ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಚಂದ್ರಯಾನ-3 ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಆದರೆ, ಮುಂದಿನ ಚಂದ್ರಯಾನದ ವೇಳೆ ಅವರು ಈ ಹುದ್ದೆಯಲ್ಲಿ ಇರುವುದು ಬಹುತೇಕ ಅನುಮಾನವಾಗಿದೆ.

ಬೆಂಗಳೂರು (ಆ.25): ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎಸ್.ಸೋಮನಾಥ್‌ ಅವರೀಗ ಚಂದ್ರಯಾನ-3 ದೊಡ್ಡ ಮಟ್ಟದ ಯಶಸ್ಸಿನಿಂದ ಖುಷಿಯಾಗಿದ್ದಾರೆ. ಏರೋಸ್ಪೇಸ್‌ ಇಂಜಿನಿಯರ್‌ ಹಾಗೂ ರಾಕೆಟ್‌ ವಿಚಾರಗಳಲ್ಲಿ ತಜ್ಞರಾಗಿರುವ ಎಸ್‌.ಸೋಮನಾಥ್‌ ಭಾರತದ ಮುಂದಿನ ಚಂದ್ರಯಾನದ ವೇಳೆ ಇದೇ ಹುದ್ದೆಯಲ್ಲಿ ಇರೋದಿಲ್ಲ. ಏಕೆಂದರೆ, ಅವರು ಅಧಿಕಾರವಧಿ ಇರೋದು ಇನ್ನು ಮೂರು ವರ್ಷಗಳ ಮಾತ್ರ. ಸಾಮಾನ್ಯವಾಗಿ ಇಸ್ರೋದಂಥ ಸಂಸ್ಥೆಗಳಿಗೆ ಅಧ್ಯಕ್ಷರ ಅವಧಿ ಇರುವುದು ಮೂರು ವರ್ಷ ಮಾತ್ರ. 2022ರ ಜನವರಿ 15 ರಂದು ಇಸ್ರೋದ 10ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಕೇರಳ ಮೂಲದ ಎಸ್‌. ಸೋಮನಾಥ್‌, ಅಲಪ್ಪುಜಾ ಜಿಲ್ಲೆಯ ಥರಾವೂರ್‌ ಪಂಚಾಯತ್‌ನವರು. ಇವರ ತಂದೆ ಥರಾವೂರ್‌ ವೇದಂಪರಂಬಲ್‌ ಶ್ರೀಧರ ಪಣಿಕ್ಕರ್‌, ಅವರ ಕಾಲದಲ್ಲಿ ಪ್ರಖ್ಯಾತ ಹಿಂದಿ ಮೇಷ್ಟ್ರಾಗಿದ್ದವರು. ಇವರ ತಾಯಿಯ ಹೆಸರು ಥಂಕಮ್ಮ. ತಾಯಿಯ ಮೂಲ ಆರೂರು.

ತಮ್ಮ ಕುಟುಂಬದ ಮೂಲದ ಬಗ್ಗೆ ಅತಿಯಾದ ಹೆಮ್ಮೆ ವ್ಯಕ್ತಪಡಿಸುವ ಎಸ್‌ ಸೋಮನಾಥ್‌, ತಮ್ಮ ಶಾಲೆಯ ದಿನಗಳನ್ನು ತಾಯಿ ಊರಾದ ಆರೂರಿನಲ್ಲಿಯೇ ಹೆಚ್ಚಾಗಿ ಕಳೆದಿದ್ದರು.ಆರೂರ್‌ನ ಸೇಂಟ್‌ ಆಗಸ್ಟೀನ್‌ ಶಾಲೆಯಲ್ಲಿ ಕಲಿತ ಅವರು ಬಳಿಕ ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದುಕೊಂಡಿದ್ದರು. ತಾಯಿಯ ಮನೆಯ ಕಡೆಯ ಸಂಬಂಧ ಮುರಿದುಹೋಗಬಾರದು ಎನ್ನುವ ಕಾರಣಕ್ಕೆ ತಾಯಿಯ ಊರಿನಲ್ಲಿ ಅವರು ತಮ್ಮದೇ ಖರ್ಚಿನಲ್ಲಿ ಸ್ವಂತ ಮನೆ ಕಟ್ಟಿಸಿದ್ದಾರೆ. ಅಪರೂಪಕ್ಕೊಮ್ಮೆ ಅಲ್ಲಿಗೆ ಭೇಟಿಯನ್ನೂ ನೀಡುತ್ತಾರೆ. ಸೋಮನಾಥ್‌ ಅವರ ಪತ್ನಿಯ ಹೆಸರು ವಲ್ಸಲಾ. ಅಲಪ್ಪುಜಾ ಮೂಲದ ಇವರು ಸದ್ಯ ಸರಕು ಮತ್ತು ಸೇವಾ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ಮಕ್ಕಳಾದ ಮಲ್ಲಿಕಾ ಹಾಗೂ ಮಾಧವ್‌ ಇಬ್ಬರೂ ಇಂಜಿನಿಯರ್‌ಗಳು.

1985ರಲ್ಲಿ ವಿಕ್ರಮ್‌ ಸಾರಾಭಾಯಿ ಸ್ಪೇಸ್‌ ಸೆಂಟರ್‌ಗೆ ಸೇರಿದ್ದ ಸೋಮನಾಥ್‌, ಅಲ್ಲಿ ಪೋಲಾರ್‌ ಸ್ಯಾಟಲೈಟ್‌ ಲಾಂಚ್ ವೆಹಿಕಲ್‌ ಪ್ರಾಜೆಕ್ಟ್‌ನ ಭಾಗವಾಗಿದ್ದರು. 2010ರಲ್ಲಿ ಇವರು ವಿಎಸ್‌ಎಸ್‌ಸಿಯ ಸಹಾಯಕ ನಿರ್ದೇಶಕ (ಯೋಜನೆಗಳು) ಮತ್ತು GSLV Mk-III ಉಡಾವಣಾ ವಾಹನದ ಯೋಜನಾ ನಿರ್ದೇಶಕರಾಗಿದ್ದರು. 2014ರಲ್ಲಿ ಪ್ರಪಲ್ಶನ್‌ ಆಂಡ್‌ ಸ್ಪೇಸ್‌ ಆರ್ಡಿನೆನ್ಸ್‌ ಎಂಟಿಟಿಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಲಿಕ್ವಿಡ್‌ ಪ್ರಪಲ್ಶನ್‌ ಸಿಸ್ಟಮ್‌ ಸೆಂಟರ್‌ನ ನಿರ್ದೇಶಕರಾಗಿದ್ದ ಇವರು 2018ರ ವೇಳೆಗೆ ವಿಎಸ್‌ಎಸ್‌ಸಿಯ ನಿರ್ದೇಶಕರಾಗಿ ಕೆಲಸ ಮಾಡಲು ಆರಂಭಿಸಿದ್ದರು. ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ, ಸೋಮನಾಥ್‌ ಟಿಕೆಎಂ ಕಾಲೇಜ್ ಆಫ್ ಇಂಜಿನಿಯರಿಂಗ್, ಕೇರಳ ವಿಶ್ವವಿದ್ಯಾಲಯ, ಕ್ವಿಲಾನ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರಿನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಡೈನಾಮಿಕ್ಸ್ ಮತ್ತು ನಿಯಂತ್ರಣದಲ್ಲಿ ಪರಿಣತಿಯನ್ನು ಪಡೆದಿದ್ದಾರೆ.

ಚಂದ್ರನ ಮೇಲ್ಮೈಯಲ್ಲಿ ಮೂಡಿದ ರಾಷ್ಟ್ರೀಯ ಲಾಂಛನದ ಚಿತ್ರ ಇದೇನಾ? ವೈರಲ್‌ ಫೋಟೋದ ಸತ್ಯಾಸತ್ಯತೆ ಹೀಗಿದೆ..

ಇಸ್ರೋ ಅಧ್ಯಕ್ಷರ ವೇತನವೆಷ್ಟು: ಸೋಶಿಯಲ್‌ ಮೀಡಿಯಾದಲ್ಲಿ ಇಸ್ರೋ ಅಧ್ಯಕ್ಷರ ವೇತನದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ಇಸ್ರೋ ಅಧ್ಯಕ್ಷರಿಗೆ ತಿಂಗಳಿಗೆ ಮೂಲವೇತನವಾಗಿ 2.5 ಲಕ್ಷ ರೂಪಾಯಿ ಸಿಗುತ್ತಿದೆ. ಅದರೊಂದಿಗೆ ವಿವಿಧ ಭತ್ಯೆಗಳು ಹಾಗೂ ಸರ್ಕಾರಿ ಸವಲತ್ತುಗಳನ್ನು ಇವರು ಪಡೆದುಕೊಳ್ಳುತ್ತಿದ್ದಾರೆ. ಹಿಂದೊಮ್ಮೆ ಇಸ್ರೋ ವಿಜ್ಞಾನಿಗಳಿಗೆ ಸಿಗುವ ವೇತನದ ಬಗ್ಗೆ ಮಾತನಾಡಿದ್ದ ಅವರು, ವಿದೇಶದಲ್ಲಿ ವಿಜ್ಞಾನಿಗಳಿಗೆ ಸಿಗುವ ವೇತನಕ್ಕೆ ಹೋಲಿಸಿದರೆ, ನಮ್ಮಲ್ಲಿ ಸಿಗುವ ವೇತನ ಬಹಳ ಕಡಿಮೆ. ಹಾಗಿದ್ದರೂ ನಮ್ಮ ವಿಜ್ಞಾನಿಗಳು ದೇಶದ ಮೇಲಿನ ಪ್ಯಾಶನ್‌ಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು.

Moon Mission: ಜಪಾನ್‌ನ ಸ್ಲಿಮ್‌ ಚಂದ್ರಯಾನ ಮುಂದೂಡಿಕೆ, ಏನು ಕಾರಣ?