ಇಂದು ವಿಕ್ರಮ್ ಹಾಗೂ ಪ್ರಗ್ಯಾನ್ ಎಚ್ಚರವಾದರೆ ಅದು ಇಸ್ರೋ ಪಾಲಿಗೆ ಐತಿಹಾಸಿಕ, ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್!
ಇಸ್ರೋ ಪಾಲಿಗೆ ಇಂದು ಮತ್ತೊಂದು ಮಹತ್ವದ ದಿನ. 16 ದಿನಗಳ ಕಾಲ ಸ್ಲೀಪ್ ಮೋಡ್‌ನಲ್ಲಿದ್ದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ಅನ್ನು ಇಂದು ಎಚ್ಚರಿಸುವ ಕೆಲಸ ಮಾಡಲಿದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹಾಗೇನಾದರೂ ಇಬ್ಬರು ಎಚ್ಚರವಾದರೆ ಅದು ಐತಿಹಾಸಿಕ ಸಾಧನೆ ಎಂದಿದ್ದಾರೆ.

ಬೆಂಗಳೂರು (ಸೆ.22): ಬರೋಬ್ಬರಿ 16 ದಿನಗಳ ಚಂದ್ರನ ಮೇಲ್ಮೈಯಲ್ಲಿ ಅತ್ಯಂತ ಕಡಿಮೆ ತಾಪಮಾನದಲ್ಲಿ ಬದುಕುಳಿಯುವುದು ಮತ್ತು ಅದರ ಎಲ್ಲಾ ಉಪಕರಣಗಳು ಮತ್ತೆ ಕಾರ್ಯನಿರ್ವಹಿಸಬೇಕು ಎನ್ನುವುದು ನಿಜವಾಗಿಯೂ ಕಠಿಣ ವಿಷಯ. ಹಾಗೇನಾದರೂ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನ ತನ್ನ ಮೇಲೆ ಬಿದ್ದ ಸೂರ್ಯ ಕಿರಣಗಳಿಂದ ಶಕ್ತಿಯನ್ನು ಪಡೆದುಕೊಂಡು, ಸೆಪ್ಟೆಂಬರ್ 22 ರಂದು ಇಸ್ರೋ ನೀಡಲಿರುವ ಕಮಾಂಡ್‌ನೊಂದಿಗೆ ಎಚ್ಚರಗೊಂಡಲ್ಲಿ ಅದು ಐತಿಹಾಸಿಕ ಸಾಧನೆಗಿಂತ ಕಡಿಮೆ ಏನಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಕಲ್ರಾ ಅವರೊಂದಿಗೆ ವಿಶೇಷ ಸಂವಾದದಲ್ಲಿ ಹೇಳಿದ್ದಾರೆ.
ವಿಕ್ರಮ್ ಹಾಗೂ ಪ್ರಗ್ಯಾನ್‌ನ ನೆನಪುಗಳನ್ನು ಹಂಚಿಕೊಂಡ ಅವರು, ಇಸ್ರೋ ಸೆಪ್ಟೆಂಬರ್ 5 ರಂದು ವಿಕ್ರಮ್ ಲ್ಯಾಂಡರ್‌ಗಾಗಿ ಸ್ಲೀಪ್ ಮೋಡ್ ಅನ್ನು ಪ್ರಾರಂಭಿಸಿತು. ಇದಕ್ಕೂ ಮೊದಲು, ಚಾಸ್ಟೆ, ರಂಭಾ-ಎಲ್‌ಪಿ ಮತ್ತು ಇಲ್ಸಾ ಪೇಲೋಡ್‌ಗಳನ್ನು ಒಳಗೊಂಡಿರುವ ಇನ್-ಸಿಟು ಪ್ರಯೋಗಗಳ ಸರಣಿಯನ್ನು ಯಶಸ್ವಿಯಾಗಿ ಮಾಡಲಾಯಿತು. ಅದಲ್ಲದೆ, ಹಾಪ್ ಟೆಸ್ಟ್‌ಅನ್ನು ಕೂಡ ಈ ಹಂತದಲ್ಲಿ ಮಾಡಲಾಯಿತು. ಇದರ ಮಾಹಿತಿಯನ್ನೂ ಭೂಮಿಗೆ ಕಳುಹಿಸಿಕೊಟ್ಟಿತ್ತು. ಸ್ಲೀಪ್ ಮೋಡ್‌ಗೆ ಹೋದ ಬಳಿಕ ಪೇಲೋಡ್‌ಗಳು ನಿಷ್ಕ್ರೀಯಗೊಂಡವು. ಆದರೆ, ಲ್ಯಾಂಡರ್‌ನಲ್ಲಿನ ರಿಸೀವರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಸೆಪ್ಟೆಂಬರ್ 22 ರಂದು, ಸಂಭಾವ್ಯ ಮಿಷನ್ ವಿಸ್ತರಣೆಯ ಅನ್ವೇಷಣೆಯಲ್ಲಿ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡರಲ್ಲೂ ಉಪಕರಣಗಳನ್ನು ಪುನಃ ಜಾಗೃತಗೊಳಿಸುವ ಪ್ರಯತ್ನಗಳನ್ನು ಕೈಗೊಳ್ಳಲು ವಿಜ್ಞಾನಿಗಳು ಸಿದ್ಧರಾಗಿದ್ದಾರೆ. ಈ ಪ್ರಯತ್ನದ ಯಶಸ್ಸು ಚಂದ್ರನ ರಾತ್ರಿಗಳಲ್ಲಿ ಅನುಭವಿಸುವ ತೀವ್ರ ಕಡಿಮೆ ತಾಪಮಾನವನ್ನು ತಡೆದುಕೊಳ್ಳುವ ಈ ಉಪಕರಣಗಳ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಹಿಂದಿನ ಚಂದ್ರನ ಕಾರ್ಯಾಚರಣೆಗಳ ಐತಿಹಾಸಿಕ ಮಾಹಿತಿಯು ಚಂದ್ರನ ಮೇಲೆ ರಾತ್ರಿಯ ಉಷ್ಣತೆಯು ಸುಮಾರು ಮೈನಸ್ 200 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು,
ಚಂದ್ರಯಾನ-3ರ ಮೇಲೆ ನಮಗಿರುವ ಆತ್ಮವಿಶ್ವಾಸದಂತೆ ವಿಕ್ರಂ ಲ್ಯಾಂಡರ್ ಹಾಗೂ ರೋವರ್ ಮತ್ತೆ ಕೆಲಸ ಮಾಡಲಿದೆ. ಲ್ಯಾಂಡರ್ ಹಾಗೂ ರೋವರ್ನಲ್ಲಿನ ಉಪಕರಣಗಳು ರಿಯಾಕ್ಟ್ ಮಾಡಲಿವೆ. ನಾವು ಹೇಳಿದಂತೆ ಮತ್ತೆ ಕೆಲಸ ಮಾಡುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಅಂದುಕೊಂಡಂತೆ ಆದ್ರೆ 22ಕ್ಕೆ ಮತ್ತೊಂದು ಇತಿಹಾಸ ಸೃಷ್ಟಿಯಾಗಲಿದೆ ಅಂತಹ ಕಡಿಮೆ ತಾಪಮಾನದಲ್ಲಿ ಹೆಚ್ಚು ಕಾಲ ಉಪಕರಣಗಳು ಬದುಕುಳಿಯೋದು ಕಷ್ಟ. ಆದರೂ ನಮ್ಮ ಉಪಕರಣಗಳು ಕೆಲಸ ಮಾಡುತ್ತವೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. 'ನಾವು ಏನು ಮಾಡಿದ್ವಿ ಅಂದ್ರೆ.. ಅದೇ ರೀತಿಯ ಪರಿಸ್ಥಿತಿಯಲ್ಲಿ ಪರೀಕ್ಷೆ ಮಾಡಿದ್ವಿ.. ಅದರಲ್ಲೂ ರೋವರ್ನ ಸಂಪೂರ್ಣ ಪರೀಕ್ಷಿಸಿದ್ವಿ ಅದೇ ವಿಕ್ರಂ ವಿಷಯಕ್ಕೆ ಬಂದ್ರೆ ನಾವು ಎಲ್ಲವನ್ನೂ ಪರೀಕ್ಷಿಸಿದ್ವಿ ಅಂತಾ ಹೇಳೋಕೆ ಆಗೋದಿಲ್ಲ. ಯಾಕೆಂದರೆ ಇದು ತುಂಬಾ ದೊಡ್ಡದು.. ಕೆಲವುಗಳನ್ನಷ್ಟೇ ಪರೀಕ್ಷೆ ಮಾಡಿದ್ವಿ. ಆದ್ರೆ ಪ್ರಗ್ಯಾನ್ನಲ್ಲಿ ಬಳಸಿದ ಕೆಲವು ಉಪಕರಣಗಳನ್ನೇ ವಿಕ್ರಂನಲ್ಲೂ ಬಳಸಿದ್ವಿ. ಪ್ರಗ್ಯಾನ್ ಪರೀಕ್ಷೆ ಮಾಡಿದ್ಮೇಲೆ ವಿಕ್ರಂ ಕೂಡ ಕೆಲಸ ಮಾಡುವ ನಂಬಿಕೆ ಬಂತು. ವಿಕ್ರಂನಲ್ಲಿ ಈಗ ಎಲ್ಲವೂ ಮತ್ತೆ ಕೆಲಸ ಮಾಡಬೇಕಿಲ್ಲ. ಕೇವಲ ಕಮ್ಯುನಿಕೇಷನ್ ಕೆಲಸ ಮಾಡಿದ್ರೆ ಸಾಕು. ಅಲ್ಲಿರುವ ಪ್ರೈಮರಿ ಕಂಪ್ಯೂಟರ್ ಕೆಲಸ ಮಾಡಿದ್ರೆ ಸಾಕು. ನಾವು ಇಲ್ಲಿಂದ ರೋವರ್ನ ನಿಯಂತ್ರಿಸಬಹುದು' ಎಂದು ಹೇಳಿದರು.
ISRO Chief S Somanath 2025ಕ್ಕೂ ಮುಂಚೆ ಮಾನವಸಹಿತ ಗಗನಯಾನ ಸಾಧ್ಯವಿಲ್ಲ
ಇನ್ನು ಕಮಾಂಡ್ ಯಾರಿಗೆ ಹೋಗುತ್ತೆ ಎನ್ನುವ ಬಗ್ಗೆ ತಿಳಿಸಿದ ಅವರು, ಮೊದಲು ಕಮಾಂಡ್ ವಿಕ್ರಂ ರಿಸೀವ್ ಮಾಡುತ್ತೆ.. ನಂತರ ಅದು ರೋವರ್‌ಗೆ ನೀಡಲಿದೆ. ಪ್ರಗ್ಯಾನ್ನಲ್ಲಿರೋ ಅಂಟೆನಾ ಮೂಲಕ ಸಂವಹನ ನಡೆಯುತ್ತೆ. ಕಮಾಂಡ್ ಕೊಡೋದಕ್ಕೆ ಈ ಎರಡು ಚಾನೆಲ್ ಓಪನ್ ಇರಬೇಕು. ನೀವು ಇಲ್ಲಿ ಎರಡು ಚಿಕ್ಕ ಕ್ಯಾಮೆರಾಗಳನ್ನ ನೋಡಬಹುದು. ನೋಡಿ ಇದೇ ಕ್ಯಾಮೆರಾಗಳು ವಿಕ್ರಂನ ಕ್ಲಾಸಿಕಲ್ ಫೋಟೋ ತೆಗೆದಿದ್ದು. ಈ ಕ್ಯಾಮೆರಾಗಳು ಕೆಲಸ ಮಾಡಬೇಕು. ಇದು ಫೋಟೋ ತೆಗೆದು ವಿಕ್ರಂಗೆ ಕಳಿಸಬೇಕು.. ಬಳಿಕ ವಿಕ್ರಂ ಅವನ್ನ ಭೂಮಿಗೆ ಕಳಿಸುತ್ತೆ. ಇದೆಲ್ಲಾ ಆಗೋಕೆ ಆ ಚಾನೆಲ್ಗಳು ಓಪನ್ ಇರಬೇಕು ಎಂದರು.
ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ದಿನ ದೂರವಿಲ್ಲ!