Moon Mission: ಜಪಾನ್‌ನ ಸ್ಲಿಮ್ ಚಂದ್ರಯಾನ ಮುಂದೂಡಿಕೆ, ಏನು ಕಾರಣ?
ಚಂದ್ರನಲ್ಲಿ ಭಾರತದ ಚಂದ್ರಯಾನ-3 ಯೋಜನೆ ಮುಕ್ತಾಯವಾದ ಬಳಿಕವೇ ಜಪಾನ್ ತನ್ನ ಸ್ಲಿಮ್ ಮೂನ್ ಮಿಷನ್‌ಅನ್ನು ಉಡಾವಣೆ ಮಾಡಲಿದೆ.
ನವದೆಹಲಿ (ಆ.25): ಚಂದ್ರನ ಮೇಲೆ ಭಾರತ ತನ್ನ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಸಾಧನೆ ಮಾಡಿದ ಬಳಿಕ ಇಡೀ ವಿಶ್ವದ ಗಮನ ಜಪಾನ್‌ನತ್ತ ನೆಟ್ಟಿತ್ತು. ಆಗಸ್ಟ್ 26 ರಂದು ಅಂದರೆ ಶನಿವಾರ ಜಪಾನ್‌ನ ಜಪಾನೀಸ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (ಜಾಕ್ಸಾ) ತನ್ನ ಚಂದ್ರಯೋಜನೆಯನ್ನು ನಭಕ್ಕೆ ಉಡಾವಣೆ ಮಾಡಬೇಕಿತ್ತು. ಆದರೆ, ಜಪಾನ್ ಇದನ್ನು ಎರಡು ದಿನಗಳ ಕಾಲ ಮುಂದೂಡಿದೆ. ಜಪಾನ್ ತನ್ನ ಸ್ಲಿಮ್ ಮೂನ್ ಮಿಷನ್‌ಅನ್ನು ಆಗಸ್ಟ್ 28ಕ್ಕೆ ಉಡಾವಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಜಪಾನ್ ಕಾಲಮಾನ ಬೆಳಗ್ಗೆ 9.26 ನಿಮಿಷಕ್ಕೆ ಚಂದ್ರ ಯೋಜನೆ ಉಡಾವಣೆಯಾಗಲಿದೆ. ಕೆಟ್ಟ ವಾತಾವರಣದ ಕಾರಣದಿಂದಾಗಿ ಉಡಾವಣೆಯನ್ನು ಮುಂದೂಡಿಕೆ ಮಾಡುತ್ತಿರುವುದಾಗಿ ಜಾಕ್ಸಾ ತಿಳಿಸಿದೆ. ಹಾಗೇನಾದರೂ ಆಗಸ್ಟ್ 28 ರಂದು ಕೆಟ್ಟ ವಾತಾವರಣದ ಕಾರಣ ಉಡಾವಣೆ ಸಾಧ್ಯವಾಗದೇ ಇದ್ದಲ್ಲಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 15ರ ಒಳಗಿನ ಅವಧಿಯಲ್ಲಿ ಎನ್ನ ಎಚ್2ಎ ಎಫ್47 ರಾಕೆಟ್‌ನಲ್ಲಿ ಸ್ಲಿಮ್‌ಅನ್ನು ಉಡಾವಣೆ ಮಾಡುವುದಾಗಿ ತಿಳಿಸಿದೆ.
ಜಾಕ್ಸಾ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಲ್ಲಿ ಯೊಶಿನೊಬು ಉಡಾವಣಾ ಸಂಕೀರ್ಣದಿಂದ ಸ್ಲಿಮ್ ಉಡಾವಣೆಯಾಗಲಿದೆ. ನಾಳೆಯಿಂದ ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ ಆಗಸ್ಟ್ 28 ರಂದು ಉಡಾವಣೆ ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ನಾವು ಮರು ಮೌಲ್ಯಮಾಪನ ಮಾಡುತ್ತೇವೆ ಎಂದು ಜಾಕ್ಸಾ ತಿಳಿಸಿದೆ. ಜಪಾನ್‌ನ ಸ್ಲಿಮ್ ಮುಂದೂಡಿಕೆಯಾಗಿರುವ ಕಾರಣ, ಭಾರತದ ಚಂದ್ರಯಾನ-3 ಯೋಜನೆಯ ಗುರಿಗಳು ಚಂದ್ರನ ನೆಲದಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಿದ ಬಳಿಕವೇ ಜಪಾನ್ ಚಂದ್ರನ ಮೇಲೆ ಲ್ಯಾಂಡ್ ಆಗುವ ಪ್ರಯತ್ನ ಮಾಡಲಿದೆ.
ಜಪಾನ್ ತನ್ನ ಚಂದ್ರಯೋಜನೆಯಲ್ಲಿ ಸ್ಲಿಮ್ ಎನ್ನುವ ಲ್ಯಾಂಡರ್‌ಅನ್ನು ಕಳುಹಿಸಿಕೊಡಲಿದೆ. ಸ್ಲಿಮ್ ಲ್ಯಾಂಡರ್ 9 ಫೀಟ್ ಎತ್ತರ, 8.8 ಫೀಟ್ ಅಗಲ ಇರಲಿದೆ. ಸ್ಲಿಮ್ ನೌಕೆಯಲ್ಲಿ ಲ್ಯಾಂಡಿಂಗ್ ರಾಡಾರ್ ಕೂಡ ಇರಲಿದೆ. ಇದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಹಾಯ ಮಾಡಲಿದೆ. ಆಗಬಹುದಾದ ಸಮಸ್ಯೆಗಳನ್ನು ಗುರುತಿಸಲು ಹಾಗೂ ನ್ಯಾವಿಗೇಷನ್‌ಗೆ ಸಹಾಯ ಮಾಡಲು ಇಮೇಜ್ ಮ್ಯಾಚಿಂಗ್ ವ್ಯವಸ್ಥೆಯನ್ನೂ ಹೊಂದಿರಲಿದೆ.
ಅದರೊಂದಿಗೆ ನಾಸಾ ಜೊತೆ ಸೇರಿ ನಿರ್ಮಾಣ ಮಾಡಿರುವ, ಎಕ್ಸ್‌ರಿಸಮ್ ಎನ್ನುವ ಪೇಲೋಡ್‌ಅನ್ನೂ ನೌಕೆ ಹೊಂದಿದೆ. ಎರಡು ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಮಹತ್ವಾಕಾಂಕ್ಷೆಯ ಮಿಷನ್ ಬ್ರಹ್ಮಾಂಡದ ಅತ್ಯಂತ ಬಿಸಿಯಾದ ಪ್ರದೇಶಗಳು, ದೊಡ್ಡ ರಚನೆಗಳು ಮತ್ತು ಬಲವಾದ ಗುರುತ್ವಾಕರ್ಷಣೆಯ ವಸ್ತುಗಳನ್ನು ಅಧ್ಯಯನ ಮಾಡುತ್ತದೆ. ಆದರೆ, ಜಾಕ್ಸಾದ ಸ್ಲಿಮ್ ಒಂದು ಸಣ್ಣ ಪರಿಶೋಧಕರಿಂದ ನಿಖರವಾದ ಲ್ಯಾಂಡಿಂಗ್ ತಂತ್ರಗಳನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ.
ಇನ್ನೊಂದೆಡೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಾವುದೇ ಸಮಸ್ಯೆ ಇಲ್ಲದೆ ಗಮ್ಯಸ್ಥಾನ ತಲುಪಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದ ಮೇಲೆ ಮುಟ್ಟಿದ ಬೆನ್ನಲ್ಲಿಯೇ, ಲ್ಯಾಂಡರ್‌ನ ಒಳಗಿದ್ದ ಪ್ರಗ್ಯಾನ್ ರೋವರ್ ಕೂಡ ಚಂದ್ರನ ನೆಲವನ್ನು ಸ್ಪರ್ಶ ಮಾಡಿದ್ದು, ಚಲಿಸಲು ಆರಂಭಿಸಿದೆ.
Moon Mission: ಭಾರತವಾಯ್ತು ಈಗ ಜಪಾನ್‌ನ ಸರದಿ, ಆ.26ಕ್ಕೆ 'ಸ್ಲಿಮ್' ಉಡಾವಣೆ ಮಾಡಲಿರುವ ಜಾಕ್ಸಾ!
"ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ" ಎಂದು ಬಾಹ್ಯಾಕಾಶ ಸಂಸ್ಥೆ ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ, ದೂರ ಅಥವಾ ಪ್ರಯಾಣದ ದಿಕ್ಕಿನಂತಹ ಹೆಚ್ಚಿನ ವಿವರಗಳನ್ನು ಇಸ್ರೋ ಬಹಿರಂಗ ಮಾಡಿಲ್ಲ. ಅದರೊಂದಿಗೆ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್‌ನಲ್ಲಿದ್ದ ಪೇಲೋಡ್‌ಗಳ ಕೆಲಸಗಳನ್ನೂ ಆರಂಭಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
Chandrayaan 3: ಮುಂದಿನ ಮೂನ್ ಮಿಷನ್ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!