2024ರ ಚುನಾವಣೆಗೆ ಬಿಜೆಪಿ ಪ್ರಚಾರ ಶುರು!| 120 ದಿನಗಳ ಜೆ.ಪಿ. ನಡ್ಡಾ ದೇಶಯಾತ್ರೆ ಶುರು| ಹರಿದ್ವಾರದಲ್ಲಿ ಯಾತ್ರೆಗೆ ಚಾಲನೆ| ಪಕ್ಷ ದುರ್ಬಲ ಆಗಿರುವ ಕಡೆ ಬಲ ತುಂಬುವ ಉದ್ದೇಶ
ಡೆಹ್ರಾಡೂನ್(ಡಿ.05): 2024ರ ಲೋಕಸಭೆ ಚುನಾವಣೆ ತಯಾರಿಯನ್ನು ಈಗಿನಿಂದಲೇ ಬಿಜೆಪಿ ಆರಂಭಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು 120 ದಿನಗಳ ದೇಶಯಾತ್ರೆಯನ್ನು ಶುಕ್ರವಾರ ಉತ್ತರಾಖಂಡದಿಂದ ಆರಂಭಿಸಿದ್ದಾರೆ. 2019ರ ಚುನಾವಣೆಯಲ್ಲಿ ಬಿಜೆಪಿ ಎಲ್ಲಿ ಉತ್ತಮ ಪ್ರದರ್ಶನ ತೋರಿರಲಿಲ್ಲವೋ ಅಲ್ಲಿ ಪಕ್ಷಕ್ಕೆ ಬಲ ತುಂಬುವ ಉದ್ದೇಶವನ್ನು ನಡ್ಡಾ ಅವರ ಯಾತ್ರೆ ಹೊಂದಿದೆ. ಈ ನಿಮಿತ್ತ ಶುಕ್ರವಾರ ಹರಿದ್ವಾರಕ್ಕೆ ಆಗಮಿಸಿದ ನಡ್ಡಾ, ಇಲ್ಲಿನ ದೇವಸಂಸ್ಕೃತಿ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡರು.
‘ನನ್ನಿಂದ ಯಾತ್ರೆ ಆರಂಭವಾಗಿ ನಮ್ಮೆಲ್ಲರ ಮಿಲನವಾಗಲಿದೆ. ನಂತರ ದೇಶದ ಎಲ್ಲ ಜನರು ಒಗ್ಗೂಡಲಿದ್ದಾರೆ’ ಎಂದು ಈ ಸಮಾರಂಭದಲ್ಲಿ ಅವರು ಮಾರ್ಮಿಕವಾಗಿ ನುಡಿದರು. ನಂತರ ನಿರಂಜನಿ ಅಖಾಡಕ್ಕೆ ತೆರಳಿ ಅಲ್ಲಿನ ಸಾಧು ಸಂತರ ಆಶೀರ್ವಾದ ಪಡೆದರು. ಗಂಗಾ ನದಿ ತಟಕ್ಕೆ ತೆರಳಿ ಪತ್ನಿ ಸಮೇತರಾಗಿ ಪೂಜೆ ಮಾಡಿದರು.
ಈ ನಡುವೆ ಶ್ರೀಗಳನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ‘120 ದಿನಗಳ ದೇಶಯಾತ್ರೆ ಆರಂಭಿಸುತ್ತಿದ್ದೇನೆ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ, ದೇಶವನ್ನು ಮುನ್ನಡೆಸುವ ಸಾಧನ ಆಗಬೇಕು ಎಂಬ ಉದ್ದೇಶ ನನ್ನದು’ ಎಂದರು. ಉತ್ತರಾಖಂಡದಲ್ಲಿ ಇನ್ನೂ 2 ದಿನಗಳ ಯಾತ್ರೆಯನ್ನು ನಡ್ಡಾ ನಡೆಸಲಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಮಿತ್ರಪಕ್ಷಗಳ ನೇತಾರರನ್ನು ಭೇಟಿಯಾಗುವ ಉದ್ದೇಶ ನಡ್ಡಾ ಅವರಿಗೆ ಇದೆ.
ಡಿಸೆಂಬರ್‌ನಲ್ಲಿ ಕರ್ನಾಟಕಕ್ಕೂ ಅವರು ಭೇಟಿ ನೀಡಲಿದ್ದಾರೆ. ಪಕ್ಷ ದುರ್ಬಲವಾಗಿರುವ ರಾಜ್ಯಗಳಲ್ಲಿ 3 ದಿನ ಹಾಗೂ ಪ್ರಬಲವಾಗಿರುವ ರಾಜ್ಯಗಳಲ್ಲಿ 2 ದಿನ ಪ್ರವಾಸ ಮಾಡುವ ಉದ್ದೇಶವನ್ನು ಅವರು ಹೊಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 5, 2020, 1:52 PM IST