ಮನೇಕಾ ಗಾಂಧಿ ವಿರುದ್ಧ 100 ಕೋಟಿಯ ಮಾನನಷ್ಟ ಕೇಸ್ ದಾಖಲಿಸಿದ ಇಸ್ಕಾನ್!
ಇಸ್ಕಾನ್ ದೇವಸ್ಥಾನ ಮಂಡಳಿ ಬಿಜೆಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಮನೇಕಾ ಗಾಂಧಿ ವಿರುದ್ಧ 100 ಕೋಟಿಯ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದೆ. ವೈರಲ್ ವಿಡಿಯೋವೊಂದರಲ್ಲಿ ಇಸ್ಕಾನ್ ವಿರುದ್ಧ ಮನೇಕಾ ಗಾಂಧಿ ದೊಡ್ಡ ಆರೋಪವನ್ನು ಮಾಡಿದ್ದರು.

ನವದೆಹಲಿ (ಸೆ.29): ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಮನೇಕಾ ಗಾಂಧಿ ಅವರು ಇತ್ತೀಚೆಗೆ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲಿಯೇ ಇಸ್ಕಾನ್ ದೇವಸ್ಥಾನಗಳ ಸಮಿತಿ ಮನೇಕಾ ಗಾಂಧಿಗೆ 100 ಕೋಟಿ ರೂಪಾಯಿಯ ಮಾನನಷ್ಟ ನೋಟಿಸ್ ಕಳುಹಿಸಿದ್ದು, ನೀವು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ ಎಂದು ಹೇಳಿದೆ. ಈ ಅವಹೇಳನಕಾರಿ, ಖಂಡನೀಯ ಮತ್ತು ದುರುದ್ದೇಶಪೂರಿತ ಆರೋಪಗಳಿಂದ ಇಸ್ಕಾನ್ ಭಕ್ತರು ಮತ್ತು ಬೆಂಬಲಿಗರು ತೀವ್ರ ದುಃಖಿತರಾಗಿದ್ದಾರೆ ಎಂದು ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ್ ದಾಸ್ ಹೇಳಿದ್ದಾರೆ. ಇಸ್ಕಾನ್ ವಿರುದ್ಧ ಮಾಡಿರುವ ಈ ತಪ್ಪು ಪ್ರಚಾರದ ವಿರುದ್ಧ, ಪಿತೂರಿಯ ವಿರುದ್ಧ ನಮಗೆ ನ್ಯಾಯ ಸಿಗಬೇಕು. ಅದಕ್ಕಾಗಿ ಎಲ್ಲಿ ಬೇಕಾದರೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಮನೇಕಾ ಗಾಂಧಿ ಹೇಳಿದ್ದೇನು?: ಇತ್ತೀಚೆಗೆ ಮೇನಕಾ ಗಾಂಧಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಅವರು ಇಸ್ಕಾನ್ ಹಸುಗಳನ್ನು ಕಟುಕರಿಗೆ ಮಾರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ಇಸ್ಕಾನ್ ದೇಶದ ಅತಿ ದೊಡ್ಡ ಮೋಸದ ಸಂಸ್ಥೆ ಎಂದು ಬಣ್ಣಿಸಿದ್ದರು. "ಇಸ್ಕಾನ್ ಗೋಶಾಲೆಗಳನ್ನು ಸ್ಥಾಪಿಸುತ್ತದೆ ಮತ್ತು ಇದಕ್ಕಾಗಿ ಸರ್ಕಾರದಿಂದ ಅಪಾರ ಪ್ರಮಾಣದ ಭೂಮಿಯನ್ನು ತೆಗೆದುಕೊಳ್ಳುತ್ತದೆ ಮತ್ತು ದೊಡ್ಡ ಲಾಭವನ್ನು ಗಳಿಸುತ್ತದೆ" ಎಂದು ಮನೇಕಾ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ನಾನು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಇಸ್ಕಾನ್ ಆಡಳಿತದಲ್ಲಿದ್ದ ಅನಂತಪುರದ ಗೋಶಾಲೆಗೆ ಭೇಟಿ ನೀಡಿದಾಗ ಒಂದು ಹಸು ಕೂಡ ಸುಸ್ಥಿತಿಯಲ್ಲಿ ಇದ್ದಿರಲಿಲ್ಲ. ದನದ ಕೊಟ್ಟಿಗೆಯಲ್ಲಿ ಕರುಗಳಿರಲಿಲ್ಲ ಅಂದರೆ ಅವುಗಳನ್ನು ಮಾರಾಟ ಮಾಡಲಾಗಿತ್ತು' ಎಂದು ಹೇಳಿದ್ದಾರೆ. ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಮನೇಕಾ ಹೇಳಿದ್ದರು. ಈ ರೀತಿಯ ಕೆಲಸವನ್ನು ಅವರಿಗಿಂತ ಹೆಚ್ಚು ಯಾರೂ ಮಾಡುವುದಿಲ್ಲ. ‘ಹರೇ ರಾಮ್ ಹರೇ ಕೃಷ್ಣ’ ಎಂದು ಜಪಿಸುತ್ತಾ ಬೀದಿಬೀದಿಗಳಲ್ಲಿ ತಿರುಗಾಡುತ್ತಾ ತಮ್ಮ ಇಡೀ ಜೀವನವು ಹಾಲಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳುವ ಇದೇ ಜನರು ಈ ಕೃತ್ಯ ಮಾಡಿದ್ದಾರೆ ಎಂದಿದ್ದರು.
ಇಸ್ಕಾನ್‌ನಿಂದ ಅಮೋಘ್ ಲೀಲಾ ದಾಸ್ ನಿಷೇಧ? ಯಾರು ಈ 'ಹರೇ ಕೃಷ್ಣ ಬ್ರಹ್ಮಚಾರಿ'?
ಕಿಡಿಕಾರಿದ ಇಸ್ಕಾನ್: ಮನೇಕಾ ಗಾಂಧಿ ಅವರ ಆರೋಪಗಳನ್ನು ಇಸ್ಕಾನ್ ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದೆ. ಕೇಂದ್ರದ ಮಾಜಿ ಸಚಿವರ ಹೇಳಿಕೆಯಿಂದ ತಮಗೆ ಅಚ್ಚರಿಯಾಗಿದೆ ಎಂದು ಇಸ್ಕಾನ್ ಹೇಳಿದೆ. ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಠಿರ್ ಗೋವಿಂದ ದಾಸ್ ನೀಡಿರುವ ಹೇಳಿಕೆಯಲ್ಲಿ, ಯಾವ ದೇಶಗಳಲ್ಲಿ ಗೋಮಾಂಸವು ಜನರ ಪ್ರಮುಖ ಆಹಾರವಾಗಿದೆಯೋ ಅಂಥ ದೇಶಗಳಲ್ಲಿ ಗೋವುಗಳ ರಕ್ಷಣೆಗೆ ಇಸ್ಕಾನ್ ಮುಂದಾಳತ್ವ ವಹಿಸಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಇಸ್ಕಾನ್‌ನ ಗೋಶಾಲೆಯಲ್ಲಿರುವ ಹೆಚ್ಚಿನ ಹಸುಗಳು ಬೀದಿಗೆ ಬಿದ್ದಂಥವು. ಗಾಯಗೊಂಡಿದ್ದ ಅವುಗಳನ್ನು ಗೋಶಾಲೆಯಲ್ಲಿ ಇಡಲಾಗಿದೆ. ಕಟುಕರ ಕೈಯಿಂದ ರಕ್ಷಣೆ ಮಾಡಿರುವ ಹಸುಗಳು ಕೂಡ ಗೋಶಾಲೆಯಲ್ಲಿದೆ ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರನ್ನು ಲೇವಡಿ ಮಾಡಿದ ಸನ್ಯಾಸಿ ಅಮೋಘ್ ಲೀಲಾ ದಾಸ್: ಇಸ್ಕಾನ್‌ನಿಂದ ಬ್ಯಾನ್