ISRO Chief S Somanath 2025ಕ್ಕೂ ಮುಂಚೆ ಮಾನವಸಹಿತ ಗಗನಯಾನ ಸಾಧ್ಯವಿಲ್ಲ
ಚಂದ್ರಯಾನ-3 ಹಾಗೂ ಆದಿತ್ಯ ಎಲ್ 1 ಯೋಜನೆಗಳ ಅಭೂತಪೂರ್ವ ಯಶಸ್ಸಿನಲ್ಲಿರುವ ಇಸ್ರೋ ಮುಂದಿನ ಯೋಜನೆಗಳ ಬಗ್ಗೆ ಏಷ್ಯಾನೆಟ್ ನ್ಯೂಸ್ ವ್ಯವಸ್ಥಾಪಕ ಚೇರ್ಮನ್ ರಾಜೇಶ್ ಕಾಲ್ರಾ ಅವರೊಂದಿಗಿನ ಸಂದರ್ಶನದಲ್ಲಿ ಸ್ವತಃ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಮಾತನಾಡಿದ್ದಾರೆ.
ಬೆಂಗಳೂರು (ಸೆ.21): ಇಸ್ರೋ ಈಗ ದೊಡ್ಡ ಯಶಸ್ಸಿನಲ್ಲಿ ತೇಲಾಡುತ್ತಿದೆ. ಚಂದ್ರಯಾನ-3 ದೊಡ್ಡ ಮಟ್ಟದ ಯಶಸ್ಸು ಕಂಡರೆ, ಅದರ ಬೆನ್ನಲ್ಲಿಯೇ ಆದಿತ್ಯ ಎಲ್-1 ತನ್ನ ಯಶಸ್ವಿ ಯೋಜನೆ ಆರಂಭಿಸಿದೆ. ಈಗಾಗಲೇ ಲಾಂಗ್ರೇಜ್-1 ಪಾಯಿಂಟ್‌ನತ್ತ ತನ್ನ ಪ್ರಯಾಣ ಆರಂಭಿಸಿರುವ ಆದಿತ್ಯ ಎಲ್1 ಜನವರಿ ವೇಳೆಗೆ ತನ್ನ ಕಾರ್ಯ ಆರಂಭ ಮಾಡುವ ಸಾಧ್ಯತೆ ಇದೆ. ಇನ್ನೊಂದೆಡೆ ಚಂದ್ರಯಾನ-3 ಯೋಜನೆಯಲ್ಇ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ನನ್ನು ಎಬ್ಬಿಸುವ ಕಾರ್ಯವನ್ನು ಇಸ್ರೋ ಮಾಡಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲ ಸೂರ್ಯೋದಯ ಆರಂಭವಾಗಿದ್ದು, ಸೆ. 22ರ ವೇಳೆಗೆ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್‌ಗೆ ಕಮಾಂಡ್ ನೀಡಲು ಇಸ್ರೋ ಆರಂಭಿಸಲಿದೆ. ಇದರ ನಡುವೆ ಇಸ್ರೋ ತನ್ನ ಮುಂದಿನ ಬಹುನಿರೀಕ್ಷಿತ ಬಾಹ್ಯಾಕಾಶ ಪ್ರಾಜೆಕ್ಟ್ ಗಗನಯಾನದ ಬಗ್ಗೆ ಸಿದ್ಧತೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಏಷ್ಯಾನೆಟ್ ನ್ಯೂಸ್‌ನ ವ್ಯವಸ್ಥಾಪಕ ಚೇರ್ಮನ್ ರಾಜೇಶ್ ಕಾಲ್ರಾ ಅವರೊಂದಿಗೆ ಮಾತನಾಡಿದ್ದಾರೆ.
'ಈಗ ನಾವು ಗಗನಯಾನ ಬಗ್ಗೆ ಎಲ್ಲಿದ್ದೇವೆ? ಏನು ಆಗಬೇಕಿದೆ' ಎಂದು ರಾಜೇಶ್ ಕಾಲ್ರಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋಮನಾಥ್, 'ಗಗನಯಾನ ಅನ್ನೋದು ಒಂದು ತುಂಬಾ ಕಷ್ಟಕರ ಆಪರೇಷನ್. ಇದರಲ್ಲಿ ಲಾಂಚಿಂಗ್ ಮಾಡೋದು ಸುಲಭ.. ಅವರನ್ನ ವಾಪಸ್ ಕರೆತರೋದು ಕಷ್ಟ. ಲಾಂಚಿಂಗ್ ಆಗಬೇಕಾದರೂ, ಯಾವುದೇ ತಪ್ಪು ಆಗದಂತೆ ಎಚ್ಚರವಹಿಸಬೇಕು. ಯಾಕೆಂದರೆ ಅದರಲ್ಲಿ ಮನುಷ್ಯರು ಇರುತ್ತಾರೆ. ನಾವು ಇದನ್ನ ಶುರು ಮಾಡಿದಾಗ ಸಮಯದ ಮಿತಿ ಇಟ್ಟುಕೊಂಡಿದ್ದೇವೆ. 4 ವರ್ಷದಲ್ಲಿ ಗಗನಯಾನ ಮುಗಿಸಬೇಕು ಅಂತ. ನಾವು ಈ ಸಮಯದಲ್ಲಿ ಸಾಕಷ್ಟು ಸವಾಲುಗಳನ್ನ ಎದುರಿಸಿದ್ದೆವು. ಈ ಮಧ್ಯದಲ್ಲಿ ನಮಗೆ ಕೋವಿಡ್ ಎದುರಾಯ್ತು. ಬಹುತೇಕ ಎರಡು ವರ್ಷಗಳ ಕಾಲ ಸಂಕಷ್ಟ ಅನುಭವಿಸಬೇಕಾಯ್ತು. ಉಪಕರಣಗಳ ತಯಾರಿಕೆಯಲ್ಲಿ ಸಾಕಷ್ಟು ಸವಾಲುಗಳು ಬಂದವು. ಹೈ ಎಂಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ನಾವು ಈಗಲೂ ಪರದಾಡುತ್ತಿದ್ದೇವೆ. ಮಾನವ ಸಹಿತ ಗಗನಯಾನಕ್ಕೆ ಬೇಕಾದ ಉಪಕರಣಗಳು ಸಿಗುತ್ತಿಲ್ಲ ಎಂದು ಹೇಳಿದರು.
ನಮ್ಮ ಪೂರೈಕೆ ದಿನಾಂಕವನ್ನ ಮುಂದಕ್ಕೆ ಹಾಕುತ್ತಾ ಬಂದಿದ್ದಾರೆ.. ನಾವು ತುಂಬಾ ಇಂಜಿನಿಯರಿಂಗ್ ಕೆಲಸಗಳನ್ನ ಮಾಡಿ ಮುಗಿಸಬೇಕಾಗಿದೆ. ನಮಗೆ ಇರುವ ಬಹುದೊಡ್ಡ ಸವಾಲೆಂದರೆ.. ಗಗನಯಾನಿಗಳ ಸುರಕ್ಷತೆ. ನೀವು ಚಂದ್ರಯಾನ -2 ನೋಡಿ. ಅದರ ಲ್ಯಾಂಡಿಂಗ್‌ನಲ್ಲಿ ಸಮಸ್ಯೆಯಾಯ್ತು. ಅಲ್ಲಿಂದ ಚಂದ್ರಯಾನ - 3 ಮಾಡೋದಕ್ಕೆ 4 ವರ್ಷ ಸಮಯ ಹಿಡಿತು. ಗಗನಯಾನ ಮೊದಲ ಯೋಜನೆಯಲ್ಲಿ ಈ ರೀತಿ. ಏನಾದ್ರೂ ಆಯ್ತು ಅಂದ್ರೆ ಅದರ ರಿಕವರಿ ತುಂಬಾ ಕಷ್ಟ. ಆಗ 5 ವರ್ಷ... 10 ವರ್ಷ ತೆಗೆದುಕೊಳ್ಳಬಹುದು. ಇದರ ಬಗ್ಗೆ ನಮ್ಮ ತಂಡದ ಜೊತೆಯೂ ಮಾತಾಡಿದ್ದೇನೆ. ಸರ್ಕಾರದ ಬಳಿಯೂ ನಾನು ಮಾತಾಡಿದ್ದೇನೆ. ಇದರಲ್ಲಿ ಫಾಸ್ಟ್ ಆಗಿ ಹೋಗೋದು ತುಂಬಾ ರಿಸ್ಕ್. ಇದರಲ್ಲಿ ಮೊದಲ ಯೋಜನೆಗೆ ಸಮಯ ಹಾಗೂ ಆತ್ಮವಿಶ್ವಾಸ ಎರಡು ಮುಖ್ಯ ಎಂದು ತಿಳಿಸಿದ್ದೇವೆ. ಇದರಲ್ಲಿ ಮೊದಲನೆಯದು ಮಾಡುವಾಗ ಇನ್ನೂ ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ ಎಂದು ಹೇಳಿದರು.
ಚಂದ್ರನ ಶಿವಶಕ್ತಿ ಪಾಯಿಂಟ್‌ನಲ್ಲಿ ಸೂರ್ಯೋದಯ, ನಿದ್ರೆಯಿಂದ ಏಳ್ತಾರಾ ವಿಕ್ರಮ್, ಪ್ರಗ್ಯಾನ್?
ಗಗನಯಾನ ಯೋಜನೆಯಲ್ಲಿ ತಪ್ಪು ಮಾಡೋಕೆ ಆಗಲ್ಲವಲ್ಲ ಎನ್ನುವ ಪ್ರಶ್ನೆಗೆ, 'ಯಾವುದೇ ಮಿಷನ್ ಆಗಲಿ ತಪ್ಪು ಮಾಡೋಕೆ ಆಗಲ್ಲ. ನಾವು ಉತ್ತರ ನೀಡಬೇಕಾಗುತ್ತೆ. ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತೆ. ತುರ್ತಾಗಿ ಮಾಡುವ ಅಗತ್ಯವಿದೆಯಾ ಅಂತಾ. ಆಗ ನಮಗೆ ಇನ್ನೂ ಹೆಚ್ಚಿನ ಟೆಸ್ಟ್ ಹಾಗೂ ಪರಿಶೀಲನೆಯ ಅಗತ್ಯ ಬೀಳುತ್ತದೆ. ಈಗ ನಾವು ಇಡೀ ಯೋಜನೆಯನ್ನೇ ಮರುವಿನ್ಯಾಸ ಮಾಡಿದ್ದೇವೆ. ಈಗ ನಾವು ಸರ್ಕಾರ ಹಾಗೂ ಸ್ಪೇಸ್ ಕಮಿಷನ್ ಜೊತೆ ಮಾತುಕತೆ ಮಾಡಿದ್ದೇವೆ. ಸಮಯವನ್ನ ಹೆಚ್ಚು ಕೊಡಿ ಎಂದು ಕೇಳಿದ್ದೇವೆ ನೂರಾರು ಟೆಸ್ಟ್‌ಗಳನ್ನು ನಾವು ಮಾಡುತ್ತಿದ್ದೇವೆ. ಮುಂದಿನ ಒಂದು ವರ್ಷದಲ್ಲಿ ಸಾಕಷ್ಟು ಸವಾಲುಗಳನ್ನ ನಾವು ಎದುರಿಸಲಿದ್ದೇವೆ. ಮಾನವ ಸಹಿತ ಗಗನಯಾನ 2025ಕ್ಕೂ ಮುಂಚೆ ನಡೆಸಲು ಸಾಧ್ಯವಿಲ್ಲ. ಎಲ್ಲಾ ಟೆಸ್ಟ್‌ಗಳು ಸಕ್ಸಸ್ ಆದ ಮೇಲೆ ನಾವು ಪ್ರಯತ್ನ ಮಾಡಬಹುದು. ಈಗ ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ದೊಡ್ಡ ಪರೀಕ್ಷೆಯೊಂದು ಸದ್ಯದಲ್ಲೇ ನಡೆಯಲಿದೆ. ಮಾನವ ಸಹಿತ ಟೆಸ್ಟ್‌ಗಳು ಮುಂದಿನ ತಿಂಗಳಿನಿಂದ ಶುರುವಾಗಲಿದೆ.
ಸೂರ್ಯಯಾನದ ಪಥ ಆರಂಭ, ಇಂದು ರಾತ್ರಿ ಶಾಶ್ವತವಾಗಿ ಭೂಮಿಯನ್ನು ತೊರೆಯಲಿದೆ ಆದಿತ್ಯ ಎಲ್1