ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಂಡಿರುವ ಬಹುತೇಕ ಮಾನನಷ್ಟ ಪ್ರಕರಣಗಳು ಕ್ಷಮಾಪಣೆಯೊಂದಿಗೆ ಇತ್ಯರ್ಥವಾಗಿವೆ. ಈ ವಿಚಾರದಲ್ಲೂ ರಾಹುಲ್ ಕ್ಷಮೆ ಕೇಳಿದ್ದರೆ ಅವರ ಸಂಸತ್ ಸದಸ್ಯತ್ವ ಖಂಡಿತವಾಗಿಯೂ ಉಳಿದುಕೊಳ್ಳುತ್ತಿತ್ತು. ಆದರೆ, ಈ ಬಾರಿ ಅವರಿಗೆ ಕ್ಷಮೆಯಾಚಿಸಲು ಅಡ್ಡ ಬಂದಿದ್ದು 'ಅಹಂ' !

ನವದೆಹಲಿ (ಮಾ.25): ಒಂದು ವಿಚಾರ ಇಲ್ಲಿ ಸ್ಪಷ್ಟವಾಗಿ ಹೇಳಬೇಕು, ನಮ್ಮಲ್ಲಿ ಧರ್ಮನಿಂದನೆ ಮಾಡಿ ಬೇಕಾದರೆ ಬದುಕಬಹುದು. ಆದರೆ, ಜಾತಿ ನಿಂದನೆ ಮಾಡಿ ಶಿಕ್ಷೆಯಿಂದ ಪಾರಾಗೋದು ಕಷ್ಟಕಷ್ಟ. ರಾಹುಲ್‌ ಗಾಂಧಿ ಪಾಲಿಗೆ ಅಗಿರುವ ವಿಚಾರವೇ ಅಂಥದ್ದು. ಪ್ರಧಾನಿ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ ರಾಹುಲ್‌ ಗಾಂಧಿ ಮಾಡಿದ್ದು ಸ್ಪಷ್ಟವಾಗಿ 'ಜಾತಿ' ನಿಂದನೆ. 2019ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್‌ ಕೋರ್ಟ್‌ ರಾಹುಲ್‌ ಗಾಂಧಿ ಎರಡು ವರ್ಷದ ಶಿಕ್ಷೆ ವಿಧಿಸಿದೆ. ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿಯಂತಲ್ಲ ಯಾವುದೇ ಜನಪ್ರತಿನಿಧಿಗೆ ಎರಡು ಹಾಗೂ ಅದಕ್ಕಿಂತ ಹೆಚ್ಚಿನ ವರ್ಷದ ಶಿಕ್ಷೆಯಾದಲ್ಲಿ ಅವರು ಸಂಸದ ಸ್ಥಾನದಿಂದ ತಾನೇತಾನಾಗಿ ಅನರ್ಹರಾಗುತ್ತಾರೆ. ಆದರೆ, ಶಿಕ್ಷೆ ಸಿಕ್ಕ ಬೆನ್ನಲ್ಲಿಯೇ ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌ಗೆ ತೆರಳಿ ತೀರ್ಪಿಗೆ ತಡೆಯಾಜ್ಞೆ ತರೋದು ಬುದ್ದಿವಂತಿಕೆ. ಆದರೆ, ಕಾಂಗ್ರೆಸ್ ಪಾಳಯದಲ್ಲಿದ್ದ ಘಟಾನುಘಟಿ ವಕೀಲರು ಯಾರೂ ಇಂಥ ಸಾಹಸ ಮಾಡಲಿಲ್ಲ. ರಾಹುಲ್‌ಗೆ ಶಿಕ್ಷೆ ಪ್ರಕಟವಾದ ಬಳಿಕ ಜಾಮೀನು ಪಡೆದು ದೆಹಲಿಗೆ ಬಂದು ಭರ್ತಿ ಒಂದು ದಿನ ಕಳೆದರೂ ಮೇಲ್ಮನವಿ ಸಲ್ಲಿಸಿರಲಿಲ್ಲ. ಆದರೆ, ಲೋಕಸಭೆ ಕಾರ್ಯಾಲಯ ತನ್ನ ಎಂದಿನ ಪ್ರಕ್ರಿಯೆ ಮಾಡಿದೆ. ನಿಮಗೊಂದು ವಿಚಾರ ನೆನಪಿರಲಿ, ಅಫ್ಜಲ್‌ ಗುರು, ಯಾಕೂಬ್‌ ಮೆಮೊನ್‌ ರಕ್ಷಣೆಗಾಗಿ ನಡುರಾತ್ರಿ ಸುಪ್ರೀಂ ಕೋರ್ಟ್‌ ಕದತಟ್ಟಿದ್ದ ಕಾಂಗ್ರೆಸ್‌ ಪಾಳಯದ ವಕೀಲರು ಯಾರೂ ರಾಹುಲ್‌ ನೆರವಿಗೆ ಧಾವಿಸಲಿಲ್ಲ. 

ಒಟ್ಟಾರೆ ರಾಹುಲ್‌ ಗಾಂಧಿ ಅವರ ಸದಸ್ಯತ್ವ ರದ್ದಾಗಿದ್ದಕ್ಕೆ ಎಲ್ಲೂ ಬಿಜೆಪಿ ಕಾರಣವಲ್ಲ. ಅದಕ್ಕಾಗಿ ಬಿಜೆಪಿಯ ಹಿರಿಯ ನಾಯಕರು ಯಾರೂ ಈ ಬಗ್ಗೆ ಮಾತೇ ಆಡಿಲ್ಲ. ರಾಹುಲ್‌ ಅವರ ಇಂದಿನ ಪರಿಸ್ಥಿತಿಗೆ ಕಾರಣವಾಗಿರುವುದು ಈ ಕೇಸ್‌ನಲ್ಲಿ ವಾದ ಮಾಡಿದ ಅವರ ಪರ ವಕೀಲರು. ಸುಮ್ಮನೆ ಯೋಚಿಸಿ, ಕರ್ನಾಟಕಕ್ಕೆ ಬಂದು ಯಾವುದೇ ಒಂದು ಸ್ಪಷ್ಟ ಜಾತಿಯನ್ನು ಹೆಸರಿಸಿ, ಈ ಜಾತಿಯವರೆಲ್ಲಾ ಕಳ್ಳರೇ ಯಾಕಿರುತ್ತಾರೆ ಎಂದು ಹೇಳಿನೋಡಿ. ಬಹುಶಃ ಆ ವ್ಯಕ್ತಿ ಕ್ಷಮೆ ಕೇಳುವವರೆಗೂ ಆಗುವ ಪ್ರತಿಭಟನೆಗೆ ಲೆಕ್ಕವೇ ಇರುತ್ತಿರಲಿಲ್ಲ. ಅಂಥದ್ದರಲ್ಲಿ 'ಮೋದಿ' ಎನ್ನುವ ಜಾತಿಯನ್ನು ಟೀಕಿಸಿದ ರಾಹುಲ್‌ ಗಾಂಧಿಯನ್ನು ಶಿಕ್ಷೆ ನೀಡಿಸಿಯೇ ಸಿದ್ಧ ಎನ್ನುತ್ತಿದ್ದ ಪೂರ್ಣೇಶ್‌ ಮೋದಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಆತ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆ ಹಾಕಿದ ಕೂಡಲೇ ರಾಹುಲ್‌ ಗಾಂಧಿ, ನೋಡಪ್ಪ ನಾನು ಆ ಅರ್ಥದಲ್ಲಿ ಹೇಳಿದ್ದಲ್ಲ. ಪ್ರಧಾನಿಯನ್ನು ಟೀಕಿಸುವ ವೇಳೆ ಇಂಥದ್ದೊಂದು ಮಾತು ಬಂದಿದೆ. ನಿಮ್ಮ ಜಾತಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದರೆ ಇಡೀ ಕೇಸ್ ಅಲ್ಲಿಗೆ ಮುಗಿದುಹೋಗುತ್ತಿತ್ತು. ರಾಹುಲ್‌ ಗಾಂಧಿ ಮೊಂಡುತನ ಹಾಗೂ ಇದಕ್ಕೆ ಬಹುಪರಾಕ್‌ ಹಾಕಿದ ರಾಹುಲ್‌ ವಕೀಲರ ದಡ್ಡತನ ಇಲ್ಲಿ ಕಾಣುತ್ತದೆ.

ಹಾಗಂತ ಕ್ರಿಮಿನಲ್‌ ಮಾನಹಾನಿ ಕೇಸ್‌ನಲ್ಲಿ ರಾಹುಲ್‌ ಗಾಂಧಿ ಈ ಹಿಂದೆ ಕ್ಷಮೆ ಕೇಳಿಲ್ಲ ಎಂದೇನಿಲ್ಲ. ಇದಕ್ಕೂ ಮುನ್ನ ಮೂರು ಬಾರಿ ಅವರು ಕ್ಷಮೆ ಕೇಳಿ ಬಚಾವ್‌ ಆಗಿದ್ದರು.
ಹೆಚ್ಚಿನ ಮಾನನಷ್ಟ ಪ್ರಕರಣಗಳು ಕ್ಷಮಾಪಣೆಯೊಂದಿಗೆ ಇತ್ಯರ್ಥಗೊಳ್ಳುತ್ತವೆ ಮತ್ತು ಈ ಪ್ರಕರಣದಲ್ಲೂ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದರೆ ಬಹುಶಃ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಬಹುದಿತ್ತು ಮತ್ತು ನಂತರ ನ್ಯಾಯಾಲಯವು ರಾಹುಲ್ ಗಾಂಧಿಗೆ ಶಿಕ್ಷೆಯನ್ನು ನೀಡುತ್ತಿರಲಿಲ್ಲ. ಈ ಕಾರಣದಿಂದಾಗಿ ಅವರ ಸಂಸತ್ತಿನ ಸದಸ್ಯತ್ವವೂ ರದ್ದಾಗುತ್ತಿರಲಿಲ್ಲ.
ಮೂರು ಬಾರಿ ಸೂರತ್‌ ಕೋರ್ಟ್‌ನಲ್ಲಿ ಖುದ್ದು ವಿಚಾರಣೆಗೆ ಹಾಜರಾಗಿದ್ದ ರಾಹುಲ್‌ ಗಾಂಧಿ 'ಏನಾಗುತ್ತದೋ ನೋಡೋಣ' ಎನ್ನುವ ಮನೋಭಾವದಲ್ಲಿ ಇದ್ದರೆ ಹೊರತು, ಒಮ್ಮೆಯೂ ಕ್ಷಮೆ ಕೇಳುವ ಪ್ರಯತ್ನವನ್ನೇ ಮಾಡಲಿಲ್ಲ. 

2019ರಲ್ಲಿ ರಾಹುಲ್‌ ಗಾಂಧಿ ತಮ್ಮದೇ ಹೇಳಿಕೆಯಾದ 'ಚೌಕಿದಾರ್‌ ಚೋರ್‌ ಹೇ' ಹೇಳಿಕೆಗೆ ಒಂದಲ್ಲ, ಮೂರು ಬಾರಿ ಸುಪ್ರೀಂ ಕೋರ್ಟ್‌ಗೆ ಕ್ಷಮೆ ಕೇಳಿದ್ದರು. ಅದರಲ್ಲೂ ತಮ್ಮ ಕೊನೆಯ ಕ್ಷಮಾಪಣೆ ಪತ್ರದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರನ್ನೇ ಉದ್ದೇಶಿಸಿ ನಿಮ್ಮ ಕುರಿತಾಗಿ ತಪ್ಪಾಗಿ ನೀಡಿದ ಹೇಳಿಕೆಗೆ ತಾನು ಪೂರ್ಣ ಮನಸ್ಸಿನಿಂದ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು.ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ರಾಹುಲ್ ಗಾಂಧಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ರಾಹುಲ್ ಗಾಂಧಿಗೆ ನೀಡಿದ್ದ ಸಲಹೆಯಿಂದಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸುವ ಮೂಲಕ ಈ ಪ್ರಕರಣದಿಂದ ಮುಕ್ತರಾಗಿದ್ದರು. ಈ ಬಾರಿಯೂ ಅವರು ಅದೇ ರೀತಿ ಮಾಡಬಹುದಿತ್ತು. ಆದರೆ, ಅವರ ಪರ ವಾದ ಮಾಡಿದ ವಕೀಲರು ನೀವು ಯಾವುದೇ ಕಾರಣಕ್ಕೂ ಕ್ಷಮೆ ಕೇಳಬೇಡಿ ಎಂದಿದ್ದೇ ಈ ಸ್ಥಿತಿಗೆ ಕಾರಣ ಎನ್ನಬಹುದು. ಅದರಿಂದಾಗಿ ರಾಹುಲ್‌ ಹಾಲಿಯಿಂದ ಮಾಜಿ ಸಂಸದರಾಗಿದ್ದಾರೆ.

ಮೋದಿ ನೆನಪಿರಲಿ, ನನ್ನ ಕುಟುಂಬ ಭಾರತದ ಪ್ರಜಾಪ್ರಭುತ್ವಕ್ಕೆ ನೀರಲ್ಲ, ರಕ್ತ ಹಾಕಿ ಬೆಳೆಸಿದೆ: ಪ್ರಿಯಾಂಕಾ ವಾದ್ರಾ!

ರಾಜಕಾರಣಿಗಳು ತಾವು ನೀಡಿದ ಹೇಳಿಕೆಗೆ ಕ್ಷಮೆ ಕೇಳುವುದು ದೊಡ್ಡ ವಿಚಾರವೇ ಅಲ್ಲ. ಕ್ಷಮೆ ಕೇಳಿದ್ದಲ್ಲಿ ಯಾರೂ ಸಣ್ಣವರೂ ಆಗೋದಿಲ್ಲ. ಕ್ಷಮೆಯೇ ಕೇಳಬಾರದು ಎಂದಲ್ಲಿ ಕ್ರಿಮಿನಲ್‌ ಮಾನಹಾನಿಯಾಗುವಂಥ ಮಾತುಗಳನ್ನೇ ಆಡಬಾರದು. ಇನ್ನು ಕ್ಷಮೆ ಕೇಳಿ ಕೋರ್ಟ್‌ ಶಿಕ್ಷೆಯಿಂದ ಬಚಾವ್‌ ಆದವರೂ ಇದ್ದಾರೆ. ದೆಹಲಿಯ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹಿಂದೊಮ್ಮೆ ನಿತಿನ್‌ ಗಡ್ಕರಿ ದೇಶದ ಅತ್ಯಂತ ಭ್ರಷ್ಟ ನಾಯಕ ಎಂದಿದ್ದರು. ಕ್ರಿಮಿನಲ್‌ ಮಾನಹಾನಿ ಕೇಸ್‌ ಬಿದ್ದಾಗ ಸ್ವತಃ ಅವರೇ ಕ್ಷಮೆ ಕೇಳಿ ಕೇಸ್‌ ಕ್ಲೋಸ್‌ ಮಾಡಿದ್ದರು. ಕಪಿಲ್‌ ಸಿಬಲ್‌, ಅರುಣ್‌ ಜೇಟ್ಲಿ, ಅಕಾಲಿ ದಳ ನಾಯಕ ಬ್ರಿಕಮ್‌ ಸಿಂಗ್ ಮಜಿತಿಯಾ ವಿರುದ್ಧವೂ ಸಾರ್ವಜನಿಕ ವೇದಿಕೆಯಲ್ಲಿಯೇ ಮಾನಹಾನಿ ಆಗುವಂಥ ಮಾತುಗಳನ್ನು ಆಡಿದ್ದರು. ಕ್ರಿಮಿನಲ್‌ ಮಾನಹಾನಿ ಕೇಸ್‌ ಬಿದ್ದಾಗ ಕ್ಷಮೆ ಕೇಳುವ ಮೂಲಕ ಬುದ್ದಿವಂತರಾಗಿದ್ದರು.

ರಾಹುಲ್ ಗಾಂಧಿ To ಲಾಲೂ ಪ್ರಸಾದ್, ಸಂಸದ, ಶಾಸಕ ಸ್ಥಾನದಿಂದ ಅನರ್ಹಗೊಂಡ ನಾಯಕರ ಲಿಸ್ಟ್!

ಆದರೆ, ಜಾತಿ ನಿಂದನೆ ಮಾಡಿ ಕ್ಷಮೆ ಕೇಳುವ ದೊಡ್ಡ ಮನಸ್ಸು ಮಾಡದ ರಾಹುಲ್‌ ಗಾಂಧಿ, ಇಂದು ಹಾಲಿಯಿಂದ ಮಾಜಿ ಸಂಸದರಾಗಿದ್ದಾರೆ. ಹೀಗೆ ಮುಂದುವರಿದರೆ ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧೆ ಮಾಡುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ.