ದುಬೈನಲ್ಲಿರುವ 2 ಅಮೆರಿಕ ಸೈನ್ಯದ ಅಡಗುತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್‌, 500ಕ್ಕೂ ಹೆಚ್ಚು ಅಮೆರಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದ ಈ ಸ್ಥಳಗಳ ಮೇಲೆ ನಿಖರವಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿ

ಟೆಹ್ರಾನ್‌/ದುಬೈ: ಮಧ್ಯಪ್ರಾಚ್ಯ ಸಂಘರ್ಷಕ್ಕೆ 1 ತಿಂಗಳಾಗುತ್ತಿದ್ದಂತೆಯೇ ದುಬೈನಲ್ಲಿರುವ 2 ಅಮೆರಿಕ ಸೈನ್ಯದ ಅಡಗುತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕೋರ್‌, 500ಕ್ಕೂ ಹೆಚ್ಚು ಅಮೆರಿಕ ಸೇನಾ ಸಿಬ್ಬಂದಿಯನ್ನು ಹೊಂದಿದ್ದ ಈ ಸ್ಥಳಗಳ ಮೇಲೆ ನಿಖರವಾದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.

Add Asianetnews Kannada as a Preferred SourcegooglePreferred

ಇನ್ನೊಂದೆಡೆ, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹಲವಾರು ಡ್ರೋನ್ ದಾಳಿಗಳು ನಡೆದಿದ್ದು, ವಿಮಾನದ ರಾಡಾರ್ ವ್ಯವಸ್ಥೆಗೆ ಹಾನಿಯಾಗಿದೆ. ಆದಾಗ್ಯೂ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ‘ಇರಾನ್‌ ಹಾಗೂ ಅದರ ಬೆಂಬಲಿತರ ಕೃತ್ಯ ಇದು’ ಎಂದು ಕುವೈತ್‌ ದೂರಿದೆ.

ದುಬೈ ಮೇಲೆ ದಾಳಿ:

ದುಬೈನಲ್ಲಿನ ಅಮೆರಿಕ ಸೇನಾ ನೆಲೆ ಮೇಲೆ ದಾಳಿ ಯಾವ ಮಟ್ಟಿಗಿತ್ತು ಎಂದರೆ ಆಂಬ್ಯುಲೆನ್ಸ್‌ಗಳು ಮೃತ ಮತ್ತು ಗಾಯಗೊಂಡ ಅಮೆರಿಕನ್ನರನ್ನುಸಾಗಿಸಲು ಗಂಟೆಗಟ್ಟಲೆ ಕಾರ್ಯನಿರತವಾಗಿದ್ದವು ಎಂದು ವಕ್ತಾರರು ಹೇಳಿದ್ದಾರೆ.

‘ಈ ಪ್ರದೇಶವು ಅಮೆರಿಕನ್ ಸೈನಿಕರಿಗೆ ಸ್ಮಶಾನವಾಗಿ ಬದಲಾಗಲಿದೆ ಎಂಬುದನ್ನು ಟ್ರಂಪ್ ಮತ್ತು ಯುಎಸ್ ಸೈನ್ಯದ ಕಮಾಂಡರ್‌ಗಳು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರಬೇಕು. ಅವರಿಗೆ ಶರಣಾಗುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ’ ಎಂದು ಇರಾನ್‌ ವಕ್ತಾರ ಹೇಳಿದ್ದಾರೆ.

ಇರಾನ್‌ನಿಂದ ಅಮೆರಿಕದ ಎಫ್‌-16 ಫೈಟರ್‌ ಜೆಟ್‌ ನಾಶ

ಟೆಹ್ರಾನ್‌: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ (ಐಆರ್‌ಜಿಸಿ), ದಕ್ಷಿಣ ಇರಾನ್‌ನ ಆಗಸದಲ್ಲಿ ಅಮೆರಿಕದ ಎಫ್‌-16 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಇದು ಅಮೆರಿಕದೊಂದಿಗಿನ ನಡೆಯುತ್ತಿರುವ ಸಂಘರ್ಷದಲ್ಲಿ ಗಮನಾರ್ಹ ಉಲ್ಬಣವನ್ನು ಸೂಚಿಸುತ್ತದೆ.ವಿಮಾನವು ಫಾರ್ಸ್ ಪ್ರಾಂತ್ಯದ ಮೇಲೆ ಹಾರುವಾಗ ಇರಾನ್ ಪಡೆಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆ ಬಳಸಿ ಅದರ ಮೇಲೆ ದಾಳಿ ನಡೆಸಿವೆ ಎಂದು ಸೇನೆ ಹೇಳಿದೆ.

ಕಳೆದ 1 ವಾರದಲ್ಲಿ ದಾಳಿಗೆ ಒಳಗಾಗುತ್ತಿರುವ ಅಮೆರಿಕದ 3ನೇ ಫೈಟರ್ ಜೆಟ್‌ ಇದಾಗುದೆ.

ಸೌದಿ ಏರ್‌ಬೇಸ್‌ ಮೇಲೆ ಇರಾನ್‌ ದಾಳಿ

ವಾಷಿಂಗ್ಟನ್‌: ಸೌದಿ ಅರೇಬಿಯಾದ ಫ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ಶುಕ್ರವಾರ ದಾಳಿ ನಡೆಸಿದ್ದು, ಇದರಿಂದ ಅಮೆರಿಕದ ಹತ್ತು ಯೋಧರು ಗಾಯಗೊಂಡಿದ್ದಲ್ಲದೆ, ಹಲವು ವಿಮಾನಗಳಿಗೆ ಹಾನಿಯಾಗಿದೆ.

ಕ್ಷಿಪಣಿ ಹಾಗೂ ಮಾನವರಹಿತ ಡ್ರೋನ್‌ ಮೂಲಕ ಈ ದಾಳಿ ನಡೆಸಲಾಗಿದೆ. ಈ ವೇಳೆ ಇಬ್ಬರು ಯೋಧರಿಗೆ ಗಂಭೀರ ಗಾಯಗಳಾಗಿದ್ದು, ಅಮೆರಿಕದ ಹಲವು ಇಂಧನ ಮರುಪೂರಣ ವಿಮಾನಗಳಿಗೆ ಹಾನಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.ಸುಮಾರು 30 ದಿನಗಳಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಅಮೆರಿಕದ 13 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದರೆ, 300 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರು ಗುಣಮುಖರಾಗಿದ್ದು, ಸೇವೆಗೆ ವಾಪಸಾಗಿದ್ದಾರೆ ಎಂದು ಶುಕ್ರವಾರವಷ್ಟೇ ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ಪ್ರಿನ್ಸ್‌ ಸುಲ್ತಾನ್‌ ಏರ್‌ಬೇಸ್‌ ಮೇಲೆ ಇರಾನ್‌ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಮಾ.1ರಂದು ಇದೇ ರೀತಿ ನಡೆದ ದಾಳಿಯಲ್ಲಿ ಸೇನಾ ಸಿಬ್ಬಂದಿಯೊಬ್ಬರು ಆ ಸಂದರ್ಭದಲ್ಲಿ ಮೃತಪಟ್ಟಿದ್ದರು.

ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ: 3 ಪತ್ರಕರ್ತರು ಸಾವು

ಬೈರೂತ್‌: ದಕ್ಷಿಣ ಲೆಬನಾನ್‌ನಲ್ಲಿ ಪತ್ರಕರ್ತರಿದ್ದ ಕಾರಿನ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಇಬ್ಬರು ಲೆಬನಾನ್‌ ಟೀವಿ ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ ಮನಾರ್ ಟೀವಿ ವರದಿಗಾರ ಅಲಿ ಶೋಯೆಬ್ ಮತ್ತು ಅಲ್ ಮಯಾದೀನ್ ಟೀವಿಯ ವರದಿಗಾರ್ತಿ ಫಾತಿಮಾ ಫ್ಟೌನಿ ಹಾಗೂ ಫಾತಿಮಾರ ಸೋದರ, ಕ್ಯಾಮರಾಮ್ಯಾನ್‌ ಮೊಹಮ್ಮದ್‌ ಅವರು ಜೆಜ್ಜೈನ್‌ ಎಂಬಲ್ಲಿ ನಡೆದ, ಪತ್ರಕರ್ತರ ಕಾರಿನ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ. ಇವರು ಹಿಜ್ಬುಲ್ಲಾ ಪರ ಪತ್ರಕರ್ತರು ಎಂದು ಇಸ್ರೇಲ್‌ ಆರೋಪಿಸಿದೆ.