Asianet Suvarna News Asianet Suvarna News

ನಾವು ಹೇಳದ ‘ಚಂದ್ರರಹಸ್ಯ’ ಇನ್ನೂ ಇದೆ: ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌

ಇಸ್ರೋದ ಮುಂದಿನ ಯೋಜನೆಗಳನೇನು? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಸ್ವತಃ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

isro chief s somanath on moon secret details in asianet news exclusive interview with rajesh kalra gvd
Author
First Published Sep 22, 2023, 6:02 AM IST

ಸಂದರ್ಶನ: ರಾಜೇಶ್‌ ಕಾಲ್ರಾ, ಏಷ್ಯಾನೆಟ್‌ ನ್ಯೂಸ್‌

ಯಾವಾಗ ದೇಶದ ಸಾಧನೆಯನ್ನು ಇಡೀ ವಿಶ್ವವೇ ಗುರುತಿಸುತ್ತದೆಯೋ ಆಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇಸ್ರೋ ಈ ಥರಹದ ಅನುಭವವನ್ನು ಪದೇ ಪದೇ ನೀಡುತ್ತಿದೆ. ಚಂದ್ರಯಾನ-3 ಯಶಸ್ಸಿನಿಂದ ವಿಶ್ವವೇ ಬೆರಗಾಗಿದೆ. ಇಷ್ಟು ಕಡಿಮೆ ಬಜೆಟ್‌ನಲ್ಲಿ ಇಂತಹ ಅದ್ಭುತ ಸಾಧನೆ ಹೇಗೆ ಮಾಡಿದರು ಎಂದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಹಾಗಿದ್ದರೆ ಇಸ್ರೋದ ಮುಂದಿನ ಯೋಜನೆಗಳನೇನು? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಸ್ವತಃ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ವಿಕ್ರಂ ಹಾಗೂ ಪ್ರಗ್ಯಾನ್ ಇರುವ ಭಾಗದಲ್ಲಿ 22ಕ್ಕೆ ಮತ್ತೆ ಸೂರ್ಯನ ಬೆಳಕು ಬೀಳಲಿದೆ. ನಾವು ಏನನ್ನು ನೀರಿಕ್ಷಿಸಬಹುದು?
ಚಂದ್ರಯಾನ-3ರ ಮೇಲೆ ನಮಗಿರುವ ಆತ್ಮವಿಶ್ವಾಸದಂತೆ ವಿಕ್ರಂ ಲ್ಯಾಂಡರ್ ಹಾಗೂ ರೋವರ್ ಮತ್ತೆ ಕೆಲಸ ಮಾಡಲಿದೆ. ನಾವು ಅಂದುಕೊಂಡಂತೆ ಆದರೆ 22ಕ್ಕೆ ಮತ್ತೊಂದು ಇತಿಹಾಸ ಸೃಷ್ಟಿಯಾಗಲಿದೆ. ಅಂತಹ ಕಡಿಮೆ ತಾಪಮಾನದಲ್ಲಿ ಹೆಚ್ಚು ಕಾಲ ಉಪಕರಣಗಳು ಬದುಕುಳಿಯೋದು ಕಷ್ಟ. ಆದರೂ ನಮ್ಮ ಉಪಕರಣಗಳು ಕೆಲಸ ಮಾಡುತ್ತವೆ ಎಂಬ ನಂಬಿಕೆ ಇದೆ.

ಭಾರತ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದುವ ದಿನ ದೂರವಿಲ್ಲ!

* ಅಂತಹ ಕಡಿಮೆ ತಾಪಮಾನದಲ್ಲಿ ನೀವು ಮೊದಲೇ ಟೆಸ್ಟ್‌ ಮಾಡಿದ್ದಿರಾ?
ಹೌದು. ಅದೇ ರೀತಿಯ ಪರಿಸ್ಥಿತಿಯಲ್ಲಿ ಪರೀಕ್ಷೆ ಮಾಡಿದ್ದೆವು. ಅದರಲ್ಲೂ ರೋವರ್‌ ಅನ್ನು ಸಂಪೂರ್ಣ ಪರೀಕ್ಷಿಸಿದ್ದೆವು. ಆದರೆ ವಿಕ್ರಂ ವಿಷಯಕ್ಕೆ ಬಂದರೆ ನಾವು ಎಲ್ಲವನ್ನೂಪರೀಕ್ಷಿಸಿರಲಿಲ್ಲ. ಏಕೆಂದರೆ ಅದು ತುಂಬಾ ದೊಡ್ಡ ಪ್ರಕ್ರಿಯೆ. ಪ್ರಗ್ಯಾನ್‌ ಮೇಲೆ ಎಲ್ಲ ಪರೀಕ್ಷೆ ನಡೆಸಿದ್ದೆವು. ಅದು ಕೆಲಸ ಮಾಡಿದ ಮೇಲೆ ವಿಕ್ರಂ ಕೂಡ ಕೆಲಸ ಮಾಡುವ ವಿಶ್ವಾಸ ಬಂತು. ವಿಕ್ರಂನಲ್ಲಿ ಈಗ ಎಲ್ಲವೂ ಮತ್ತೆ ಕೆಲಸ ಮಾಡಬೇಕಿಲ್ಲ. ಕೇವಲ ಕಮ್ಯುನಿಕೇಷನ್ ಕೆಲಸ ಮಾಡಿದರೆ ಸಾಕು. ಅಲ್ಲಿರುವ ಪ್ರೈಮರಿ ಕಂಪ್ಯೂಟರ್ ಕೆಲಸ ಮಾಡಿದರೆ ಸಾಕು. ನಾವು ಇಲ್ಲಿಂದ ರೋವರ್‌ ಅನ್ನು ನಿಯಂತ್ರಿಸಬಹುದು.

* ಹಾಗಾದರೆ ಈಗ ಕಮಾಂಡ್ ಯಾರಿಗೆ ಹೋಗುತ್ತದೆ? ವಿಕ್ರಂಗೋ ಅಥವಾ ಪ್ರಗ್ಯಾನ್‌ಗೋ?
ಮೊದಲು ಕಮಾಂಡ್ ವಿಕ್ರಂ ರಿಸೀವ್ ಮಾಡುತ್ತದೆ. ನಂತರ ಅದು ರೋವರ್‌ಗೆ ನೀಡುತ್ತದೆ. ರೋವರ್‌ನಲ್ಲಿರುವ ಅಂಟೆನಾ ಮೂಲಕ ಸಂವಹನ ನಡೆಯುತ್ತದೆ. ಕಮಾಂಡ್ ಕೊಡೋದಕ್ಕೆ ಈ ಎರಡು ಚಾನಲ್ ಓಪನ್ ಇರಬೇಕು. ಅದರಲ್ಲಿರುವ ಎರಡು ಕ್ಯಾಮೆರಾಗಳು ಕೆಲಸ ಮಾಡಬೇಕು. ಅವು ಫೋಟೋ ತೆಗೆದು ವಿಕ್ರಂಗೆ ಕಳುಹಿಸಬೇಕು. ವಿಕ್ರಂ ಅವುಗಳನ್ನು ಭೂಮಿಗೆ ಕಳುಹಿಸಬೇಕು.

* ನೀವು ಕಮಾಂಡ್‌ ಹೇಗೆ ಕೊಡುತ್ತೀರಿ?
ಕಮಾಂಡ್ ಅನ್ನೋದು ಒಂದು ವಿಶೇಷ ಕಾರ್ಯ. ಇದರಲ್ಲಿ ಒಂದೆರಡಲ್ಲ ಸಾಕಷ್ಟು ಕಮಾಂಡ್ ಇರುತ್ತವೆ. ಒಳಗೆ ಬಾ, ಹೊರಗೆ ಹೋಗು ಎಂದು ಕಮಾಂಡ್‌ ಕೊಟ್ಟರೆ ಮುಗಿಯುವುದಿಲ್ಲ. ಒಂದಷ್ಟು ಕಮಾಂಡ್ ಒಂದೇ ಸಲ ಕೊಡಬೇಕಾಗುತ್ತದೆ. ಕೆಲವು ಕಮಾಂಡ್‌ಗಳನ್ನು ಸಮಯವೇ ನಿರ್ಧರಿಸುತ್ತದೆ. ಈ ಸಮಯದಲ್ಲಿ ಇದನ್ನು ಮಾಡಬೇಕು ಎಂದು ಮೊದಲೇ ಪ್ರೋಗ್ರಾಂ ಮಾಡಿರುತ್ತೇವೆ. ಅದರಂತೆ ಆ ಸಮಯದಲ್ಲಿ ಅದೇ ನಿರ್ಧಾರ ತೆಗೆದುಕೊಳ್ಳುತ್ತದೆ. ಅದನ್ನು ನಾವು ಪದೇ ಪದೇ ಚೆಕ್ ಮಾಡುತ್ತೇವೆ. ಸರಿಯಾದ ಜಾಗದಲ್ಲಿ ಸ್ಟೋರ್ ಆಗಿದೆಯಾ ಇಲ್ಲವಾ ಎಂದು ಪರೀಕ್ಷಿಸುತ್ತೇವೆ. ಎಲ್ಲಾ ಚೆಕ್ ಆದ ಮೇಲೆ ಸರಿಯಾಗಿದೆ ಎಂದರೆ ಎಕ್ಸಿಕ್ಯೂಟ್ ಮಾಡಲು ಕಮಾಂಡ್ ಕೊಡುತ್ತೇವೆ. ನಮ್ಮ ಸಿಗ್ನಲ್‌ಗಳು ಬೆಳಕಿನ ವೇಗದಲ್ಲೇ ಪ್ರಯಾಣಿಸುತ್ತವೆ. ಚಂದ್ರನಲ್ಲಿಗೆ ಕಳಿಸಬೇಕಂದರೆ ಒಂದೆರಡು ಸೆಕೆಂಡ್ ತೆಗೆದುಕೊಳ್ಳುತ್ತದೆ. ನಮ್ಮ ರೋವರ್‌ ಒಂದು ಕಡೆ ಹೋಗುತ್ತಿರುತ್ತದೆ ಅಂದುಕೊಳ್ಳಿ. ಆ ಜಾಗದಲ್ಲಿ ಪರಿಸ್ಥಿತಿ ಸರಿ ಇಲ್ಲ, ಈ ಕಡೆ ತಿರುಗು ಎಂದು ಇಲ್ಲಿಂದಲೇ ಹೇಳಬಹುದು. ಅಥವಾ ಏನಾದರೂ ಅಡ್ಡ ಬಂದರೆ ಅದನ್ನು ಬೇರೆ ದಿಕ್ಕಿಗೆ ತಿರುಗಿಸಬಹುದು. ಅದರಲ್ಲಿರುವ ಅಂಟೆನಾ ಅಥವಾ ಕ್ಯಾಮೆರಾಗಳ ಪೊಸಿಷನ್‌ ಇಲ್ಲಿಂದಲೇ ಬದಲಿಸಬಹುದು. ಇದನ್ನೆಲ್ಲ ಲೈವ್‌ ಆಗಿ ಮಾಡಬಹುದು.

* ಚಂದ್ರನಿಂದ ನೀವು ಫೋಟೋಗಳನ್ನು ಸ್ವೀಕರಿಸಿದ್ದೀರಲ್ಲ, ಅದರ ಪ್ರಕ್ರಿಯೆ ಹೇಗೆ?
ಅದು ಸ್ವಲ್ಪ ಕಷ್ಟ ಇದೆ. ಚಂದ್ರಯಾನ-2 ಆರ್ಬಿಟರ್‌ನಲ್ಲಿ ಹೈ ರೆಸಲ್ಯೂಷನ್ ಕ್ಯಾಮರಾ ಇದೆ. ಅದರಲ್ಲಿ ಒಂದು ಟ್ರಾನ್ಸ್ಮಿಷನ್ ರೇಟ್ ಇರುತ್ತದೆ. ಅದು ಬ್ಯಾಂಡ್ ಮೇಲೆ ನಿರ್ಧಾರವಾಗುತ್ತದೆ. ಈಗ ನಾವು ಎಕ್ಸ್ ಬ್ಯಾಂಡ್ ಬಳಸಿದ್ದೇವೆ. ಕೆಲವು ಸಲ ಎಸ್ ಬ್ಯಾಂಡ್ ಬಳಸುತ್ತೇವೆ. ಡೇಟಾ ವೇಗವನ್ನು ನಿರ್ಧಾರ ಮಾಡೋದು ಬ್ಯಾಂಡ್‌ಗಳು. ಸಿಗ್ನಲ್ ಪವರ್, ಭೂಮಿ ಮೇಲಿನ ಅಂಟೆನಾಗಳು ಇವೆಲ್ಲಾ ಎಷ್ಟು ಸ್ಪೀಡ್‌ನಲ್ಲಿ ನಮಗೆ ಫೋಟೋ ಬರುತ್ತದೆ ಎನ್ನುವುದನ್ನು ನಿರ್ಧಾರ ಮಾಡುತ್ತವೆ. ಉದಾಹರಣೆಗೆ, ಪ್ರಗ್ಯಾನ್ ಒಂದು ಫೋಟೋ ತೆಗೆದು ಲ್ಯಾಂಡರ್‌ಗೆ ಕಳಿಸಬೇಕು. ಅದು ಭೂಮಿಗೆ ಕಳಿಸಬೇಕು. ಒಂದು ಫೋಟೋ ಕಳಿಸಲು ಗಂಟೆಗಳೇ ಹಿಡಿಯುತ್ತವೆ. ಯಾಕೆಂದರೆ ಪ್ರಗ್ಯಾನ್‌ನಲ್ಲಿ ತುಂಬಾ ಕಡಿಮೆ ಶಕ್ತಿಯಿದೆ. ಅಲ್ಲಿ ಬಳಸಿರೋ ಬ್ಯಾಟರಿ ತುಂಬಾ ಕಡಿಮೆ ಶಕ್ತಿಯದು. ವೇಗವಾಗಿ ಕಳಿಸಬೇಕೆಂದರೆ ತುಂಬಾ ಶಕ್ತಿ ಬೇಕು. ಶಕ್ತಿ ಕಡಿಮೆ ಮಾಡಿದರೆ ವೇಗ ಕೂಡ ಕಡಿಮೆಯಾಗುತ್ತದೆ. ನಾವು ಬ್ಯಾಟರಿ ಉಳಿಸೋಕೆ ಈ ರೀತಿ ಮಾಡಿದ್ದೇವೆ. ಏಕೆಂದರೆ ಬ್ಯಾಟರಿ ಹೆಚ್ಚು ದಿನ ಬಾಳಿಕೆ ಬರಬೇಕು. ಕೇವಲ ಅದರಲ್ಲಿರುವ ಪ್ಯಾನೆಲ್‌ನಿಂದ ಮಾತ್ರ ಶಕ್ತಿ ಉತ್ಪಾದನೆಯಾಗುತ್ತದೆ. ಅಲ್ಲಿ ಸೂರ್ಯನ ಬೆಳಕು ಕೂಡ ಚೆನ್ನಾಗಿ ಬೀಳೋದಿಲ್ಲ. ಈ ಎಲ್ಲಾ ಕಾರಣಗಳಿಂದ ಫೋಟೋ ಕಳಿಸೋದು ತಡವಾಗುತ್ತದೆ. ಆದರೆ ವಿಕ್ರಂ ಲ್ಯಾಂಡರ್‌ನಿಂದ ಫೋಟೋ ವೇಗವಾಗಿ ಬರುತ್ತದೆ. ಆರ್ಬಿಟರ್‌ನಿಂದ ಫೋಟೋಗಳು ಇನ್ನೂ ವೇಗವಾಗಿ ಬರುತ್ತವೆ.

* ಈಗ ಆದಿತ್ಯಯಾನಕ್ಕೆ ಬರೋಣ. ಅಲ್ಲಿ ಏನಾಗುತ್ತಿದೆ?
ಆದಿತ್ಯ ಈಗ ಭೂಮಿಯನ್ನು ಸುತ್ತು ಹಾಕಿ ಕಕ್ಷೆಯಿಂದ ಹೊರಗೆ ಹೋಗಿ 1.25 ಲಕ್ಷ ಕಿ.ಮೀ. ದೂರದಲ್ಲಿ ಸೂರ್ಯನತ್ತ ತನ್ನ ಪ್ರಯಾಣ ಬೆಳೆಸಿದೆ. ಲಾಗ್ರಾಂಜ್ ಪಾಯಿಂಟ್‌ಗೆ ಹೋಗಿ ತಲುಪಲು 110 ದಿನಗಳು ಬೇಕು. ಈಗ ಎಲ್1 ಕೂಡ ಸಾಗುತ್ತಿದೆ, ಭೂಮಿ ಕೂಡ ಸಾಗುತ್ತಿದೆ, ಸೂರ್ಯ ಕೂಡ ಸಾಗುತ್ತಿದೆ. ಎಲ್ಲವೂ ಒಟ್ಟಿಗೇ ಸಾಗುತ್ತಿವೆ. ಅದರ ಮೇಲೆ ನಾವು ನಿರಂತರವಾಗಿ ಡೀಪ್‌ ಸ್ಪೇಸ್‌ ನೆಟ್ವರ್ಕ್‌ ಅಂಟೆನಾಗಳಿಂದ ನಿಗಾ ಇಡುತ್ತಿದ್ದೇವೆ. ಗಣಿತದ ಲೆಕ್ಕಾಚಾರದ ಮೂಲಕ ಸರಿಯಾಗಿ ಹೋಗುತ್ತಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತೇವೆ. ಅದು15 ಲಕ್ಷ ಕಿ.ಮೀ. ದೂರ ಸಾಗಬೇಕು. ಇಲ್ಲಿ ಒಂದು ಸಣ್ಣ ತಪ್ಪು ಆದರೂ ಅಲ್ಲಿ ಲಕ್ಷ ಕಿ.ಮೀ. ತಪ್ಪಾಗಿರುತ್ತದೆ! ಹೀಗಾಗಿ ಏನೇ ತಪ್ಪಾದರೂ ತಕ್ಷಣ ಅದನ್ನು ಸರಿಪಡಿಸಬೇಕಿದೆ.

* ರಾಕೆಟ್‌ ಹಾಗೂ ಉಪಗ್ರಹ ತಯಾರಿಕೆಯಿಂದ ಹಿಡಿದು ನಿಯಂತ್ರಣ, ಫೋಟೋ ಸಂಸ್ಕರಣೆ, ಸಂಶೋಧನೆ ಇದನ್ನೆಲ್ಲ ಎಲ್ಲೆಲ್ಲಿ ಮಾಡುತ್ತೀರಿ?
ರಾಕೆಟ್‌ಗಳನ್ನು ತಿರುವನಂತಪುರದಲ್ಲಿ ತಯಾರಿಸುತ್ತೇವೆ. ಉಪಗ್ರಹಗಳನ್ನು ಬೆಂಗಳೂರಿನಲ್ಲೇ ಮಾಡುತ್ತೇವೆ. ಉಪಗ್ರಹಗಳ ಹಾರ್ಡ್ವೇರ್ ಹಾಗೂ ಎಲ್ಲವನ್ನೂ ಸೇರಿಸುವ ಕೆಲಸ ಇಲ್ಲೇ ಮಾಡುತ್ತೇವೆ. ಇದಕ್ಕೆ ಬೇಕಾದ ಭಾಗಗಳೆಲ್ಲಾ ದೇಶಾದ್ಯಂತ ಇರುವ ಇಸ್ರೋ ಕೇಂದ್ರಗಳಿಂದ ಬರುತ್ತವೆ. ಉದಾಹರಣೆಗೆ, ಲ್ಯಾಂಡಿಂಗ್ ಇಂಜಿನ್. ನಾವು ನಾಲ್ಕು ರೀತಿಯ ಇಂಜಿನ್‌ ಬಳಸುತ್ತೇವೆ. ಇದೆಲ್ಲಾ ನಮಗೆ ಬೆಂಗಳೂರಿನ ಎಲ್ಪಿಎಸ್ಸಿಯಿಂದ ಬರುತ್ತದೆ. ಕ್ಯಾಮೆರಾ ಅಹಮದಾಬಾದ್‌ನಿಂದ ಬಂದಿದೆ. ಇಸ್ರೋದಲ್ಲಿ ಸಾಕಷ್ಟು ಕೊಠಡಿಗಳಿವೆ. ಬೇರೆ ಬೇರೆ ಕಡೆ ಅಸೆಂಬ್ಲಿ ಜಾಗಗಳಿವೆ. ಪರೀಕ್ಷೆಗೆ ಬೇರೆ ಜಾಗವಿದೆ. ನನಗೆ ಗೊತ್ತಿರುವ ಪ್ರಕಾರ ಒಂದೇ ಬಾರಿಗೆ 10 ಉಪಗ್ರಹಗಳನ್ನು ಜೋಡಿಸಿದ ಉದಾಹರಣೆ ಇದೆ. ಬೆಂಗಳೂರಿನಲ್ಲೇ ಇನ್ನೊಂದು ಕ್ಯಾಂಪಸ್‌ ಕೂಡ ಇದೆ.

* ವಿಕ್ರಂ ಪೇಲೋಡ್‌ನಂತಹ ಒಂದು ಪೇಲೋಡ್‌ ತಯಾರಿಸಲು ಎಷ್ಟು ಸಮಯ ಬೇಕು?
6ರಿಂದ 7 ವರ್ಷಗಳು ಬೇಕು. ಉಪಕರಣಗಳನ್ನು ಜೋಡಿಸಿ ತುಂಬಾ ಪರೀಕ್ಷೆಗಳನ್ನು ಮಾಡಬೇಕು. ಪ್ರತಿ ಟೆಸ್ಟ್ ಆದ ಬಳಿಕವೂ ಡಿಸೈನ್ ಬದಲಾವಣೆ ಆಗುತ್ತದೆ. ಮೊದಲು ನಾವು ಇಂಜಿನಿಯರಿಂಗ್ ಮಾಡೆಲ್ ಮಾಡಿಕೊಳ್ಳುತ್ತೇವೆ. ಬಳಿಕ ಅದನ್ನ ಟೆಸ್ಟ್ ಮಾಡುತ್ತೇವೆ. ಅದರಲ್ಲೇ ಬದಲಾವಣೆ ಗೊತ್ತಾಗುತ್ತೆ. ಇಂಜಿನಿಯರಿಂಗ್ ಮಾಡೆಲ್ ಓಕೆ ಆದ ಮೇಲೆ ಪ್ರೋಟೋಟೈಪ್ ಮಾಡುತ್ತೇವೆ. ಅದು ಓಕೆ ಆದ ಮೇಲೆ ಅಂತಿಮವಾಗಿ ಸ್ಯಾಟಲೈಟ್ ಮಾಡುತ್ತೇವೆ. ಆದರೆ ನಾವು ಸಂವಹನ ಸ್ಯಾಟಲೈಟ್ ನಿರ್ಮಿಸಬೇಕಾದರೆ ನಾವು ಇಂಜಿನಿಯರಿಂಗ್ ಮಾಡೆಲ್ ಅಥವಾ ಪ್ರೊಟೋಟೈಪ್‌ ಮಾಡೋದಿಲ್ಲ. ನೇರವಾಗಿ ಉಪಗ್ರಹವನ್ನೇ ನಿರ್ಮಾಣ ಮಾಡುತ್ತೇವೆ. ನಮಗೆ ತುಂಬಾಸಮಯ ಹಿಡಿಯೋದು ಅದರ ಭಾಗಗಳನ್ನು ಸಂಗ್ರಹಿಸುವುದಕ್ಕೆ. ಅಸೆಂಬ್ಲಿ, ಪರೀಕ್ಷೆಗಳಿಗೆ ಸುಮಾರು ಒಂದು ವರ್ಷ ಸಮಯ ಹಿಡಿಯಬಹುದು. ಎಲ್ಲಾ ರೆಡಿ ಇದೆ ಅಂದರೆ ಒಂದು ವರ್ಷದಲ್ಲಿ ಅಸೆಂಬ್ಲಿ ಮಾಡಿ ಟೆಸ್ಟಿಂಗ್ ಮಾಡಬಹುದು.

* ನೀವು ಬಳಸುವ ಸಾಧನಗಳಲ್ಲಿ ದೇಶೀಯ ವಸ್ತುಗಳೆಷ್ಟು?
ಅಂತರಿಕ್ಷದ ಸಾಧನಗಳೆಲ್ಲಾ ಎಲೆಕ್ಟ್ರಾನಿಕ್ ಸಾಧನಗಳು. ಚಿಪ್‌ಗಳು, ಪ್ರೊಸೆಸರ್, ಮೆಮೊರಿ ಸಾಧನಗಳು, ರೇಡಿಯೇಷನ್ ಸಾಧನಗಳನ್ನು ಹೊರತುಪಡಿಸಿದರೆ ಉಳಿದೆಲ್ಲವನ್ನೂ ದೇಶೀಯವಾಗಿಯೇ ಅಭಿವೃದ್ಧಿಪಡಿಸುತ್ತೇವೆ. ಹಾರ್ಡ್‌ವೇರ್‌ಗಳನ್ನೆಲ್ಲ ನಮ್ಮ ದೇಶದಲ್ಲೇ ತಯಾರಿಸುತ್ತೇವೆ. ಅದರೊಳಗಿರುವ ಕೆಲ ಚಿಪ್‌ಗಳು, ಸರ್ಕಿಟ್‌ಗಳು ಹಾಗೂ ಮೆಮೊರಿಗಳನ್ನು ವಿದೇಶದಿಂದ ತರಿಸುತ್ತೇವೆ. ಅವುಗಳನ್ನೂ ನಾವೇ ತಯಾರಿಸಲು ತುಂಬಾ ಸಮಯ ಹಿಡಿಯುತ್ತದೆ. ರಾಕೆಟ್‌ಗಳಲ್ಲಿ ನಾವು ಶೇ.90ರಷ್ಟು ದೇಶಿ ವಸ್ತು ಬಳಸುತ್ತೇವೆ. ಸ್ಯಾಟಲೈಟ್‌ನಲ್ಲಿ ಶೇ.60ರಷ್ಟು ದೇಶಿ ವಸ್ತು ಬಳಸುತ್ತೇವೆ.

* ವಿಕ್ರಂ ಲ್ಯಾಂಡರ್‌ನಲ್ಲಿ ಇನ್ನೂ ಎಷ್ಟು ಇಂಧನ ಉಳಿದುಕೊಂಡಿದೆ?
ನಮ್ಮ ಪ್ರಕಾರ, ಇನ್ನೂ ಒಂದು 90 ಕೆಜಿಯಷ್ಟು ಇಂಧನ ಉಳಿದುಕೊಂಡಿದೆ. ಅಗತ್ಯಬಿದ್ದರೆ ಅದನ್ನು ಅಲ್ಲಿಂದಲೇ ಇನ್ನೂ ಬೇರೆ ಕಡೆ ಹಾರಿಸಬಹುದು. ಆದರೆ ನಮಗೆ ತುಂಬಾ ಸವಾಲುಗಳಿವೆ. ಅಲ್ಲಿನ ತಾಪಮಾನ ಮೈನಸ್ 180 ಡಿಗ್ರಿಗೆ ಇಳಿದಾಗ ಎಲ್ಲ ದ್ರವಗಳೂ ಗಟ್ಟಿಯಾಗಿಬಿಡುತ್ತವೆ. ಎಲ್ಲಾ ಪೈಪ್‌ಗಳಲ್ಲಿನ ದ್ರವವೂ ಗಟ್ಟಿಯಾಗುತ್ತದೆ. ಅದು ಮತ್ತೆ ಕರಗಿ ದ್ರವವಾಗುವವರೆಗೂ ಕಾಯಬೇಕು. ಅದನ್ನೆಲ್ಲಾ ನೋಡಿಕೊಂಡು, ಇನ್ನೂ ಏನಾದರೂ ಮಾಡಬೇಕು ಅಂದರೆ, ಕೊನೆಯಲ್ಲಿ ನಿರ್ಧರಿಸುತ್ತೇವೆ.

* ಈಗ ನಾವು ಮುಂಬರುವ ಗಗನಯಾನದ ವಿಷಯದಲ್ಲಿ ಯಾವ ಹಂತದಲ್ಲಿದ್ದೇವೆ? ಇನ್ನೂ ಏನೇನು ಆಗಬೇಕಿದೆ?
ಗಗನಯಾನ ಅನ್ನೋದು ಒಂದು ತುಂಬಾ ಕಷ್ಟಕರ ಆಪರೇಷನ್. ಅದರಲ್ಲಿ ಲಾಂಚಿಂಗ್ ಮಾಡೋದು ಸುಲಭ. ಆದರೆ ಗಗನಕ್ಕೆ ಹೋದವರನ್ನು ಕರೆತರುವುದು ಬಹಳ ಕಷ್ಟ. ಗಗನಯಾನ ಏಕೆ ಬಹಳ ಕಷ್ಟದ್ದು ಅಂದರೆ, ಅದರಲ್ಲಿ ಮನುಷ್ಯರು ಇರುತ್ತಾರೆ. ಈಗಲೂ ನಮಗೆ ಮಾನವ ಸಹಿತ ಗಗನಯಾನಕ್ಕೆ ಬೇಕಾದ ಉಪಕರಣಗಳು ಸಿಗುತ್ತಿಲ್ಲ. ನಾವು ಇನ್ನೂ ತುಂಬಾ ಇಂಜಿನಿಯರಿಂಗ್ ಕೆಲಸಗಳನ್ನು ಮಾಡಿ ಮುಗಿಸಬೇಕಾಗಿದೆ. ನಮಗೆ ಇರುವ ಬಹುದೊಡ್ಡ ಸವಾಲೆಂದರೆ ಗಗನಯಾನಿಗಳ ಸುರಕ್ಷತೆ. ನೀವು ಚಂದ್ರಯಾನ -2 ನೋಡಿ. ಅದರ ಲ್ಯಾಂಡಿಂಗ್ನಲ್ಲಿ ಸಮಸ್ಯೆಯಾಯ್ತು. ಅಲ್ಲಿಂದ ಚಂದ್ರಯಾನ-3 ಮಾಡೋದಕ್ಕೆ 4 ವರ್ಷ ಸಮಯ ಹಿಡಿಯಿತು. ಗಗನಯಾನ ಮೊದಲ ಯೋಜನೆಯಲ್ಲಿ ಈ ರೀತಿ ಏನಾದರೂ ಆದರೆ ಅದರ ರಿಕವರಿ ತುಂಬಾ ಕಷ್ಟ. ಆಗ 5 ವರ್ಷ, 10 ವರ್ಷ ತೆಗೆದುಕೊಳ್ಳಬಹುದು. ಹೀಗಾಗಿ ಇದರಲ್ಲಿ ವೇಗವಾಗಿ ಹೋಗುವುದು ತುಂಬಾ ರಿಸ್ಕ್‌. ಹೀಗಾಗಿ ಇದನ್ನು ತುರ್ತಾಗಿ ಮಾಡುವ ಅಗತ್ಯವಿದೆಯೇ ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಈಗ ನಾವು ಇಡೀ ಯೋಜನೆಯನ್ನೇ ಮರುವಿನ್ಯಾಸ ಮಾಡಿದ್ದೇವೆ. ಹೀಗಾಗಿ ಸರ್ಕಾರ ಹಾಗೂ ಸ್ಪೇಸ್‌ ಕಮಿಷನ್‌ ಬಳಿ ಹೆಚ್ಚಿನ ಸಮಯ ಕೇಳಿದ್ದೇವೆ. ನೂರಾರು ಟೆಸ್ಟ್‌ಗಳನ್ನು ಮಾಡುತ್ತಿದ್ದೇವೆ. ಅದಕ್ಕೆಲ್ಲಾ ಸಮಯ ಹಿಡಿಯುತ್ತದೆ. ಒಟ್ಟಿನಲ್ಲಿ ಮಾನವ ಸಹಿತ ಗಗನಯಾನ 2025ಕ್ಕೂ ಮುಂಚೆ ನಡೆಸಲು ಸಾಧ್ಯವಿಲ್ಲ. ಈಗ ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ದೊಡ್ಡ ಪರೀಕ್ಷೆಯೊಂದು ಸದ್ಯದಲ್ಲೇ ನಡೆಯಲಿದೆ. ಮಾನವ ಸಹಿತ ಪರೀಕ್ಷೆಗಳು ಮುಂದಿನ ತಿಂಗಳಿನಿಂದ ಶುರುವಾಗಲಿವೆ.

* ವಿಕ್ರಂ ಆಗಲಿ ರೋವರ್ ಆಗಲಿ ಚಂದ್ರನ ಬಗ್ಗೆ ಕಳಿಸಿದ ಯಾವುದಾದರೂ ವಿಚಾರ ಇನ್ನೂ ಜಗತ್ತಿಗೆ ತಿಳಿಯದೇ ಇರೋದು ಇದೆಯಾ?
ಕೆಲವು ವಿಚಾರಗಳಿವೆ. ಚಂದ್ರನ ಟೋಫೋಗ್ರಫಿ, ಚಂದ್ರನ ನೆಲದ ಮೇಲಿನ ಗುಣಲಕ್ಷಣದ ಬಗ್ಗೆ 2 ಅಧ್ಯಯನ ಮಾಡಿದ್ದೇವೆ. ಚೇಸ್ಟ್‌ ಎಂಬ ಒಂದು ಪೆಲೋಡ್ ಇದೆ. ಚಂದ್ರನ ಭೂಮಿಯೊಳಗೆ ಹೀಟರ್‌ ಇಳಿಸಿ ಪರೀಕ್ಷೆ ಮಾಡೋದು. ಹೀಟ್ ಮಾಡಿ ಆ ಜಾಗವನ್ನ ಪರೀಕ್ಷೆ ಮಾಡಲಾಗುತ್ತದೆ. ಕುತೂಹಲಕಾರಿ ವಿಷಯ ಏನೆಂದರೆ, ಚಂದ್ರನ ಮೇಲ್ಮೈ ಪರಿಸ್ಥಿತಿಗೂ ಒಳಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಚಂದ್ರನ ಮೇಲ್ಮೈನಲ್ಲಿ ಸಾಮಾನ್ಯ ತಾಪಮಾನವಿದ್ದರೆ, ಚಂದ್ರನ ಒಳಗೆ ಕೇವಲ 10 ಸೆಂ.ಮೀ.ನಲ್ಲಿ ಬಹಳ ಕಡಿಮೆ ತಾಪಮಾನವಿದೆ. ಅಲ್ಲದೆ ಚಂದ್ರನ ಒಳಗೆ ಉಷ್ಣತೆ ಸಂಚರಿಸೋದಿಲ್ಲ. ಇದು ಹೊಸ ವಿಚಾರ. ಇನ್ನು, ವಿಕ್ರಂ ಲ್ಯಾಂಡ್‌ ಆದಾಗ, ರೋವರ್‌ ನಡೆದಾಡಿದಾಗ ನಾವು ನಿರೀಕ್ಷಿಸಿದಷ್ಟು ಧೂಳು ಎದ್ದಿಲ್ಲ. ರೋವರ್‌ ನಡೆದಾಡಿದಾಗ ಅಲ್ಲಿ ಹೆಚ್ಚು ಗುರುತು ಮೂಡಿಲ್ಲ. ಇದು ಕೂಡ ತುಂಬಾ ಮುಖ್ಯವಾದ ವಿಚಾರ. ಚಂದ್ರನ ಮೇಲೆ ಲ್ಯಾಂಡ್ ಆದ ಮನುಷ್ಯರು ಅಲ್ಲಿ ತುಂಬಾ ಡಸ್ಟ್‌ ಇದೆ ಅಂದಿದ್ದರು. ಆದರೆ ನಾವು ಇಳಿದ ಭಾಗದಲ್ಲಿ ಏಕೆ ಹೀಗೆ ಇದೆ ಎಂದು ಅಧ್ಯಯನ ಮಾಡಬೇಕಿದೆ.

* ನಾವು ಸ್ಯಾಟಲೈಟ್ ಮತ್ತು ಕಮ್ಯುನಿಕೇಷನ್ ಬಗ್ಗೆ ಮಾತನಾಡುವಾಗ ನಾವಿಕ್ ವ್ಯವಸ್ಥೆಯ ಬಗ್ಗೆಯೂ ಚರ್ಚೆಯಾಗುತ್ತದೆ. ನಾವಿಕ್‌ನಿಂದ ಏನು ಬದಲಾವಣೆ ಸಾಧ್ಯವಾಗಿದೆ?
ನಾವಿಕ್ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದೇ ರಕ್ಷಣಾತ್ಮಕ ಕಾರಣಕ್ಕಾಗಿ. ಜಿಪಿಎಸ್ ವ್ಯವಸ್ಥೆಯನ್ನು ನಮಗೆ ವಿದೇಶದವರು ಕೊಡಲು ನಿರಾಕರಿಸಿದಾಗ ನಾವು ನಾವಿಕ್ ಅಭಿವೃದ್ಧಿಪಡಿಸಿದೆವು. ಜಿಪಿಎಸ್‌ನಲ್ಲಿ 20 ಮೀಟರ್‌ನಷ್ಟು ನಿಖರತೆ ಇದ್ದರೆ, ನಾವಿಕ್‌ನಲ್ಲಿ 3 ಮೀಟರ್‌ನಷ್ಟು ನಿಖರತೆ ಇರುತ್ತದೆ. ದುರದೃಷ್ಟ ಅಂದರೆ ನಮ್ಮದೇ ನಾವಿಕ್‌ ವ್ಯವಸ್ಥೆಯನ್ನು ರಕ್ಷಣಾಪಡೆಗಳು ಪೂರ್ಣವಾಗಿ ಬಳಸುತ್ತಿಲ್ಲ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿ ಈಗಿನ ರಕ್ಷಣಾ ಪಡೆಗಳ ಮುಖ್ಯಸ್ಥರ ಜತೆ ಚರ್ಚೆ ಮಾಡಿದ್ದೇವೆ. ಅಲ್ಲಿ ಇನ್ನೂ ಜಿಪಿಎಸ್‌ ಬಳಸುತ್ತಿದ್ದಾರೆ. ನಾವಿಕ್‌ ಬಳಸಲು ಅಲ್ಲಿನ ಹಾರ್ಡ್‌ವೇರ್‌ಗಳೆಲ್ಲ ಬದಲಾಗಬೇಕು. ಅದಕ್ಕೆ ಕೆಲವು ವರ್ಷಗಳೇ ಹಿಡಿಯಲಿವೆ. ಇನ್ನು, ಮೊಬೈಲ್‌ಗಳಲ್ಲಿ ನಾವಿಕ್ ಬಳಸಬೇಕೆಂದರೆ ಎಸ್ 1, ಎಲ್ 5 ಬ್ಯಾಂಡ್ ಬೇಕು. ಅದು ಆಗಬೇಕು ಅಂದರೆ ಮೊಬೈಲ್‌ ಕಂಪನಿಗಳಿಗೆ ಹೆಚ್ಚು ಹಣ ಖರ್ಚಾಗಲಿದೆ. ಅದಕ್ಕಾಗಿ ನಾವು ನಾವಿಕ್ ವ್ಯವಸ್ಥೆಗೆಂದೇ ಎಲ್1, ಎಲ್2 ಬ್ಯಾಂಡ್ ಅಳವಡಿಸುತ್ತಿದ್ದೇವೆ. ಈಗ ಲಾಂಚ್ ಆಗಿರೋ ನಾವಿಕ್ ವ್ಯವಸ್ಥೆಯನ್ನು ಆ್ಯಪಲ್ ಬಳಸಿಕೊಂಡಿದೆ. ಕೆಲ ದಿನಗಳಲ್ಲಿ ಜನ ಸಾಮಾನ್ಯರು ನಾವಿಕ್ ಬಳಸುವುದು ಹೆಚ್ಚಾಗಲಿದೆ.

* ಇಸ್ರೋದವರು ಎಲ್ಲವನ್ನೂ ಹೇಗೆ ಬಹಳ ಕಡಿಮೆ ವೆಚ್ಚದಲ್ಲಿ ಮಾಡುತ್ತೀರಿ?
ನಾವು ಯಾವುದೇ ಮಾಡೆಲ್ ಮಾಡಬೇಕಂದರೆ ಒಂದು ಮಾದರಿ ಮಾಡೆಲ್ ಮಾಡಿಕೊಳ್ಳುತ್ತೇವೆ. ಮಾದರಿ ಮಾಡೆಲ್‌ಗಳಲ್ಲಿ ನಾವು ಹೂಡಿಕೆ ಮಾಡಬೇಕು. ಬಹುತೇಕ ವಿನ್ಯಾಸಗಳನ್ನು ನಾವು ಹೊರಗಿನವರಿಂದ ಮಾಡಿಸಿಕೊಳ್ಳುವುದಿಲ್ಲ, ನಾವೇ ಮಾಡಿಕೊಳ್ಳುತ್ತೇವೆ. ಒಂದೇ ಒಂದು ಗ್ರೌಂಡ್ ಸಿಸ್ಟಮ್ ವಿನ್ಯಾಸವನ್ನೂ ನಾವು ಬೇರೆಯವರಿಗೆ ಕೊಡುವುದಿಲ್ಲ. ಎಲ್ಲವನ್ನೂ ಇಲ್ಲೇ ಮಾಡುತ್ತೇವೆ. ಈ ಕಾರಣದಿಂದ ವೆಚ್ಚ ಕಡಿಮೆಯಾಗುತ್ತದೆ. ಇದೇ ತಂತ್ರವನ್ನು ಸ್ಪೇಸ್ ಎಕ್ಸ್ ನವರು ಅನುಸರಿಸುತ್ತಾರೆ.

ISRO Chief S Somanath 2025ಕ್ಕೂ ಮುಂಚೆ ಮಾನವಸಹಿತ ಗಗನಯಾನ ಸಾಧ್ಯವಿಲ್ಲ

* ನಿಮಗೆ ಪ್ರತಿಭಾವಂತ ವಿಜ್ಞಾನಿಗಳು, ಅತ್ಯುತ್ತಮ ಟ್ಯಾಲೆಂಟ್‌ಗಳು ಎಲ್ಲಿಂದ ಸಿಗುತ್ತವೆ?
ಇತ್ತೀಚೆಗೆ ನಮ್ಮ ತಂಡ ಒಂದು ಐಐಟಿಯಲ್ಲಿ ನೇಮಕಾತಿಗೆ ಹೋಗಿತ್ತು. ಇಸ್ರೋದಲ್ಲಿ ಏನು ಕೆಲಸ, ಏನೇನು ಅವಕಾಶಗಳಿವೆ ಎಂದೆಲ್ಲಾ ಹೇಳಿದೆವು. ಎಲ್ಲರೂ ಕುತೂಹಲದಿಂದ ಕೇಳಿಸಿಕೊಂಡರು. ನಂತರ ಸಂಬಳ ಎಷ್ಟು ಎಂಬುದನ್ನು ಹೇಳಿದೆವು. ಆಗ ಶೇ.60ರಷ್ಟು ವಿದ್ಯಾರ್ಥಿಗಳು ಎದ್ದು ಹೋದರು. ಎಲ್ಲರಿಗೂ ದೊಡ್ಡ ಸಂಬಳ ಬೇಕು. ಆದರೆ ಈಗ ನಮ್ಮ ಯಶಸ್ಸಿನ ಬಳಿಕ ಅನೇಕರು ಈ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಅವಕಾಶಗಳು ಅಮೆರಿಕ, ಯುರೋಪ್‌ನಂತೆ ಇಲ್ಲಿ ಇಲ್ಲ.

* ಚಂದ್ರಯಾನ-3 ಅದ್ಭುತ ಯಶಸ್ಸು ಹಾಗೂ ಆದಿತ್ಯ ಎಲ್1 ನಂತರ ಬಾಹ್ಯಾಕಾಶ ಯೋಜನೆಗಳ ಕುರಿತು ಇಸ್ರೋದಿಂದ ಮುಂದೆ ಏನು ನಿರೀಕ್ಷಿಸಬಹುದು?
ಕೆಲವು ದೀರ್ಘಕಾಲದ ಯೋಜನೆಗಳಿವೆ. ಅವೆಲ್ಲ ಹಂತಹಂತವಾಗಿ ನಡೆಯುತ್ತವೆ. ಮಾನವ ಚಂದ್ರನ ಮೇಲೆ ಕಾಲಿಡುವ ಬಗ್ಗೆ ಭಾರತ ಏಕೆ ಯೋಚಿಸಬಾರದು? ನಾಳೆ ನಮ್ಮದೇ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಯೋಜನೆ ಏಕೆ ಕೈಗೆತ್ತಿಕೊಳ್ಳಬಾರದು? ಆಗ ಬಾಹ್ಯಾಕಾಶದಲ್ಲಿ ಕೆಲ ದಿನ ಉಳಿದುಕೊಂಡು ಸಂಶೋಧನೆ ಮಾಡಬಹುದಲ್ಲ. ನಾವು ಸದ್ಯದಲ್ಲೇ ಭೂ ಕಕ್ಷೆಗೆ ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣ ಕಳಿಸಲಿದ್ದೇವೆ. ಸ್ಪೇಸ್ ಸ್ಟೇಷನ್‌ನಲ್ಲಿ ರೋಬೋಟಿಕ್ ನಡೆಸುವುದು ಉದ್ಯಮಗಳಿಗೆ ಅತ್ಯಂತ ಮುಖ್ಯ. ಹೊಸ ಉಪಕರಣ ಅನ್ವೇಷಣೆ, ಮೆಡಿಕಲ್ ಸಿಂಥಸಿಸ್, 3ಡಿ ಆರ್ಗನ್ ಪ್ರಿಂಟಿಂಗ್, ನಿರಂತರ ಸಂಶೋಧನೆ ಮತ್ತು ಅಭಿವೃದ್ಧಿಗೆ ಇದು ಸಹಾಯಕವಾಗುತ್ತದೆ.

Follow Us:
Download App:
  • android
  • ios