ನವದೆಹಲಿ [ಡಿ24: ಈರುಳ್ಳಿ, ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ ಎಂದು ಕೊರಗುತ್ತಿರುವ ನಾಗರಿಕರಿಗೆ ಈ ವಾರ ಇನ್ನೊಂದು ದರ ಏರಿಕೆಯ ಸುದ್ದಿ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಎಲ್ಲ ಬಗೆಯ ರೈಲುಗಳ ಪ್ರಯಾಣ ದರವನ್ನು ಭಾರತೀಯ ರೈಲ್ವೆ ಇಲಾಖೆ ಇದೇ ವಾರ ಹೆಚ್ಚಳ ಮಾಡಲಿದೆ ಎಂದು ಮೂಲಗಳು ತಿಳಿಸಿತ್ತು. ಇದೀಗ ರೇಲ್ವೆ ಊಟದ ದರದಲ್ಲಿಯೂ ಮಾರ್ಪಾಡು ಮಾಡಲಾಗಿದೆ ಎಂದು ಐಆರ್ ಸಿಟಿಸಿ  ಹೇಳಿದೆ.

ರೈಲ್ವೆ ನಿಲ್ದಾಣಗಳಲ್ಲಿನ ಕ್ಯಾಂಟೀನ್‌ನಲ್ಲಿನ ಆಹಾರದ ದರವನ್ನು ಹೆಚ್ಚಳ ಮಾಡಲಾಗಿದೆ. ಐಆರ್‌ಸಿಟಿಸಿ ಸಲ್ಲಿಸಿದ ಮನವಿಯ ಅನ್ವಯ ರೈಲ್ವೆ ಸಚಿವಾಲಯ ದರ ಹೆಚ್ಚಳಕ್ಕೆ ಓಕೆ ಎಂದಿದೆ. ರೈಲ್ವೆ ನಿಲ್ದಾಣದಲ್ಲಿರುವ ದಣಿವು ನಿವಾರಿಸಿಕೊಳ್ಳುವ ಕೊಠಡಿ ಮತ್ತು ಜನ್ ಆಹಾರ್ಸ್ ಸೇರಿದಂತೆ ವಿವಿಧ ಸ್ಥಿರ ಘಟಕಗಳಲ್ಲಿನ ಊಟ, ಉಪಹಾರದ ದರ ಏರಿಕೆ ಮಾಡಲಾಗಿದೆ. 

ಇನ್ಮುಂದೆ ಹುಬ್ಬಳ್ಳಿ-ಬೆಂಗಳೂರು ರೈಲು ಪ್ರಯಾಣಕ್ಕೆ ಐದೇ ತಾಸು..

ರಾಜಧಾನಿ, ಶತಾಬ್ದಿ ಮತ್ತು ಡುರೇಂಟೋ ರೈಲುಗಳಲ್ಲಿನ ಆಹಾರಗಳ ದರಗಳು ಹೆಚ್ಚಾಗಿವೆ. ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲು ದರ ಏರಿಕೆ ಅನಿವಾರ್ಯವಾಗಿತ್ತು ಎಂಬುದು ಐಆರ್ ಸಿಟಿಸಿ ಕೊಟ್ಟ ಕಾರಣ

ಹಾಗಾದರೆ ದರ ಪಟ್ಟಿ ಏನಿದೆ? ನೋಡಿಕೊಂಡು ಬನ್ನಿ

* ವೆಜ್ ಬ್ರೇಕ್ ಫಾಸ್ಟ್‌ 35 ರೂ.
* ನಾನ್ ವೆಜ್ ಬ್ರೇಕ್‌ ಫಾಸ್ಟ್ 45 ರೂ.
* ಗುಣಮಟ್ಟದ ಸಸ್ಯಹಾರಿ ಊಟ 70 ರೂ.
* ಗುಣಮಟ್ಟದ ಊಟ (ಎಗ್ ಕರಿ) 80 ರೂ.
* ಗುಣಮಟ್ಟದ ಊಟ (ಚಿಕನ್ ಕರಿ) 120 ರೂ.
* ವೆಜ್ ಬಿರಿಯಾನಿ (350 ಗ್ರಾಂ) 70 ರೂ.
* ಎಗ್ ಬಿರಿಯಾನಿ (350 ಗ್ರಾಂ) 80 ರೂ.
* ಚಿಕನ್ ಬಿರಿಯಾನಿ (350 ಗ್ರಾಂ) 100 ರೂ.
 ಸ್ನ್ಯಾಕ್ ಮೀಲ್ ( 350 ಗ್ರಾಂ) 150 ರೂ.

ರಾಜಧಾನಿ, ಶತಾಬ್ದಿ ಮತ್ತು ಡುರೋಂಟೋ ರೈಲುಗಳಲ್ಲಿ ಬ್ರೇಕ್‌ಫಾಸ್ಟ್ ದರ 140 ರೂ. ಮತ್ತು ಈ ಮೂರು ರೈಲುಗಳ ಎಸಿ ಫಸ್ಟ್, ಎಸಿ ಸೆಕೆಂಡ್ ಮತ್ತು ಎಸಿ ಥರ್ಡ್‌ಗಳಲ್ಲಿ 105 ರೂ. ಆಗುತ್ತದೆ. ರಾತ್ರಿ ಊಟಕ್ಕೆ ಎಸಿ ಫಸ್ಟ್‌ಕ್ಲಾಸ್‌ನಲ್ಲಿ 245 ರೂ. ಎಸಿ ಸೆಕೆಂಡ್ ಮತ್ತು ಎಸಿ ಥರ್ಡ್‌ನಲ್ಲಿ 185 ರೂ. ಆಗುತ್ತದೆ. ಡುರೋಂಟೋ ಟ್ರೈನ್ ಸ್ಲೀಪರ್ ಕ್ಲಾಸ್ ಪ್ರಯಾಣಿಕರಿಗೆ ಬ್ರೇಕ್ ಫಾಸ್ಟ್ 65 ರೂ., ಮಧ್ಯಾಹ್ನ ಮತ್ತು ರಾತ್ರಿಯ ಊಟ 120 ರೂ. ಆಗಲಿದೆ. ಸಂಜೆಯ ಟೀ 50 ರೂ. ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿ ಕಿ.ಮೀ.ಗೆ 5 ಪೈಸೆಯಿಂದ 40 ಪೈಸೆಯವರೆಗೂ ಪ್ರಯಾಣ ದರ ಏರಿಕೆಯಾಗಲಿದೆ. ಹವಾನಿಯಂತ್ರಿತ ದರ್ಜೆಯಿಂದ ಹಿಡಿದು ಸಬ್ ಅರ್ಬನ್‌ ರೈಲುಗಳು, ಮಾಸಿಕ, ತ್ರೈಮಾಸಿಕ ಸೀಸನ್‌ ಟಿಕೆಟ್‌ (ಪಾಸ್‌)ಗಳ ದರದಲ್ಲೂ ಹೆಚ್ಚಳವಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿತ್ತು. ಈಗ ಹೊಟ್ಟೆಗೆ ಹಾಕುವ ಊಟದ ದರವೂ ಹೆಚ್ಚಳವಾಗಿದೆ.