2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ ಇಡೀ ಮೋದಿ ಸಮುದಾಯವನ್ನು ನಿಂದಿಸಿದ್ದರು. ಈ ಕುರಿತಾಗಿ ಕೋರ್ಟ್‌ನಿಂದ ದೋಷಿ ಎಂದು ತೀರ್ಮಾನವಾಗಿರುವ ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿದೆ. ಶನಿವಾರ ಈ ಕುರಿತಾಗಿ ಅವರು ಸುದ್ದಿಗೋಷ್ಠಿಯನ್ನೂ ನಡೆಸಿದರು.
ನವದೆಹಲಿ (ಮಾ.25): ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡುವ ಭರದಲ್ಲಿ ನೀವು ಇಡೀ ಒಬಿಸಿ ಸಮುದಾಯವನ್ನು ಟೀಕೆ ಮಾಡಿದಿರಲ್ಲ ಎನ್ನುವ ಪತ್ರಕರ್ತನ ಪ್ರಶ್ನೆಗೆ ರಾಹುಲ್ ಗಾಂಧಿ, ನೀವು ಬಿಜೆಪಿ ವಕ್ತಾರರೇ ಎಂದು ಸುದ್ದಿಗೋಷ್ಠಿಯಲ್ಲೇ ಕೇಳಿದ ಘಟನೆ ನಡೆದಿದೆ. ಲೋಕಸಭೆಯ ಸಂಸದ ಸ್ಥಾನದಿಂದ ತಮ್ಮನ್ನು ಅನರ್ಹ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಎದುರು ಮಾತನಾಡಿದ ರಾಹುಲ್ ಗಾಂಧಿ, ಅರ್ಧಗಂಟೆಯ ಸುದ್ದಗೋಷ್ಠಿಯಲ್ಲಿ ತಮ್ಮ ಅಂದಿನ ಹೇಳಿಕೆಯ ಬದಲು, ಅದಾನಿ ವಿಚಾರದ ಬಗ್ಗೆಯೇ ಮಾತನಾಡಿದರು. 2019ರಲ್ಲಿ ನೀವು ಹೇಳಿದ ಹೇಳಿಕೆಯ ಬಗ್ಗೆ ಕ್ಷಮೆ ಕೇಳ್ತೀರಾ ಎಂದು ಮಾಧ್ಯಮದವರು ಪದೇ ಪದೇ ಕೇಳಿದಾಗಲೂ, ಅದಿನ್ನೂ ಕೋರ್ಟ್‌ನಲ್ಲಿದೆ. ಈ ವಿಚಾರವಾಗಿ ನಾನು ಮಾತನಾಡಲು ಬಯಸೋದಿಲ್ಲ ಎಂದು ಹೇಳುತ್ತಿದ್ದರು. ಸುದ್ದಿಗೋಷ್ಠಿಯ ಕೊನೆಯಲ್ಲೊಮ್ಮೆ ಪತ್ರಕರ್ತರಿಂದ ಇದೇ ರೀತಿಯ ಪ್ರಶ್ನೆ ಎದುರಾದಾಗ ರಾಹುಲ್ ಗಾಂಧಿ ಸಿಟ್ಟಾಗಿದ್ದು ಸ್ಪಷ್ಟವಾಗಿ ಕಂಡುಬಂತು. ನೀವೇನು ಬಿಜೆಪಿ ವಕ್ತಾರರೇ ಎಂದು ಪ್ರಶ್ನೆ ಕೇಳಿದ್ದಲ್ಲದೆ, ಒಂದು ಕೆಲ್ಸ ಮಾಡಿ ನೀವು ನಿಮ್ಮ ಎದೆಯ ಮೇಲೆ ಬಿಜೆಪಿಯ ಚಿಹ್ನೆ ಅಂಟಿಕೊಂಡು ಬನ್ನಿ ಆಗ ನಿಮ್ಮದೇ ಶೈಲಿಯಲ್ಲಿ ಉತ್ತರ ನೀಡ್ತೇನೆ ಎಂದು ಹೇಳಿದ್ದು ಕಂಡುಬಂತು.
ರಾಹುಲ್ ಅವರೇ, ಈಗ ಈ ಕೇಸ್‌ನಲ್ಲಿ ಕೋರ್ಟ್ ತೀರ್ಪು ಬಂದಿದೆ. ರಾಹುಲ್ ಗಾಂಧಿ ಇತರೆ ಹಿಂದುಳಿದ ಜಾತಿಗಳ ಅಪಮಾನ ಮಾಡಿದ್ದಾರೆ. ಇಡೀ ದೇಶದಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸುವ ಮೂಲಕ ರಾಹುಲ್ ಗಾಂಧಿ ಒಬಿಸಿ ಜಾತಿಯನ್ನು ಅವಮಾನ ಮಾಡಿದ್ದಾರೆ ಎಂದು ಹೇಳುತ್ತಿದೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದಕ್ಕೆ,
'ಅಣ್ಣಾ, ಮೊದಲು ನೀವು ಆ ಕಡೆಯಿಂದ ಇದೇ ಪ್ರಶ್ನೆ ಕೇಳಿದ್ರಿ, ಬಳಿಕ ನೇರವಾಗಿ ನನ್ನ ಎದುರುಗಡೆಯ ಕಡೆಯಿಂದ ನಿಂತು ಇದೇ ಪ್ರಶ್ನೆ ಕೇಳಿದ್ರಿ, ನಿಮ್ಮ ಮೂರನೇ ಪ್ರಯತ್ನ ಅನ್ನೋ ರೀತಿಯಲ್ಲಿ ಈಗ ಈ ಕಡೆಯಿಂದ ಪ್ರಶ್ನೆ ಕೇಳ್ತಾ ಇದ್ದೀರಿ. ಹಾಗಿದ್ದಲ್ಲಿ ನೀವು ಇಷ್ಟು ನೇರವಾಗಿ ಯಾಕೆ ಬಿಜೆಪಿಗೋಸ್ಕರ ಕೆಲಸ ಮಾಡುತ್ತಿದ್ದೀರಿ? ಸ್ವಲ್ಪ ಬೇರೆ ಬೇರೆ ಥರ ಕೇಳಿ. ಬೇರೆ ಬೇರೆ ಸ್ಟೈಲ್‌ಗಳನ್ನು ಕೇಳುತ್ತಾ ಈ ವಿಚಾರವನ್ನು ಕೇಳಿ. ನಿಮಗೇನು ಬಿಜೆಪಿಯಿಂದ ಏನಾದರೂ ಆದೇಶ ಬಂದಿದೆಯೇ? ನೋಡಿ ನೀವು ನಗ್ತಾ ಇದ್ದೀರಿ ಎಂದು ಸಿಟ್ಟು ಮಿಶ್ರಿತ ವ್ಯಂಗ್ಯದಲ್ಲಿಯೇ ರಾಹುಲ್ ಗಾಂಧಿ ಉತ್ತರಿಸಲು ಆರಂಭಿಸಿದರು.
Rahul Gandhi: ನನ್ನ ಹೆಸರು ಗಾಂಧಿ, ನಾನು ಯಾರಿಗೂ ಕ್ಷಮೆ ಕೇಳೋದಿಲ್ಲ!
'ಇಲ್ಲಿ ಕೇಳಿ ನಾನೇ ನಿಮಗೆ ಉದಾಹರಣೆ ನೀಡುತ್ತೇನೆ. ಬೇರೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಿ ಆಮೇಲೆ ಈ ವಿಚಾರದತ್ತ ಬರಬೇಕು. ಹೇಗೆ ಅನ್ನೋದನ್ನ ಬೇಕಾದರೂ ಹೇಳ್ತೇನೆ ಎಂದು ಅವರು ತಿಳಿಸಿದರು. 'ಪ್ಲೀಸ್... ನೀವೇನಾದರೂ ಬಿಜೆಪಿ ಪರವಾಗಿಯೇ ಕೆಲಸ ಮಾಡಲು ಬಯಸಿದ್ದರೆ, ಒಂದು ಕೆಲಸ ಮಾಡಿ ಬಿಜೆಪಿ ಚಿಹ್ನೆಯನ್ನು ನಿಮ್ಮ ಎದೆಯ ಮೇಲೆ ಧರಿಸಿಕೊಂಡು ಇಲ್ಲಿಗೆ ಬನ್ನಿ. ಇದೇ ಪ್ರಶ್ನೆಯನ್ನು ನನಗೆ ಕೇಳಿ. ನಾನು ಅವರಿಗೆ ನೀಡುವ ರೀತಿಯಲ್ಲೇ ನಿಮಗೂ ಉತ್ತರ ನೀಡುತ್ತೇನೆ. ಪತ್ರಕರ್ತರ ಸೋಗಿನಲ್ಲಿ ಬಂದು ಈ ಪ್ರಶ್ನೆ ಕೇಳಬೇಡಿ... ನೋಡಿದ್ರಾ ಅವರ ಹವಾ ಎಲ್ಲಾ ಇಳಿದುಹೋಯಿತು ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
Rahul Disqualified: ಜಾತಿ ನಿಂದನೆ ಮಾಡಿ ಒಂದು ಕ್ಷಮೆ ಕೇಳೋದಕ್ಕೆ ರಾಗಾಗೆ 'ಅಹಂ' ಅಡ್ಡಿ ಬಂತೇ!
'ಅವರು ನನ್ನನ್ನು ಶಾಶ್ವತವಾಗಿ ಅನರ್ಹಗೊಳಿಸಿದರೂ, ನಾನು ನನ್ನ ಕೆಲಸವನ್ನು ಮಾಡುತ್ತಲೇ ಇರುತ್ತೇನೆ. ನಾನು ಸಂಸತ್ತಿನ ಒಳಗೆ ಇದ್ದೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ದೇಶಕ್ಕಾಗಿ ಹೋರಾಡುತ್ತಲೇ ಇರುತ್ತೇನೆ. ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸುವುದು ನನ್ನ ಕೆಲಸ, ಅಂದರೆ ದೇಶದ ಸಂಸ್ಥೆಗಳನ್ನು ರಕ್ಷಿಸುವುದು, ದೇಶದ ಬಡ ಜನರ ಧ್ವನಿಯನ್ನು ರಕ್ಷಿಸುವುದು ಮತ್ತು ಅದಾನಿ ಅವರೊಂದಿಗಿನ ಸಂಬಂಧವನ್ನು ದುರ್ಬಳಕೆ ಮಾಡಿಕೊಳ್ಳುವ ಜನರ ಬಗ್ಗೆ ಜನರಿಗೆ ಸತ್ಯವನ್ನು ಹೇಳುವುದು ನನ್ನ ಗುರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
