ಹಂಪಿ, ಇತರೆಡೆಗೆ ರಾಮಯಾತ್ರೆ ರೈಲು: ರಾಮಾಯಣದ ಸ್ಥಳಗಳಿಗೆ ಭೇಟಿ!
* ರಾಮಾಯಣದ ಸ್ಥಳಗಳಿಗೆ ಐಷಾರಾಮಿ ಪ್ರವಾಸಿ ರೈಲು
* ಅಯೋಧ್ಯೆ, ಹಂಪಿ ಸೇರಿ ವಿವಿಧ ಸ್ಥಳಗಳಿಗೆ ಯಾತ್ರೆ
* 17 ದಿನಗಳ ಈ ರೈಲು ಯಾತ್ರೆಗೆ 82,950 ರು. ನಿಗದಿ
* ನ.7ರಿಂದ ‘ರಾಮಾಯಣ ಯಾತ್ರೆ’ ಆರಂಭ
ನವದೆಹಲಿ(ಸೆ.06): ಭಾರತದಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಶ್ರೀ ರಾಮಾಯಣ ಯಾತ್ರೆಯ ಹವಾನಿಯಂತ್ರಿತ ಪ್ರವಾಸಿ ರೈಲು ಸೇವೆಯನ್ನು ಐಆರ್‌ಸಿಟಿಸಿ ಆರಂಭಿಸಿದೆ. ದೆಹಲಿಯ ಸಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ನ.7ರಿಂದ ಆರಂಭವಾಗಲಿರುವ ಈ ಧಾರ್ಮಿಕ ಯಾತ್ರೆಯ ರೈಲು 17 ದಿನಗಳ ಕಾಲ 7500 ಕಿ.ಮೀ ಸಂಚರಿಸಿ, ಅಯೋಧ್ಯೆ, ಹಂಪಿ ಸೇರಿದಂತೆ ಶ್ರೀ ರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯಲಿದೆ.
17 ದಿನಗಳ ಈ ರಾಮಯಾತ್ರೆಗೆ ಒಬ್ಬ ವ್ಯಕ್ತಿಗೆ ಐಆರ್‌ಸಿಟಿಸಿ 82,950 ರು. ದರ ನಿಗದಿ ಮಾಡಿದೆ.
ಯಾತ್ರೆ ಹೀಗಿರಲಿದೆ:
ದಿಲ್ಲಿಯಿಂದ ಹೊರಡುವ ರೈಲಿಗೆ ರಾಮಜನ್ಮಭೂಮಿ ಅಯೋಧ್ಯೆ ಮೊದಲ ನಿಲ್ದಾಣವಾಗಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಹಾಗೂ ನಂದಿಗ್ರಾಮದಲ್ಲಿರುವ ಭರತ ಮಂದಿರದ ಜತೆಗಿರುವ ಹನುಮಾನ್ ದೇಗುಲವನ್ನು ಸಹ ಯಾತ್ರಾರ್ಥಿಗಳು ವೀಕ್ಷಿಸಬಹುದಾಗಿದೆ. ಆ ಬಳಿಕ ರೈಲು ಸೀತೆಯ ಜನ್ಮಸ್ಥಳ ಬಿಹಾರದ ಸೀತಾಮಢಿಗೆ ತೆರಳಲಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ನೇಪಾಳದಲ್ಲಿರುವ ಜನಕಪುರದಲ್ಲಿರುವ ರಾಮ-ಜಾನಕಿ ದೇಗುಲಕ್ಕೂ ತೆರಳಬಹುದಾಗಿದೆ.
ಇದಾದ ಬಳಿಕ ವಾರಾಣಸಿ, ಪ್ರಯಾಗ್‌ರಾಜ್, ಶೃಂಗ್ವೆರ್‌ಪುರ ಮತ್ತು ಚಿತ್ರಕೂಟಕ್ಕೆ ರಸ್ತೆ ಮುಖಾಂತರವಾಗಿ ತೆರಳಬಹುದು. ಈ ಮೂರು ನಗರಗಳಲ್ಲಿ ಪ್ರಯಾಣಿಕರಿಗೆ ರಾತ್ರಿ ತಂಗಲು ಅವಕಾಶವಿರಲಿದೆ. ಕೊನೆಗೆ ನಾಶಿಕ್, ಕರ್ನಾಟಕದ ಹಂಪಿ ಹಾಗೂ ತಮಿಳುನಾಡಿನ ರಾಮೇಶ್ವರಂಗೆ ಭೇಟಿ ನೀಡಲಿದೆ. ಕೊನೆಗೆ 17ನೇ ದಿನಕ್ಕೆ ದೆಹಲಿಗೆ ರೈಲು ಬಂದು ಸೇರಲಿದೆ.
ತನ್ಮೂಲಕ ‘ದೇಖೋ ಆಪ್ನಾ ದೇಶ್’(ನಿಮ್ಮ ದೇಶವನ್ನು ನೋಡಿ) ಎಂಬ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಯನ್ನು ಉತ್ತೇಜಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸುತ್ತಿದೆ.