ಸುಭಾಶ್ಚಂದ್ರ ಎಸ್‌.ವಾಗ್ಳೆ, ಕನ್ನಡಪ್ರಭ

ಚಿಕ್ಕಮಗಳೂರು: ಕಳೆದ 7 ದಶಕಗಳಿಂದ ಭಾರತೀಯ ಜನಸಂಘ ಮತ್ತು ಬಿಜೆಪಿಯ ಹೋರಾಟ, ದೇಶದ ಬಹುಸಂಖ್ಯಾತರ ಕನಸುಗಳು ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 6 ವರ್ಷಗಳ ಅಧಿಕಾರಾವಧಿಯಲ್ಲಿ ಈಡೇರಿದೆ. ಅದರಲ್ಲೂ ಮೋದಿ ಸರ್ಕಾರದ 2ನೇ ಅವಧಿಯ ಈ ಮೊದಲ ವರ್ಷದಲ್ಲಿ ಮೋದಿ ಅವರ ದಿಟ್ಟನಿರ್ಧಾರಗಳಿಂದಾಗಿ ಕಾಶ್ಮೀರ ಸಂಪೂರ್ಣವಾಗಿ ನಮ್ಮದಾಗುವ ಕಾಲ ಸನ್ನಿಹಿತವಾಗಿದೆ. ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಜಾರಿಯಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿದೆ. ದೇಶದ ಪಾಲಿಗೆ ಈ ಒಂದು ವರ್ಷ ಐತಿಹಾಸಿಕ ಕಾಲವಾಗಿದೆ. ಇದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರ ಅಭಿಪ್ರಾಯ. ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರು ಕನ್ನಡಪ್ರಭದೊಂದಿಗೆ ಮಾತನಾಡಿದರು. ಅದರ ಪೂರ್ಣಪಾಠ ಹೀಗಿದೆ...

ದೇಶದ ವಿಕಾಸವಾಗಬೇಕಾದರೆ ಸಮಾಜದ ಸಾಮಾನ್ಯ ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗಬೇಕು ಎನ್ನುವುದು ಮೋದಿ ಸರ್ಕಾರದ ನಂಬಿಕೆಯಾಗಿದೆ. ಅದಕ್ಕಾಗಿ ಇಂದ್ರಧನುಷ್‌, ಆಯುಷ್ಮಾನ್‌ ಭಾರತ್‌, ಕಿಸಾನ್‌ ಸಮ್ಮಾನ್‌, ನೇರ ಲಾಭ ವರ್ಗಾವಣೆಯಂತಹ ಯೋಜನೆಗಳನ್ನು ಮೋದಿ ಜಾರಿಗೆ ತಂದಿದ್ದಾರೆ. ಇದರಿಂದ ದೇಶದ ಕೋಟ್ಯಾಂತರ ಮಂದಿ ಬಡವರಿಗೆ ಮತ್ತು ರೈತರಿಗೆ ನೇರ ಲಾಭವಾಗಿದೆ. ಹಿಂದೆಂದೂ ಈ ಯೋಜನೆಗಳಿರಲಿಲ್ಲ. ಈ ಮೂಲಕ ಮೋದಿ ಅವರು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ ಮಾಡುತಿದ್ದಾರೆ.

* ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೇಳುವುದಾದರೆ?

ಉಡುಪಿ ಜಿಲ್ಲೆಗೆ ಹೋಲಿಸಿದರೆ ಚಿಕ್ಕಮಗಳೂರು ಸ್ವಲ್ಪಮಟ್ಟಿಗೆ ಹಿಂದುಳಿದಿದೆ. ಅವೆರಡನ್ನೂ ಸಮಾನವಾಗಿ ವಿಕಾಸಗೊಳಿಸುವುದು ನನ್ನ ಕನಸು. ಅದಕ್ಕಾಗಿ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ ಮಾಡಿ ಚಿಕ್ಕಮಗಳೂರು ಜಿಲ್ಲೆಗೆ ಸರ್ಕಾರಿ ವೈದ್ಯಕಿಯ ಕಾಲೇಜು ಮಂಜೂರು ಮಾಡಿಸಿದ್ದೇನೆ. ಕೊಪ್ಪದಲ್ಲಿ 50 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯೊಂದು ನಿರ್ಮಾಣವಾಗಲಿದೆ. ನನ್ನ ಇನ್ನೊಂದು ಕನಸು, ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ ಪೀಠವನ್ನು ದೇಶದ ಇತರ ಭಾಗಗಳೊಂದಿಗೆ ಜೋಡಿಸುವುದು. ಅಲ್ಲಿಗೆ ದೇಶದ ಇತರೆಡೆಯಿಂದ ಬರುವ ಯಾತ್ರಿಗಳಿಗೆ ಅನುಕೂಲವಾಗುವಂತೆ ರೈಲು ಆರಂಭಿಸುವುದು. ಅದಕ್ಕೆ ಈಗಾಗಲೇ ಕೇಂದ್ರ ರೈಲ್ವೆ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಸಾಕಷ್ಟುಅಡತಡೆಯ ನಡುವೆ ಬೆಂಗಳೂರು-ಕಾರವಾರ ರೈಲು ಮಾರ್ಗ ಮಂಜೂರಾಗಿದೆ. ಶೃಂಗೇರಿ-ಆಡುಗೋಡಿ-ಬಾಳೆಹೊನ್ನೂರು, ಕಡೂರು-ಮೂಡಿಗೆರೆ, ಮಲ್ಪೆ-ತೀರ್ಥಹಳ್ಳಿ, ಪರ್ಕಳ-ಶಿವಪುರ ಇತ್ಯಾದಿ ಹತ್ತಾರು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 119 ಕಿ.ಮೀ. ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 203 ಕಿ.ಮೀ. ರಸ್ತೆಗಳು ಕೇಂದ್ರ ರಸ್ತೆ ನಿಧಿಯಿಂದ ಉನ್ನತೀಕರಣಗೊಳ್ಳುತ್ತಿವೆ.

* ಕೋವೀಡ್‌ ಸೋಂಕು ನಿರ್ವಹಣೆ ತೃಪ್ತಿಕರವಾಗಿದೆಯೇ?

ಬೇರೆ ದೇಶಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ಸಾಕಷ್ಟುಮುಂಜಾಗರೂಕತೆ ವಹಿಸಿದ್ದರಿಂದ ದೇಶದಲ್ಲಿ ಕೊರೋನಾ ಸಂಕಷ್ಟಸಾಕಷ್ಟುನಿಯಂತ್ರಣದಲ್ಲಿದೆ. ಕಫä್ರ್ಯ, ನಿಷೇಧಾಜ್ಞೆ, ಲಾಕ್‌ಡೌನ್‌ ಇತ್ಯಾದಿ ಕ್ರಮಗಳಿಂದ ದೇಶ ಬಹಳ ದೊಡ್ಡ ರೀತಿಯಲ್ಲಿ ಸಂಭವಿಸಬಹುದಾಗಿದ್ದ ಗಂಡಾಂತರದಿಂದ ಪಾರಾಗಿದೆ. ನಮ್ಮ ದೇಶದ ಕೊರೋನಾ ನಿಯಂತ್ರಣದ ಬಗ್ಗೆ ವಿದೇಶಗಳು ಕೂಡ ಅಚ್ಚರಿ ವ್ಯಕ್ತಪಡಿಸಿವೆ.

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳೆರಡೂ ಗ್ರೀನ್‌ ಝೋನ್‌ ನಲ್ಲಿದ್ದವು. ಆದರೆ ಹೊರಗಿನಿಂದ ಬಂದವರಲ್ಲಿ ಕೊರೋನಾ ಸೋಂಕಿದ್ದರಿಂದ ಈಗ ರೆಡ್‌ ಝೋನ್‌ ಆಗಿದೆ. ಆದರೂ ಸಮುದಾಯಕ್ಕೆ ಕೊರೋನಾ ಹರಡಂತೆ ಯಶಸ್ವಿಯಾಗಿ ತಡೆಯಲಾಗಿದೆ.

27 ಬಿಜೆಪಿ ಬಂಡಾಯ ಶಾಸಕರಿಗೆ ಶಾಕ್ ಕೊಟ್ಟ ಅಮಿತ್ ಶಾ..!

ಹೊಟ್ಟೆಪಾಡಿಗಾಗಿ ಹೊರರಾಜ್ಯ-ಹೊರದೇಶಗಳಿಗೆ ದುಡಿಯುವುದಕ್ಕೆ ಹೋದವರು ಕೂಡ ನಮ್ಮವರೇ ಆಗಿರುವುದರಿಂದ ಅವರನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ. ಅವರನ್ನು ಕರೆಸಿಕೊಳ್ಳದಿದ್ದರೆ ಅವರು ಅಲ್ಲಿ ಕೊರೋನಾ ಸಂಕಷ್ಟಕ್ಕೊಳಗಾಗುತ್ತಾರೆ. ಆದ್ದರಿಂದ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ನಾನೇ ಪತ್ರ ಬರೆದು, ಹೊರರಾಜ್ಯ-ದೇಶಗಳಿಂದ ಬರುವವರಿಗೆ ಎಲ್ಲ ವ್ಯವಸ್ಥೆ ಗಳನ್ನು ಮಾಡಿದ್ದೇವೆ. ಬಂದ ತಕ್ಷಣ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ವಾರಂಟೈನ್‌ ಮಾಡಿಸುತ್ತಿವುದರಿಂದ, ಅವರಲ್ಲಿರವ ಕೊರೋನಾ ಸೊಂಕಿತರನ್ನು ಗುರುತಿಸಿ ಯಶಸ್ವಿಯಾಗಿ ಚಿಕಿತ್ಸೆ ನೀಡುವುದು ಸಾಧ್ಯವಾಗಿದೆ.

ದೇಶ ವಿದೇಶಗಳಿಂದ ಇನ್ನೂ ಬರುವರಿದ್ದಾರೆ. ಅಲ್ಲದೆ ಮಳೆಗಾಲದಲ್ಲಿ ಕೊರೋನಾ ಇನ್ನೂ ಹೆಚ್ಚಾಗುತ್ತದೆ ಎನ್ನಲಾಗುತ್ತಿದೆ. ಆದ್ದರಿಂದ ಇದೆಲ್ಲವನ್ನೂ ಎದುರಿಸುವುದಕ್ಕೆ ನನ್ನ ಕ್ಷೇತ್ರದಲ್ಲಿ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡೂ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದಾಗಿ ಯಾರೂ ಉಪವಾಸ ಇರದಂತೆ ನೋಡಲಾಗಿದೆ. ಶಾಸಕರು, ದಾನಿಗಳು ಊಟೋಪಟಾರದ ವ್ಯವಸ್ಥೆ ಮಾಡಿದ್ದಾರೆ. ಚಿಕ್ಕಮಗಳೂರಲ್ಲಿ ಎಸ್ಟೇಟ್‌ ಮಾಲೀಕರೇ ತಮ್ಮ ಕಾರ್ಮಿಕರನ್ನು ನೋಡಿಕೊಂಡಿದ್ದಾರೆ.

* ಕ್ಷೇತ್ರದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಇದೆಯೇ?

ನಮ್ಮ ಮುಂದಿನ ಕನಸು ನನ್ನ ಕ್ಷೇತ್ರದ ಜನರು ಆರೋಗ್ಯಕ್ಕಾಗಿ ವೈದ್ಯರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಬರಬಾರದು. ಅವರ ಊರಿನಲ್ಲಿಯೇ ಅವರಿಗೆ ಬೇಕಾದ ವೈದ್ಯಕೀಯ ಸೇವೆ ಸಿಗುವಂತೆ ಮಾಡುವುದು. ಕೊರೋನಾ ಸಂಕಷ್ಟದ ಸಮಯದಲ್ಲಿ ನನ್ನ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟುಮಂದಿ ವೈದ್ಯರು, ಸಿಬ್ಬಂದಿ ಕೊರತೆ ಕಂಡುಬಂದಿದೆ. ಕೆಲವು ಪ್ರಾ.ಆ.ಕೇಂದ್ರಗಳ ನಿರ್ವಹಣೆಯೂ ಸರಿಯಾಗಿಲ್ಲ. ಆದ್ದರಿಂದ ಕೋವಿಡ್‌ ನಿಧಿಯನ್ನು ಬಳಸಿ ಪ್ರಾ.ಆ. ಕೇಂದ್ರಗಳನ್ನು ಉನ್ನತೀಕರಣಗೊಳಿಸಬೇಕು. ಅವುಗಳಿಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬ ಯೋಚನೆ ಇದೆ.

* ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಏನು ಮಾಡಿದ್ದೀರಿ?

ಉಡುಪಿ-ಚಿಕ್ಕಮಗಳೂರಿನಲ್ಲಿ ರೈತರು, ಕಾಫಿ ಬೆಳೆಗಾರರು, ಕಾಳುಮೆಣಸು ಬೆಳೆಗಾರರು, ಅಡಕೆ ಬೆಳೆಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಕೆಲವು ಸಮಸ್ಯೆಗಳು ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳ ನಡುವೆ, ನ್ಯಾಯಾಲಯದಲ್ಲಿವೆ. ಎರಡೂ ಕಡೆ ನಮ್ಮದೇ ಸರ್ಕಾರ ಇರುವುದರಿಂದ ಸಮನ್ವಯದಿಂದ ಅವುಗಳನ್ನು ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂಬ ಯೋಜನೆಯೂ ಇದೆ.

* ನಿಮ್ಮ ಬಗ್ಗೆ ಕೆಲವು ಅಪಪ್ರಚಾರ ನಡೆಯುತ್ತಿದೆ ಅನ್ನಿಸುತ್ತದೆಯೇ?

ನಮ್ಮ ದೇಶದ ವಿರುದ್ಧ, ಮೋದಿ ಸರ್ಕಾರದ ವಿರುದ್ಧ, ಬಹುಸಂಖ್ಯಾತರ ವಿರುದ್ಧ ಅಪಪ್ರಚಾರ ಮಾಡುವುದನ್ನು ನಾನು ಸಹಿಸುವುದಿಲ್ಲ. ಅದನ್ನು ತಕ್ಷಣ ಖಂಡಿಸುತ್ತೇನೆ. ಅದಕ್ಕಾಗಿ ನನಗೆ ಜೀವ ಬೆದರಿಕೆಗಳೂ ಬರುತ್ತಿವೆ. ಆದರೆ ನಾನು ಅದಕ್ಕೆಲ್ಲ ಜಗ್ಗುವವಳಲ್ಲ.

ನಾನು ನನ್ನ ಜೀವನವನ್ನೇ ದೇಶಕ್ಕೆ ಅರ್ಪಿಸಿದ್ದೇನೆ. ನನಗೆ ಸ್ವಾರ್ಥ ಇಲ್ಲ. ನಾನೇನೂ ಮಕ್ಕಳನ್ನು ಸಾಕಬೇಕಾದ್ದಿಲ್ಲ ಅಥವಾ ಅವರಿಗಾಗಿ ಆಸ್ತಿ ಮಾಡಬೇಕಾದ್ದೂ ಇಲ್ಲ. ನಾನು ಯಾವ ಧರ್ಮದ ವಿರೋಧಿಯೂ ಅಲ್ಲ. ಆದರೆ ಬಹುಸಂಖ್ಯಾತರಿಗೆ ಅನ್ಯಾಯ ಆಗುವುದನ್ನು, ಧರ್ಮ ಆಧಾರದಲ್ಲಿ ಅನ್ಯಾಯ ಮಾಡುವುದನ್ನು ನಾನು ಸಹಿಸುವುದಿಲ್ಲ. ಅದನ್ನು ವಿರೋಧಿಸುತ್ತೇನೆ. ಅದಕ್ಕಾಗಿ ಜೀವ ಬೆದೆರಿಕೆಗಳು ಬರುತ್ತಿವೆ. ಬರಲಿ, ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.