ಇಸ್ರೇಲ್ ದಾಳಿಯನ್ನು ಖಂಡಿಸಲು ಇರಾನ್ ಭಾರತಕ್ಕೆ ಮನವಿ ಮಾಡಿದೆ. ಜಾಗತಿಕ ಶಾಂತಿಗಾಗಿ ಭಾರತ ಮಧ್ಯಪ್ರವೇಶಿಸಬೇಕೆಂದು ಇರಾನ್ ಒತ್ತಾಯಿಸಿದೆ. ಅಮೆರಿಕ ಮತ್ತು ಪಾಕಿಸ್ತಾನದ ಹಸ್ತಕ್ಷೇಪದ ವಿರುದ್ಧ ಇರಾನ್ ಎಚ್ಚರಿಕೆ ನೀಡಿದೆ.
ನವದೆಹಲಿ (ಜೂ.20) ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಇರಾನ್ ರಾಯಭಾರ ಕಚೇರಿಯು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿತು. ಇರಾನ್‌ನ ಉಪ ಮುಖ್ಯಸ್ಥ ಮಿಷನ್ ಮೊಹಮ್ಮದ್ ಜಾವೇದ್ ಹುಸೇನಿ, ಇಸ್ರೇಲ್‌ನಿಂದ ಯಾವುದೇ ಕಾರಣವಿಲ್ಲದೇ ಇರಾನ್ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದರು. 'ನಮ್ಮ ಮುಗ್ಧ ಜನರು ಕೊಲ್ಲಲ್ಪಡುತ್ತಿದ್ದಾರೆ, ಆದರೆ ಪಾಶ್ಚಿಮಾತ್ಯ ಮಾಧ್ಯಮಗಳು ಇದನ್ನು ವರದಿ ಮಾಡುತ್ತಿಲ್ಲ. ಈ ದಾಳಿಯನ್ನು ಎಲ್ಲಾ ದೇಶಗಳು ಖಂಡಿಸಬೇಕು' ಎಂದು ಅವರು ಹೇಳಿದರು.
ಹಮಾಸ್‌ನ ನೆಪದಲ್ಲಿ ಇಸ್ರೇಲ್ ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದರಿಂದ ಈ ಸಂಘರ್ಷ ಉಲ್ಬಣಗೊಂಡಿದೆ ಎಂದು ದೂಷಿಸಿದ ಹುಸೇನಿ, ಇರಾನ್‌ನ ಬಳಿ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳಿಲ್ಲ, ಆದರೆ ಇಸ್ರೇಲ್‌ನ ಬಳಿ 75 ರಿಂದ 400 ಪರಮಾಣು ಶಸ್ತ್ರಾಸ್ತ್ರಗಳಿವೆ. ಇರಾನ್ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ, ಆದರೆ ಇಸ್ರೇಲ್ ಐದು ದೇಶಗಳ ಮೇಲೆ ದಾಳಿ ನಡೆಸಿದೆ' ಎಂದು ಅವರು ತಿಳಿಸಿದರು.
ಜಾಗತಿಕ ಶಾಂತಿಗೆ ಭಾರತ ಮುಂದೆ ಬರಬೇಕು:
ಭಾರತದ ಬೆಂಬಲಕ್ಕೆ ಧನ್ಯವಾದ ಸೂಚಿಸಿದ ಹುಸೇನಿ, ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಜಾಗತಿಕ ಶಾಂತಿಗಾಗಿ ಭಾರತ ಈ ದಾಳಿಯನ್ನು ಖಂಡಿಸಬೇಕು. ಭಾರತ ಟೀಕಿಸಿದರೆ ಇತರ ದೇಶಗಳೂ ಇದನ್ನು ಅನುಸರಿಸುತ್ತವೆ ಎಂದು ಅವರು ಒತ್ತಾಯಿಸಿದರು.
ಅಮೆರಿಕ ಮತ್ತು ಪಾಕಿಸ್ತಾನಕ್ಕೆ ಎಚ್ಚರಿಕೆ
ಅಮೆರಿಕ ಮತ್ತು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ಹುಸೇನಿ, ಇದು ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ. ಮೂರನೇ ದೇಶಗಳ ಹಸ್ತಕ್ಷೇಪ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಮುಂದುವರಿದು, ಇಸ್ರೇಲ್‌ಗೆ ಅಮೆರಿಕದ ಬೆಂಬಲವಿದೆ, ಆದರೆ ನಾವು ಅಮೆರಿಕವನ್ನು ನಂಬುವುದಿಲ್ಲ ಎಂದರು. ಇರಾನ್‌ನ ಕೆಲವು 'ಅಘೋಷಿತ ಅಧಿಕಾರಗಳನ್ನು' ಭವಿಷ್ಯಕ್ಕಾಗಿ ಸುರಕ್ಷಿತವಾಗಿರಿಸಲಾಗಿದೆ ಎಂದು ಅವರು ಸೂಚಿಸಿದರು.
ನಾವು ಇಸ್ರೇಲ್‌ನ್ನು ಗುರುತಿಸುವುದಿಲ್ಲ:
ನಾವು ಶಾಂತಿಯನ್ನು ಬಯಸುತ್ತೇವೆ, ಆದರೆ ಇಸ್ರೇಲ್‌ನನ್ನು ಗುರುತಿಸುವುದಿಲ್ಲ. ರಷ್ಯಾ ಮತ್ತು ಚೀನಾದಂತಹ ದೇಶಗಳು ಮಧ್ಯಸ್ಥಿಕೆಗೆ ಮುಂದಾಗಿವೆ. ಇರಾನ್‌ನ ಪರಮಾಣು ಕಾರ್ಯಕ್ರಮವು ಹಾನಿಗೊಳಗಾಗಿದೆ, ಆದರೆ ಎಷ್ಟರ ಮಟ್ಟಿಗೆ ಎಂಬುದನ್ನು ಈಗ ಹೇಳಲಾಗದು' ಎಂದು ಹುಸೇನಿ ಸ್ಪಷ್ಟಪಡಿಸಿದರು.
