಕ್ಯಾನ್ಶಿರಾಂ ಸಹೋದರಿ ಸ್ವರ್ಣಾ ಕೌರ್ ಪಾಲ್ಗೊಂಡಿದ್ದರು.