ನವದೆಹಲಿ[ಡಿ.01]: ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ನಡುವೆಯೇ, ‘ಈ ವರ್ಷ ಚಳಿಗಾಲದಲ್ಲಿ ಅಷ್ಟೊಂದು ಚಳಿ ಇರುವುದಿಲ್ಲ. ವಾತಾವರಣವು ವಾಡಿಕೆಗಿಂತ ಸ್ವಲ್ಪ ಬೆಚ್ಚಗಿರಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಮೂರು ವರ್ಷದ ಹವಾಮಾನ ಪರಿಸ್ಥಿತಿಯನ್ನು ಹಾಗೂ ಜಾಗತಿಕ ತಾಪಮಾನ ಏರಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಸೂಚನೆಯನ್ನು ಇಲಾಖೆ ಕೊಟ್ಟಿದೆ.

‘ಈ ಬಾರಿಯ ಡಿಸೆಂಬರ್‌ನಿಂದ ಫೆಬ್ರವರಿವರೆಗಿನ ಮೂರು ತಿಂಗಳ ಚಳಿಗಾಲದಲ್ಲಿ ದೇಶದ ಬಹುಭಾಗಗಳಲ್ಲಿ ಕನಿಷ್ಠ ಉಷ್ಣಾಂಶವು ವಾಡಿಕೆಗಿಂತ ತುಸು ಹೆಚ್ಚು ಇರಲಿದೆ. ಆದರೆ ಉತ್ತರ ಭಾರತದ ತುತ್ತ ತುದಿಯ ಕೆಲವು ಭಾಗಗಳಲ್ಲಿ, ಮಧ್ಯ ಭಾರತ ಹಾಗೂ ಪರ್ಯಾಯ ದ್ವೀಪದ ಕೆಲವೆಡೆ ಮಾತ್ರ ವಾಡಿಕೆಯಷ್ಟುಚಳಿ ಇರಲಿದೆ’ ಎಂದು ಹೇಳಿದೆ.

‘ಉಷ್ಣಾಂಶ ಸುಮಾರು ಶೇ.1ರಷ್ಟುವಾಡಿಕೆಗಿಂದ ಅಧಿಕವಿರಲಿದೆ. ಅಂದರೆ ವಾಡಿಕೆಯ ತಾಪಮಾನಕ್ಕಿಂತ ಸರಿಸುಮಾರು 0.50 ಡಿಗ್ರಿ ಸೆಲ್ಸಿಯಸ್‌ನಷ್ಟುಹೆಚ್ಚು ಉಷ್ಣಾಂಶವಿರಲಿದೆ’ ಎಂಬ ನಿಖರ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.

ಭೂ ವಿಜ್ಞಾನ ಸಚಿವಾಲಯದ ಕಾರ‍್ಯದರ್ಶಿ ಎಂ.ರಾಜೀವನ್‌ ಈ ಬಗ್ಗೆ ಪ್ರತಿಕ್ರಿಯಿಸಿ, ‘ಚಳಿಗಾಲ ಬೆಚ್ಚಗಿರಲು ಜಾಗತಿಕ ತಾಪಮಾನ ಏರಿಕೆಯೇ ಕಾರಣ’ ಎಂದಿದ್ದಾರೆ.

‘ಅತಿ ಹೆಚ್ಚು ಚಳಿ ಇರುವ ಹಾಗೂ ಶೀತಗಾಳಿಪೀಡಿತ ಪ್ರದೇಶಗಳಲ್ಲಿ ಡಿಸೆಂಬರ್‌ 2019ರಿಂದ ಫೆಬ್ರವರಿ 2020ರ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಾಂಶ ಇರಲಿದೆ’ ಎಂದು ತಿಳಿಸಿದೆ.

ಶೀತಗಾಳಿ ಪೀಡಿತ ಪ್ರದೇಶಗಳೆಂದರೆ ಪಂಜಾಬ್‌, ಹಿಮಾಚಲ ಪ್ರದೇಶ, ಉತ್ತರಾಖಂಡ, ದಿಲ್ಲಿ, ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಜಮ್ಮು-ಕಾಶ್ಮೀರ, ಲಡಾಖ್‌, ಉತ್ತರ ಮಹಾರಾಷ್ಟ್ರ, ಮಧ್ಯ ಮಹಾರಾಷ್ಟ್ರ ಹಾಗೂ ಗುಜರಾತ್‌ನ ಸೌರಾಷ್ಟ್ರ.

ಭಾರತೀಯ ಹವಾಮಾನ ಇಲಾಖೆ 2016ರಿಂದ ಚಳಿಗಾಲದ ಮುನ್ಸೂಚನೆ ನೀಡುತ್ತಿದೆ. ಮೂರೂ ವರ್ಷವೂ ವಾಡಿಕೆಯಷ್ಟುಚಳಿ ಇರುವುದಿಲ್ಲ ಎಂದೇ ಅದು ಹೇಳಿತ್ತು. ಆ ಪ್ರಕಾರ, 2018ನೇ ಇಸವಿಯು ಅತಿ ಹೆಚ್ಚಿನ ಉಷ್ಣಾಂಶ ಹೊಂದಿದ ವರ್ಷ ಎಂದು ದಾಖಲಾಗಿತ್ತು.