ಅಮೆರಿಕಾ ವೀಸಾ ಪಡೆಯುವಲ್ಲಿ ದಾಖಲೆ ಬರೆದ ಭಾರತೀಯರು
ಸತತ 2ನೇ ವರ್ಷ 10 ಲಕ್ಷ ಭಾರತೀಯರಿಗೆ ಅಮೆರಿಕ ವಲಸೆರಹಿತ ಮತ್ತು ಪ್ರವಾಸಿ ವೀಸಾ ವಿತರಣೆ. 3.31 ಲಕ್ಷ ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದು, 2 ಲಕ್ಷ ಭಾರತೀಯರು ಅಮೆರಿಕದಲ್ಲಿ ಪದವಿ ಪಡೆದಿದ್ದಾರೆ.
ನವದೆಹಲಿ: ಅಮೆರಿಕವು ಸತತ 2ನೇ ವರ್ಷವೂ ಭಾರತೀಯರಿಗೆ 10 ಲಕ್ಷ ವಲಸೆರಹಿತ ಹಾಗೂ ಪ್ರವಾಸಿ ವೀಸಾ ವಿತರಣೆ ಮಾಡಿದೆ. ಇದು ದಾಖಲೆಯಾಗಿದೆ. ಅಮೆರಿಕ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2024ರಲ್ಲಿ ಭಾರತದ ಅತಿ ಹೆಚ್ಚು, 3,31,000 ವಿದ್ಯಾರ್ಥಿಗಳು ಅಮೆರಿಕಕ್ಕೆ ತೆರಳಿದ್ದಾರೆ. ಇದು 2008-2009ರ ಬಳಿಕ ಇಷ್ಟು ವಿದ್ಯಾರ್ಥಿಗಳು ತೆರಳಿದ್ದು ಇದೇ ಮೊದಲು.
ಅಂತೆಯೇ, ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪದವಿ ಪಡೆದ ಭಾರತೀಯರ ಸಂಖ್ಯೆಯಲ್ಲಿ 2 ವರ್ಷದಲ್ಲಿ ಶೇ.19ರಷ್ಟು ಏರಿಕೆಯಾಗಿದ್ದು, 2 ಲಕ್ಷ ಮಂದಿ ಪದವಿ ಪಡೆದಿದ್ದಾರೆ. ಕಳೆದ 4 ವರ್ಷಗಳಿಂದ ಪ್ರವಾಸ, ಉದ್ಯಮ, ಶಿಕ್ಷಣ ಸೇರಿದಂತೆ ಹಲವು ಉದ್ದೇಶಗಳಿಗೆ ಅಮೆರಿಕಕ್ಕೆ ತೆರಳುವ ಭಾರತೀಯರ ಸಂಖ್ಯೆಯಲ್ಲಿ 5 ಪಟ್ಟು ಏರಿಕೆಯಾಗಿದ್ದು, ಈ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ 2024ರ ಆರಂಭದಿಂದ ಇಲ್ಲಿಯ ವರೆಗೆ (11 ತಿಂಗಳಲ್ಲಿ) ಶೇ.26ರಷ್ಟು ಹೆಚ್ಚಾಗಿದೆ.
ಈಗಾಗಲೇ 50 ಲಕ್ಷ ಭಾರತೀಯರ ಬಳಿ ವಲಸೆರಹಿತ ವೀಸಾ ಇದ್ದು, ಪ್ರತಿ ದಿನ ಹೆಚ್ಚುವರಿ 1000 ಜನರಿಗೆ ವೀಸಾ ವಿತರಿಸಲಾಗುತ್ತಿದೆ ಎಂದು ಭಾರತದಲ್ಲಿರುವ ಅಮೆರಿಕ ದೂತಾವಾಸ ತಿಳಿಸಿದೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಕ್ರಿಶ್ಚಿಯನ್ನರ 19 ಮನೆಗಳಿಗೆ ಬೆಂಕಿ; ಮುಂದುವರಿದ ಅಲ್ಪಸಂಖ್ಯಾತರ ಮೇಲಿನ ದಾಳಿ