Asianet Suvarna News Asianet Suvarna News

4 ಶಂಕಿತ ಐಸಿಸ್‌ ಉಗ್ರರ ಬಂಧನ : ದಾಳಿ ಸಂಚು ಬಯಲು

ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರವಾದಿ ಸಂಘಟನೆಯಿಂದ ಸ್ಫೂರ್ತಿ ಪಡೆದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ದಿಲ್ಲಿ ಹಾಗೂ ಗುಜರಾತ್‌ನಲ್ಲಿ ಬಂಧಿಸಲಾಗಿದೆ. ಅಲ್ಲದೇ ಈ ವೇಳೆ ಮಹತ್ವದ ದಾಳಿ ಸಂಚು ಬಯಲಾಗಿದೆ. 

ISIS terror module busted in Delhi 3 arrested
Author
Bengaluru, First Published Jan 10, 2020, 7:24 AM IST

ನವದೆಹಲಿ [ಜ.10]:  ಗಣರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿರುವಾಗ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರವಾದಿ ಸಂಘಟನೆಯಿಂದ ಸ್ಫೂರ್ತಿ ಪಡೆದಿದ್ದ ನಾಲ್ವರು ಶಂಕಿತ ಭಯೋತ್ಪಾದಕರನ್ನು ದಿಲ್ಲಿ ಹಾಗೂ ಗುಜರಾತ್‌ನಲ್ಲಿ ಬಂಧಿಸಲಾಗಿದೆ. ಮೂವರು ದಿಲ್ಲಿಯಲ್ಲಿ ಬಂಧಿತರಾಗಿದ್ದರೆ, ಇನ್ನೊಬ್ಬ ಗುಜರಾತ್‌ನಲ್ಲಿ ಸೆರೆಗೆ ಸಿಕ್ಕಿದ್ದಾನೆ.

ದಿಲ್ಲಿಯಲ್ಲಿ ಬಂಧಿತರಾದ ಮೂವರು ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್‌) ಅಥವಾ ಉತ್ತರಪ್ರದೇಶದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಇವರ ಹೆಸರು ಖಾಜಾ ಮೊಯಿದೀನ್‌ (52), ಅಬ್ದುಲ್‌ ಸಮದ್‌ (28) ಹಾಗೂ ಸಯ್ಯದ್‌ ಅಲಿ ನವಾಜ್‌ (32). ಇನ್ನು ಗುಜರಾತ್‌ನ ವಡೋದರಾದಲ್ಲಿ ಜಾಫರ್‌ ಅಲಿ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ತಮಿಳುನಾಡಿನವರು.

ಚಕಮಕಿ ಬಳಿಕ ಬಂಧನ:

ದಿಲ್ಲಿಯ ವಜೀರಾಬಾದ್‌ ಪ್ರದೇಶದಲ್ಲಿ ಖಾಜಾ ಮೊಯಿದೀನ್‌, ಸಮದ್‌ ಹಾಗೂ ನವಾಜ್‌ ಇದ್ದ ವಿಷಯ ಅರಿತ ದಿಲ್ಲಿ ಪೊಲೀಸ್‌ ವಿಶೇಷ ಘಟಕವು ದಾಳಿ ನಡೆಸಿತ್ತು. ಈ ವೇಳೆ ಪೊಲೀಸರು ಹಾಗೂ ಶಂಕಿತರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಬಳಿಕ ಮೂವರನ್ನೂ ಬಂಧಿಸುವಲ್ಲಿ ಪೊಲಿಸರು ಯಶಸ್ವಿಯಾಗಿದ್ದಾರೆ.

ದೇಶಾದ್ಯಂತ ದಾಳಿ: ಜಿಹಾದಿ ಗ್ಯಾಂಗ್‌ ಸಂಚು ಬಯಲು!...

ಬಂಧಿತರ ಪೈಕಿ ಖಾಜಾ ಮೊಯಿದೀನ್‌ ಐಸಿಸ್‌ ಜತೆ ನಂಟು ಹೊಂದಿದ್ದ. ತಮಿಳ್ನಾಡಿನ ಹಿಂದೂ ಮುಖಂಡ ಕೆ.ಪಿ. ಸುರೇಶ್‌ ಕುಮಾರ್‌ ಅವರ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ಈತ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಭಾರತದಲ್ಲಿ ತನ್ನ ಸಹಚರರ ಜತೆ ಸೇರಿ ಐಸಿಸ್‌ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆ ರೂಪಿಸಿದ್ದ. ಮೊಯಿದೀನ್‌ ಹಲವಾರು ಅಡಗುತಾಣಗಳಲ್ಲಿ ಸಭೆ ನಡೆಸಿ, ಯುವಕರ ‘ಬ್ರೇನ್‌ವಾಶ್‌’ ಮಾಡಿ ಐಸಿಸ್‌ ಸೇರುವಂತೆ ಪ್ರೇರೇಪಿಸಿದ್ದ. ಇವರಿಗೆ ವಿದೇಶದಲ್ಲಿರುವ ಐಸಿಸ್‌ ಮುಖಂಡನೊಬ್ಬ ಮಾರ್ಗದರ್ಶನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೊಯಿದ್ದೀನ್‌ ಹಾಗೂ ಆತನ ಸಹಚರರು ತಾವು ಇರುವ ಸ್ಥಳದಿಂದ ಏಕಕಾಲಕ್ಕೆ ಪರಾರಿಯಾಗಲು ನಿರ್ಧರಿಸಿದ್ದರು. ಮೂರು ಸದಸ್ಯರ ಎರಡು ಗುಂಪುಗಳಾಗಿ ತಮ್ಮನ್ನು ವಿಭಜಿಸಿಕೊಂಡಿದ್ದರು. ಮೊಯಿದೀನ್‌, ನವಾಜ್‌ ಹಾಗೂ ಸಮದ್‌, ನಕಲಿ ಕಾಗದಪತ್ರ ಬಳಸಿ ಅಕ್ರಮವಾಗಿ ನೇಪಾಳದ ಕಾಠ್ಮಂಡುವಿಗೆ ತೆರಳಿದ್ದರು. ಅಲ್ಲಿ ತಮ್ಮ ನೆಲೆ ಸ್ಥಾಪಿಸಿಕೊಂಡು ಬಳಿಕ ದಿಲ್ಲಿಗೆ ಮರಳಿ ವಜೀರಾಬಾದ್‌ನಲ್ಲಿ ತಂಗಿದ್ದರು. ದಿಲ್ಲಿಯ ತಮ್ಮ ಅಡಗುತಾಣದಲ್ಲಿ ವಿದೇಶದ ಐಸಿಸ್‌ ಉಗ್ರಗಾಮಿ ನಾಯಕನ ಸಹಾಯ ಪಡೆದು ದಿಲ್ಲಿಯಲ್ಲೇ ಶಸ್ತ್ರಾಸ್ತ್ರ ಸಂಗ್ರಹಿಸಿದ್ದರು. ಅಲ್ಲದೆ, ಉತ್ತರಪ್ರದೇಶ ಅಥವಾ ಎನ್‌ಸಿಆರ್‌ನಲ್ಲಿ ದಾಳಿಗೆ ಸಂಚು ರೂಪಿಸತೊಡಗಿದ್ದರು. ಬಳಿಕ ನೇಪಾಳಕ್ಕೆ ತೆರಳಿ ಅಲ್ಲಿಂದ ಪಾಕಿಸ್ತಾನಕ್ಕೆ ಪರಾರಿಯಾಗುವ ಇರಾದೆ ಹೊಂದಿದ್ದರು. ಆದರೆ ಇವರು ವಜೀರಾಬಾದ್‌ಗೆ ಆಗಮಿಸಿ, ಬಾಡಿಗೆ ಮನೆ ಪಡೆದಿರುವ ವಿಷಯ ಹಾಗೂ ಶಸ್ತ್ರಾಸ್ತ್ರ ಸಂಗ್ರಹಿಸಿರುವ ವಿಷಯ ನಮಗೆ ಗೊತ್ತಾಯಿತು. ಹೀಗಾಗಿ ಇವರ ಬಂಧನಕ್ಕೆ ಯೋಜನೆ ರೂಪಿಸಿದೆವು. ಕೆಲ ಹೊತ್ತಿನ ಗುಂಡಿನ ಚಕಮಕಿ ಬಳಿಕ ಇವರನ್ನು ಗುರುವಾರ ಬೆಳಗ್ಗೆ ಬಂಧಿಸಿದೆವು’ ಎಂದು ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ಉಪ ಆಯುಕ್ತ ಪ್ರಮೋದ ಕುಮಾರ್‌ ಕುಶ್ವಾಹ ಹೇಳಿದ್ದಾರೆ.

ಗುಜರಾತ್‌ನಲ್ಲೂ ಬಂಧನ:

ದಿಲ್ಲಿಯಲ್ಲಿ ಮೂವರ ಬಂಧನವಾದ ನಡುವೆಯೇ, ಅವರದ್ದೇ ಗುಂಪಿಗೆ ಸೇರಿದ್ದಾನೆ ಎನ್ನಲಾದ ತಮಿಳುನಾಡಿನ ಕಡಲೂರು ಜಿಲ್ಲೆಯ ನಿವಾಸಿ ಜಾಫರ್‌ ಅಲಿ ಎಂಬಾತನನ್ನು ಗುಜರಾತ್‌ನ ವಡೋದರಾದಲ್ಲಿ ಬಂಧಿಸಲಾಗಿದೆ. ಈತ ಗುಜರಾತ್‌ನಲ್ಲಿ ಐಸಿಸ್‌ ಸಂಘಟನೆಯ ನೆಲೆ ಹುಟ್ಟುಹಾಕಲು ಸಂಚು ರೂಪಿಸುತ್ತಿದ್ದ ಎಂದು ಗುಜರಾತ್‌ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಪೊಲೀಸರು ಹೇಳಿದ್ದಾರೆ.

ತಮಿಳುನಾಡಿನ 6 ಉಗ್ರರು ದೇಶದ ವಿವಿಧೆಡೆ ಸುತ್ತಾಡುತ್ತಿದ್ದಾರೆ. ರಹಸ್ಯ ಯೋಜನೆಯೊಂದನ್ನು ಅವರು ರೂಪಿಸುತ್ತಿದ್ದು, ‘ಜಿಹಾದ್‌’ ನಡೆಸಲು ಯೋಚಿಸುತ್ತಿದ್ದಾರೆ. ಇವರು ತಮಿಳುನಾಡಿನ ಕೊಲೆ ಪ್ರಕರಣವೊಂದರಲ್ಲಿ ಬೇಕಾಗಿದ್ದಾರೆ ಎಂಬ ಮಾಹಿತಿ ಗುಜರಾತ್‌ ಎಟಿಎಸ್‌ಗೆ ಲಭಿಸಿತ್ತು’ ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

‘ಆಗ ಇವರಿಗಾಗ್ಕಿ ಬಲೆ ಬೀಸಿದಾಗ ಮಾಹಿತಿದಾರರು ನೀಡಿದ ಸುಳಿವು ಹಾಗೂ ತಾಂತ್ರಿಕ ಸರ್ವೇಕ್ಷಣೆ ಸಹಾಯದಿಂದ ಅಲಿಯನ್ನು ಬಂಧಿಸಲಾಯಿತು. ದಿಲ್ಲಿ ಪೊಲೀಸ್‌ ವಿಶೇಷ ಸೆಲ್‌ ಪೊಲೀಸರು ಕೈಗೊಂಡಿರುವ ಪ್ರಕರಣದ ತನಿಖೆಯಲ್ಲೂ ಈತ ಬೇಕಾಗಿದ್ದು, ಆತನನ್ನು ಅವರಿಗೆ ಹಸ್ತಾಂತರಿಸಲಾಗವುದು’ ಎಂದು ಎಟಿಎಸ್‌ ಹೇಳಿದೆ.

ಬೆಂಗಳೂರಿಂದ ಬಂಗಾಳಕ್ಕೆ ಓಡಿ ಹೋಗಿದ್ದ ಮೊಯ್ದೀನ್‌

ದೆಹಲಿಯಲ್ಲಿ ಬಂಧಿತನಾದ ಜಿಹಾದಿ ಸಂಘಟನೆಯ ಮುಖಂಡ ಖಾಜಾ ಮೊಯಿದೀನ್‌ ಕೆಲ ದಿನಗಳ ಹಿಂದೆ ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.

ತಿಂಗಳ ಹಿಂದೆ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಯ ಮುಖಂಡನನ್ನು ಹತ್ಯೆಗೈದ ಬಳಿಕ ಆರು ಮಂದಿ ಜಿಹಾದಿಗಳು ಬೆಂಗಳೂರಿನ ವಿವೇಕನಗರ ಸಮೀಪದ ಪಿ.ಜಿ.ಯೊಂದರಲ್ಲಿ ನೆಲೆಸಿದ್ದರು. ಅವರಲ್ಲಿ ಮೂವರನ್ನು ಕೆಲ ದಿನಗಳ ಹಿಂದೆ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಅದಕ್ಕೂ ಮುನ್ನ ಇನ್ನುಳಿದ ಮೂವರು ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದರು. ಅವರಲ್ಲಿ ಖಾಜಾ ಮೊಯಿದೀನ್‌ ಕೂಡ ಒಬ್ಬ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios