ವಾಷಿಂಗ್ಟನ್‌ (ಅ. 29): ಇರಾಕ್‌ ಹಾಗೂ ಸಿರಿಯಾದಲ್ಲಿ ಅತ್ಯಂತ ಕ್ರೂರವಾಗಿ ಜನರನ್ನು ಹತ್ಯೆಗೈಯ್ಯುವ ಮೂಲಕ ಕುಖ್ಯಾತಿ ಗಳಿಸಿದ್ದ, ಹಾಲಿ ಜಗತ್ತಿನ ನಂಬರ್‌ ಉಗ್ರಗಾಮಿ ಎನಿಸಿಕೊಂಡಿದ್ದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ ಸಂಘಟನೆ ಸಂಸ್ಥಾಪಕ ಹಾಗೂ ಮುಖ್ಯಸ್ಥ ಅಬು ಬಕರ್‌ ಅಲ್‌- ಬಾಗ್ದಾದಿ ಸಂಹಾರವಾಗಿದ್ದಾನೆ.

2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿ ಅಲ್‌ ಖೈದಾ ಮುಖ್ಯಸ್ಥ ಬಿನ್‌ ಲಾಡೆನ್‌ನನ್ನು ಹತ್ಯೆಗೈದಿದ್ದ ಅಮೆರಿಕ ನಡೆಸಿದ ಅಂತಹುದೇ ಒಂದು ಕಾರ್ಯಾಚರಣೆಯಲ್ಲಿ ಬಾಗ್ದಾದಿ ದುರಂತ ಅಂತ್ಯ ಕಂಡಿದ್ದಾನೆ.

ಬಾಗ್ದಾದಿ (48) ಇರುವ ಜಾಗ ಪತ್ತೆ ಹಚ್ಚಿ ಅಮೆರಿಕ ಪಡೆಗಳು ದಾಳಿ ನಡೆಸಿವೆ. ಈ ವೇಳೆ ಅಮೆರಿಕದ ಶ್ವಾನಗಳು ಬಾಗ್ದಾದಿಯನ್ನು ಅಟ್ಟಾಡಿಸಿವೆ. ತನ್ನ ಮೂವರು ಮಕ್ಕಳ ಜತೆ ಪರಾರಿಯಾಗಲು ಯತ್ನಿಸಿ ಸುರಂಗವೊಂದರಲ್ಲಿ ಓಡಲು ಆರಂಭಿಸಿದ ಪಾಪಿ, ಅದರ ಕೊನೆಯ ತುದಿ ತಲುಪಿದಾಗ ದಾರಿ ಕಾಣದೇ ಜೋರಾಗಿ ಕಿರುಚುತ್ತಾ, ಅಳುತ್ತಾ ಪರದಾಡಿದ್ದಾನೆ. ಕೊನೆಗೆ ತನ್ನ ದೇಹಕ್ಕೆ ಕಟ್ಟಿದ್ದ ಆತ್ಮಾಹುತಿ ಬಾಂಬ್‌ ಅನ್ನು ಸ್ಫೋಟಿಸಿಕೊಂಡು ಛಿದ್ರವಾಗಿದ್ದಾನೆ. ಆತನ ದೇಹದ ಚೂರುಗಳನ್ನು ಸ್ಥಳದಲ್ಲೇ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿರುವ ಯೋಧರು, ಮೃತಪಟ್ಟವ ಬಾಗ್ದಾದಿ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.

ಶನಿವಾರ ರಾತ್ರಿ ನಡೆದ ಈ ಕಾರ್ಯಾಚರಣೆಯ ವಿವರಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾನುವಾರ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಬಾಗ್ದಾದಿ ಹತ್ಯೆ ಕಾರ್ಯಾಚರಣೆಯ ಸಂಪೂರ್ಣ ದೃಶ್ಯಗಳನ್ನು ಶ್ವೇತಭವನದ ಪೂರ್ವ ಕೋಣೆಯಲ್ಲಿ ಟ್ರಂಪ್‌ ಹಾಗೂ ಅಮೆರಿಕದ ಅಧಿಕಾರಿಗಳು ನೇರ ಪ್ರಸಾರವಾಗಿ ವೀಕ್ಷಿಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಅಮೆರಿಕದ ಯಾವುದೇ ಯೋಧರ ಸಾವು- ನೋವು ಆಗಿಲ್ಲ. ಆದರೆ ಕೆ9 ಶ್ವಾನವೊಂದಕ್ಕೆ ಗಾಯಗಳಾಗಿವೆ ಎಂದು ಟ್ರಂಪ್‌ ಮಾಹಿತಿ ನೀಡಿದ್ದಾರೆ. ಬಾಗ್ದಾದಿಯು ನಾಯಿ ಹಾಗೂ ಹೇಡಿ ರೀತಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಸೀಕ್ರೆಟ್‌ ಆಪರೇಷನ್‌:

ಐಸಿಸ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕನಾದ ಬಾಗ್ದಾದಿ, ಇರಾಕ್‌ ಹಾಗೂ ಸಿರಿಯಾದಲ್ಲಿ ಇಸ್ಲಾಮಿಕ್‌ ಸಾಮ್ರಾಜ್ಯ ನಿರ್ಮಿಸುವ ಹಾಗೂ ಅದನ್ನು ಇತರೆಡೆಗೆ ವಿಸ್ತರಿಸುವ ಹೆಬ್ಬಯಕೆ ಹೊಂದಿದ್ದ. ಈತ ಇರಾಕ್‌ ಹಾಗೂ ಸಿರಿಯಾದಲ್ಲಿ ರಕ್ತದ ಕೋಡಿಯನ್ನೇ ಹರಿಸಿದ್ದ. ಈತನ ಸಿದ್ಧಾಂತಕ್ಕೆ ಆಕರ್ಷಿತರಾಗಿ ವಿಶ್ವದ ಹಲವು ದೇಶಗಳ ಯುವಕರು ಐಸಿಸ್‌ ಸಂಘಟನೆಗೆ ಸೇರ್ಪಡೆಯಾಗಿದ್ದರು. ಬಾಗ್ದಾದಿ ಕುರಿತು ಸುಳಿವು ನೀಡಿದವರಿಗೆ 176 ಕೋಟಿ ರು. ಬಹುಮಾನವನ್ನೂ ಅಮೆರಿಕ ಘೋಷಿಸಿತ್ತು. ಆತನಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿಕೊಂಡು ಬಂದಿತ್ತು.

ಸಿರಿಯಾ ಇಡ್ಲಿಬ್‌ ಪ್ರಾಂತ್ಯದಲ್ಲಿನ ಮನೆಯೊಂದರಲ್ಲಿ ಆತ ಅಡಗಿರುವ ವಿಚಾರ ಅಮೆರಿಕಕ್ಕೆ ತಿಳಿಯಿತು. ಹೀಗಾಗಿ ಶನಿವಾರ ಆಪರೇಷನ್‌ ಆರಂಭವಾಯಿತು. ಬಾಗ್ದಾದಿ ಮನೆಗೆ ಮುಖ್ಯ ದ್ವಾರದಿಂದ ಪ್ರವೇಶ ಪಡೆಯದ ಅಮೆರಿಕದ ಕಮಾಂಡೋಗಳು, ಕಾಂಪೌಂಡ್‌ ಸ್ಫೋಟಿಸಿ ಒಳ ಪ್ರವೇಶಿಸಿದವು. ಈ ವೇಳೆ ಗುಂಡಿನ ದಾಳಿ ಆರಂಭವಾಯಿತು. ಕೆಲವೇ ಹೊತ್ತಿನಲ್ಲಿ ದಾಳಿಕೋರರನ್ನು ಅಮೆರಿಕದ ಕಮಾಂಡೋಗಳು ಅಡಗಿಸಿದರು. ಬಾಗ್ದಾದಿಯ 11 ಮಕ್ಕಳನ್ನು ವಶಕ್ಕೆ ಪಡೆಯಲಾಯಿತು. ಆತ್ಮಾಹುತಿ ಬಾಂಬ್‌ ಕಟ್ಟಿಕೊಂಡಿದ್ದ ಇಬ್ಬರು ಪತ್ನಿಯರನ್ನೂ ಯೋಧರು ವಶಕ್ಕೆ ಪಡೆದರು. ಈ ವೇಳೆ ಮೂವರು ಮಕ್ಕಳ ಜತೆ ಬಾಗ್ದಾದಿ ಓಡಲು ಆರಂಭಿಸಿದ.

ಆತನನ್ನು ಅಮೆರಿಕದ ಅತ್ಯಂತ ನುರಿತ ಶ್ವಾನಗಳು ಬೆನ್ನಟ್ಟಿದವು. ಸುರಂಗ ಮಾರ್ಗ ಪ್ರವೇಶಿಸಿದ ಬಾಗ್ದಾದಿಯನ್ನು ಆ ಶ್ವಾನಗಳು ಅಟ್ಟಾಡಿಸಿದವು. ಸುರಂಗದ ಕೊನೆಯ ತುದಿ ತಲುಪಿದಾಗ ಬಾಗ್ದಾದಿಗೆ ಪರಾರಿಯಾಗಲು ಅವಕಾಶವೇ ಸಿಗಲಿಲ್ಲ. ಹೀಗಾಗಿ ಆತನ ತನ್ನನ್ನು ತಾನು ಸ್ಫೋಟಿಸಿಕೊಂಡ. ಈ ವೇಳೆ ಮೂವರು ಮಕ್ಕಳ ಜತೆ ಆತನ ದೇಹ ಚೂರಾಯಿತು. ದೇಹದ ಹಲವು ಭಾಗಗಳನ್ನು ಸಂಗ್ರಹಿಸಲಾಗಿದೆ ಎಂದು ಟ್ರಂಪ್‌ ವಿವರಿಸಿದ್ದಾರೆ.

ಹೇಡಿ, ನಾಯಿ ರೀತಿ ಸತ್ತ ಬಾಗ್ದಾದಿ-ಟ್ರಂಪ್‌

ವಿಶ್ವದ ನಂಬರ್‌ ಭಯೋತ್ಪಾದಕ ಬಾಗ್ದಾದಿ ಹತನಾಗಿದ್ದಾನೆ. ಇನ್ನು ಮುಂದೆ ಆತ ಯಾವ ಅಮಾಯಕ ಪುರುಷ, ಮಹಿಳೆ ಅಥವಾ ಮಕ್ಕಳಿಗೆ ಹಿಂಸಿಸುವುದಿಲ್ಲ. ಅವನು ನಾಯಿ ರೀತಿ, ಹೇಡಿ ರೀತಿ ಸತ್ತಿದ್ದಾನೆ. ವಿಶ್ವ ಈಗ ಮತ್ತಷ್ಟುಸುರಕ್ಷಿತವಾಗಿದೆ.

- ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ

ನಾಯಿಗಳಿಗೆ ಹೆದರಿ ಅಳುತ್ತಾ ಓಡಿದ ಬಾಗ್ದಾದಿ

ಬಾಗ್ದಾದಿಯನ್ನು ಅಮೆರಿಕದ ಶ್ವಾನಪಡೆಗಳು ಬೆನ್ನಟ್ಟಿದವು. ಅವನು ಹೇಡಿಯಂತೆ ಓಡುತ್ತಾ, ಅಳುತ್ತಾ ಸತ್ತುಬಿಟ್ಟ. ಸುರಂಗದ ಕೊನೆಯ ತುದಿ ತಲುಪಿದಾಗ ಕಿರುಚಾಡಲು ಹಾಗೂ ಅಳಲು ಆರಂಭಿಸಿದ. ಬೇರೆಯವರನ್ನು ಬೆದರಿಸುತ್ತಿದ್ದ ಆತ ತನ್ನ ಕೊನೆ ಗಳಿಗೆಯಲ್ಲಿ ತೀವ್ರ ಭಯ ಹಾಗೂ ಗಾಬರಿಯಿಂದ ಸಾವನ್ನಪ್ಪಿದ. ಆತ ಹೀರೋ ರೀತಿ ಪ್ರಾಣ ತ್ಯಜಿಸಲಿಲ್ಲ. ಹೇಡಿ ರೀತಿ ಸತ್ತ. ನಾಯಿ ರೀತಿ ಸತ್ತ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದರು.

2 ತಾಸಲ್ಲಿ ಆಪರೇಷನ್‌ ಅಂತ್ಯ: ಬಳಿಕ ಬಾಗ್ದಾದಿ ಮನೆ ಧ್ವಂಸ

ಬಾಗ್ದಾದಿ ಹತ್ಯೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಅಮೆರಿಕದ ಡೆಲ್ಟಾಪಡೆ. ಸುಮಾರು 2 ತಾಸಿನಲ್ಲಿ ಈ ಕಾರ್ಯಾಚರಣೆ ಅಂತ್ಯವಾಗಿದೆ. ಈ ವೇಳೆ ಬಾಗ್ದಾದಿಯ ಹಿಂಬಾಲಕರು ಹತ್ಯೆಯಾಗಿದ್ದಾರೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಮುಗಿದ ಕೂಡಲೇ ಬಾಗ್ದಾದಿ ಅಡಗಿದ್ದ ಮನೆಯನ್ನು ಅಮೆರಿಕ ಸಂಪೂರ್ಣವಾಗಿ ನಾಶಪಡಿಸಿದೆ.

ಅಮೂಲ್ಯ ದಾಖಲೆಗಳು ವಶ

ಕಾರ್ಯಾಚರಣೆ ವೇಳೆ ಹಲವು ಅತ್ಯಮೂಲ್ಯ ರಹಸ್ಯ ಮಾಹಿತಿ ಹಾಗೂ ದಾಖಲೆಗಳು ಲಭ್ಯವಾಗಿವೆ. ಐಸಿಸ್‌ನ ಮೂಲ, ಅದರ ಮುಂದಿನ ಯೋಜನೆಯಂತಹ ವಿವರಗಳು ಅದರಲ್ಲಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಲಾಡೆನ್‌ ಹತ್ಯೆ ನೆನಪಿಸಿದ ಕಾರ್ಯಾಚರಣೆ

2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ನೌಕಾಪಡೆಯ ಸೀಲ್‌ ಕಮಾಂಡೋಗಳು ಅತ್ಯಂತ ರಹಸ್ಯ ಕಾರ್ಯಾಚರಣೆ ನಡೆಸಿ ಅಲ್‌ಖೈದಾ ಸಂಸ್ಥಾಪಕ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆಗೈದಿದ್ದವು. ಅದೇ ರೀತಿ ಬಾಗ್ದಾದಿ ಹತ್ಯೆ ಕಾರ್ಯಾಚರಣೆಯೂ ರಹಸ್ಯವಾಗಿ ನಡೆದಿದೆ.