ಜುಲೈ 14 ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ ಅಧಿಕೃತ ಘೋಷಣೆ
ಚಂದ್ರನಲ್ಲಿಗೆ ಭಾರತದ ಮೂರನೇ ಪ್ರಯತ್ನವಾಗಿರುವ ಚಂದ್ರಯಾನ-3 ಯೋಜನೆ, ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಉಡ್ಡಯನವಾಗಲಿದೆ ಎಂದು ಇಸ್ರೋ ಅಧಿಕೃತವಾಗಿ ಘೋಷಣೆ ಮಾಡಿದೆ.
ಬೆಂಗಳೂರು (ಜು.6): ಭಾರತವು ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ಬಾಹ್ಯಾಕಾಶ ನೌಕೆಯ ಮೂಲಕ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಿದೆ. ಇಸ್ರೋ ಅಧಿಕೃತವಾಗಿ ಗುರುವಾರ ಇದರ ಮಾಹಿತಿ ನೀಡಿದೆ. ಈ ಹಿಂದೆ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಚಂದ್ರಯಾನವನ್ನು ಜುಲೈ 12 ಮತ್ತು ಜುಲೈ 19 ರ ನಡುವೆ ಉಡಾವಣೆ ಮಾಡಲಾಗುವುದು ಎಂದು ತಿಳಿಸಿದ್ದರು. ಉಡಾವಣಾ ರಾಕೆಟ್ ಸಜ್ಜಾಗಿದೆ. ಬುಧವಾರವೇ ಉಡಾವಣಾ ವಾಹನದಲ್ಲಿ ಚಂದ್ರಯಾನ-3 ಯೋಜನೆಯ ಎಲ್ಲಾ ಭಾಗಗಳನ್ನು ಜೋಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚಂದ್ರಯಾನ-3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಲ್ಲಿ ಯಶಸ್ವಿಯಾದರೆ, ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಈ ಹಿಂದೆ ಅಮೆರಿಕ, ರಷ್ಯಾ ಮತ್ತು ಚೀನಾ ತಮ್ಮ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದವು.
2019ರ ಜುಲೈ 22 ರಂದು ಇಸ್ರೋ ಚಂದ್ರಯಾನ-2 ಯೋಜನೆಯನ್ನು ಉಡ್ಡಯನ ಮಾಡಿತ್ತು. ಅದಾದ ನಾಲ್ಕು ವರ್ಷಗಳ ಬಳಿಕ ಚಂದ್ರಯಾನ-3 ಯೋಜನೆಯ ಮೂಲಕ ಚಂದ್ರನ ನೆಲದ ಮೇಲೆ ಕಾಲಿಡುವ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ. ಜುಲೈ 22 ರಂದು ಉಡ್ಡಯನವಾಗಿದ್ದ ಚಂದ್ರಯಾನ-2 ಎರಡು ತಿಂಗಳ ಬಳಿಕ ಅಂದರೆ, 2019ರ ಸೆಪ್ಟೆಂಬರ್ 7 ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಈ ವೇಳೆ ವಿಕ್ರಮ್ ಲ್ಯಾಂಡರ್ ಚಂದ್ರನ ಈವರೆಗೂ ಅಗೋಚರ ಪ್ರದೇಶವಾಗಿರುವ ದಕ್ಷಿಣ ಧ್ರುವದಲ್ಲಿ ಇಳಿಯುವ ಪ್ರಯತ್ನ ಮಾಡಿತ್ತು. ಆದರೆ, ವಿಕ್ರಮ್ ಲ್ಯಾಂಡರ್ ಚಂದ್ರನ ನೆಲಕ್ಕೆ ಬೀಳುವಾಗ ಸಂಪೂರ್ಣವಾಗಿ ಕ್ರ್ಯಾಶ್ ಆಗಿತ್ತು. ಅಂದಿನಿಂದ ಇಸ್ರೋ ಚಂದ್ರಯಾನ-3 ಯೋಜನೆಯಲ್ಲಿ ತನ್ನ ಕೆಲಸವನ್ನು ಆರಂಭ ಮಾಡಿತ್ತು.
ರಷ್ಯಾದ ಯೋಜನೆ ಪೋಸ್ಟ್‌ಪೋನ್: ಇನ್ನೊಂದೆಡೆ, ರಷ್ಯಾ ತನ್ನ ಮೂನ್ ಲ್ಯಾಂಡರ್ ಮಿಷನ್ ಅನ್ನು ಮುಂದೂಡಿದೆ. ಮೂಲಸೌಕರ್ಯದ ಹೆಚ್ಚುವರಿ ಪರಿಶೀಲನೆಗಳನ್ನು ಪೂರ್ಣಗೊಳಿಸದ ಕಾರಣ ಇದನ್ನು ಮಾಡಲಾಗಿದೆ. 2022ರಲ್ಲಿ ರಷ್ಯಾದ ಈ ಮಿಷನ್ ತಾಂತ್ರಿಕ ಸಮಸ್ಯೆಗಳಿಂದ ಮುಂದೂಡಲ್ಪಟ್ಟಿತು. ಇಂತಹ ಪರಿಸ್ಥಿತಿಯಲ್ಲಿ ಭಾರತದ ಚಂದ್ರಯಾನ-3 ರಷ್ಯಾಕ್ಕಿಂತ ಮೊದಲು ಚಂದ್ರನ ಮೇಲೆ ಇಳಿಯುವ ಅವಕಾಶ ಪಡೆದುಕೊಂಡಿದೆ.
ಚಂದ್ರಯಾನ 3 ಅಧಿಕೃತ ಘೋಷಣೆಯನ್ನು ಮಾಡಿದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಚಂದ್ರಯಾನ-2ನಲ್ಲಿ ಆಗಿರುವ ತಪ್ಪುಗಳನ್ನು ನಾವು ತಿದ್ದಿಕೊಂಡಿದ್ದೇವೆ. ಪ್ರತಿ ಬಾರಿಯೂ ಯಶಸ್ಸು ಸಾಧಿಸಬೇಕು ಅಂದರೆ ಸಾಧ್ಯವಿಲ್ಲ. ಆದರೆ, ತಪ್ಪಾದ ಯೋಜನೆಗಳಿಂದ ಕಲಿತು ಮುಂದಕ್ಕೆ ಸಾಗಬೇಕಿದೆ. ಸೋಲು ಅಂದಾ ಮಾತ್ರಕ್ಕೆ ಪ್ರಯತ್ನವನ್ನೇ ಮಾಡಬೇಡಿ ಅಂದರ್ಥವಲ್ಲ. ಚಂದ್ರಯಾನ-3 ಮೂಲಕ ನಾವು ಸಾಕಷ್ಟು ವಿಚಾರಗಳನ್ನು ಕಲಿತುಕೊಳ್ಳಲಿದ್ದೇವೆ. ಖಂಡಿತವಾಗಿ ನಾವು ಇತಿಹಾಸ ಸೃಷ್ಟಿಸಲಿದ್ದೇವೆ ಎಂದು ತಿಳಿಸಿದ್ದಾರೆ.
Chandrayaan-3: ಜುಲೈ 13ಕ್ಕೆ ಭಾರತದ ಚಂದ್ರಯಾನ!
ಇಸ್ರೋ ಚಂದ್ರಯಾನ ಮಿಷನ್ ಅಡಿಯಲ್ಲಿ ಚಂದ್ರನನ್ನು ಅಧ್ಯಯನ ಮಾಡಲು ಬಯಸಿದೆ. ಭಾರತವು 2008 ರಲ್ಲಿ ಮೊದಲ ಬಾರಿಗೆ ಚಂದ್ರಯಾನ-1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು, ಇದರ ನಂತರ, 2019 ರಲ್ಲಿ ಚಂದ್ರಯಾನ-2 ಉಡಾವಣೆಯಲ್ಲಿ ಭಾರತ ಸಿಹಿ-ಕಹಿ ಫಲಿತಾಂಶ ಕಂಡಿತ್ತು. ಈಗ ಭಾರತವು ಚಂದ್ರಯಾನ-3 ಅನ್ನು ಉಡಾವಣೆ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಇದನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುತ್ತದೆ. ಚಂದ್ರನತ್ತ ಬಾಹ್ಯಾಕಾಶ ನೌಕೆಯನ್ನು ಕೊಂಡೊಯ್ಯಲು ಇಸ್ರೋ ಮೂರು ಭಾಗಗಳನ್ನು ಸಿದ್ಧಪಡಿಸಿದ್ದು, ಇದನ್ನು ತಾಂತ್ರಿಕ ಭಾಷೆಯಲ್ಲಿ ಮಾಡ್ಯೂಲ್ ಎಂದು ಕರೆಯಲಾಗುತ್ತದೆ. ಚಂದ್ರಯಾನ-3 ಮಿಷನ್‌ನಲ್ಲಿನ ಮಾಡ್ಯೂಲ್ 3 ಭಾಗಗಳನ್ನು ಹೊಂದಿದೆ. ಈ ಮೂರರ ಹೊರತಾಗಿ ಚಂದ್ರಯಾನ-2 ಇನ್ನೂ ಒಂದು ಭಾಗವನ್ನು ಹೊಂದಿತ್ತು, ಇದನ್ನು ಆರ್ಬಿಟರ್ ಎಂದು ಕರೆಯಲಾಗುತ್ತದೆ. ಈ ಬಾರಿ ಅವರನ್ನು ಕಳುಹಿಸಲಾಗುತ್ತಿಲ್ಲ. ಚಂದ್ರಯಾನ-2 ರ ಆರ್ಬಿಟರ್ ಈಗಾಗಲೇ ಚಂದ್ರನ ಸುತ್ತ ಸುತ್ತುತ್ತಿದೆ. ಈಗ ಇಸ್ರೋ ಇದನ್ನು ಚಂದ್ರಯಾನ-3ರಲ್ಲಿ ಬಳಸಿಕೊಳ್ಳಲಿದೆ.
ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು