ನವದೆಹಲಿ(ಡಿ.16): ತಮಿಳುನಾಡು ಮೂಲದ ಪ್ರಸಿದ್ಧ ಚೆಟ್ಟಿನಾಡ್‌ ಗ್ರೂಪ್‌ ಮೇಲೆ ಕೆಲ ದಿನಗಳ ಹಿಂದಷ್ಟೇ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಬರೋಬ್ಬರಿ 700 ಕೋಟಿ ರು.ಗೂ ಅಧಿಕ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ.

ನವೆಂಬರ್‌ನಲ್ಲಿ ಚೆನ್ನೈ ಮೂಲದ ಸಗಟು ಚಿನ್ನ ಕಂಪನಿ ಮೇಲೆ ನಡೆದ ದಾಳಿ ವೇಳೆ 400 ಕೋಟಿ ರು. ಮೌಲ್ಯದ 814 ಕೇಜಿ ಚಿನ್ನ ಸೇರಿದಂತೆ 500 ಕೋಟಿ ರು. ಅಕ್ರಮ ಆಸ್ತಿ ಸಿಕ್ಕಿತ್ತು. ನವೆಂಬರ್‌ ಅಂತ್ಯದಲ್ಲಿ ಚೆನ್ನೈನ ಮೂವರು ಉದ್ಯಮಿಗಳ ಮೇಲೆ ನಡೆದ ದಾಳಿ ಸಂದರ್ಭ 450 ಕೋಟಿ ರು. ಅಕ್ರಮ ಸಂಪತ್ತು ದೊರೆತಿತ್ತು. ಇದೀಗ ತಮಿಳುನಾಡಿನ ಮತ್ತೊಂದು ಕಂಪನಿಯ ಅಕ್ರಮ ಬಯಲಾದಂತಾಗಿದೆ.

ಚೆಟ್ಟಿನಾಡು ಕಂಪನಿಯ ದಾಳಿಯ ವೇಳೆ 23 ಕೋಟಿ ರು. ದಾಖಲೆ ರಹಿತ ಹಣ ದೊರೆತಿದೆ. ನಿಶ್ಚಿತ ಠೇವಣಿ ರೂಪದಲ್ಲಿ ಇದ್ದ 110 ಕೋಟಿ ರು. ವಿದೇಶಿ ಆಸ್ತಿ ಕೂಡ ಪತ್ತೆಯಾಗಿದೆ. ಇದನ್ನು ಆದಾಯ ತೆರಿಗೆ ರಿಟರ್ನ್‌ನಲ್ಲಿ ಘೋಷಣೆ ಮಾಡಿಕೊಂಡಿಲ್ಲ. ಹೀಗಾಗಿ ಕಪ್ಪು ಹಣ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿಕೆಯಲ್ಲಿ ವಿವರಿಸಿದೆ.

100 ವರ್ಷಗಳಿಂದ ಉದ್ಯಮ ನಡೆಸುತ್ತಿರುವ ಚೆಟ್ಟಿನಾಡ್‌ ಗ್ರೂಪ್‌ ಸಿಮೆಂಟ್‌ ಉತ್ಪಾದನೆ, ಸರಕು ಸಾಗಣೆ, ನಿರ್ಮಾಣ ಮತ್ತಿತರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ. ಚೆನ್ನೈ, ತಿರುಚಿ, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮುಂಬೈನಲ್ಲಿ ಈ ಕಂಪನಿಗೆ ಸೇರಿದ 60 ಕಚೇರಿ, ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಡಿ.9ರಂದು ದಾಳಿ ನಡೆಸಿದ್ದರು. ಚೆನ್ನೈನ ಪ್ರಮುಖ ಉದ್ಯಮ ಸಮೂಹವೊಂದರಲ್ಲಿ ಈ ರೀತಿ ತೆರಿಗೆ ವಂಚನೆಯಾಗಿದೆ ಎಂದಷ್ಟೆತೆರಿಗೆ ಇಲಾಖೆ ಹೇಳಿದೆ. ಆದರೆ ಆ ಸಮೂಹ ಚೆಟ್ಟಿನಾಡ್‌ ಗ್ರೂಪ್‌ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ತೆರಿಗೆ ವಂಚನೆ ಹೇಗೆ?:

ವೆಚ್ಚವನ್ನು ಹೆಚ್ಚು ಎಂದು ತೋರಿಸಿ ಹಣವನ್ನು ಉಳಿಸಲಾಗಿದೆ. ಲಾಭವನ್ನು ಕಡಿಮೆ ತೋರಿಸಲಾಗಿದೆ. ರಶೀದಿಗಳ ಅಕೌಂಟಿಂಗ್‌ ನಡೆದಿಲ್ಲ. ಅಪಮೌಲ್ಯದ ಬೋಗಸ್‌ ಕ್ಲೇಮುಗಳನ್ನು ಮಾಡಿ 435 ಕೋಟಿ ರು. ತೆರಿಗೆ ವಂಚನೆ ಮಾಡಲಾಗಿದೆ. ಇದಲ್ಲದೆ ಸ್ನಾತಕೋತ್ತರ ವೈದ್ಯ ಕೋರ್ಸುಗಳ ಪ್ರವೇಶಕ್ಕೆ ಕ್ಯಾಪಿಟೇಷನ್‌ ಶುಲ್ಕ ಪಡೆದಿರುವ ಸೂಚನೆ ಕೂಡ ದೊರೆತಿವೆ ಎಂದು ತೆರಿಗೆ ಇಲಾಖೆ ವಿವರಿಸಿದೆ.

ದಾಳಿಗೊಳಗಾದ ಚೆಟ್ಟಿನಾಡ್‌ ಗ್ರೂಪ್‌ ಹಾಗೂ ಮತ್ತೊಂದು ಕಂಪನಿ ನಡುವೆ ವಿವಿಧ ಬಂದರುಗಳಲ್ಲಿನ ಮೂಲಸೌಕರ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಹಣಕಾಸು ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಕಂಪನಿಗೆ ಸೇರಿದ ವಿವಿಧ ಲಾಕರ್‌ಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಅವನ್ನು ತೆರೆಯಲಾಗುತ್ತದೆ. ಶೋಧ ಕಾರ್ಯ ಮುಕ್ತಾಯವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಸಿಬಿಡಿಟಿ ತಿಳಿಸಿದೆ.