World Yoga Day 2023: ವಿಶ್ವಸಂಸ್ಥೆಯು ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿದೆ. ಭಾರತದಲ್ಲಿಅನಾದಿ ಕಾಲದಿಂದಲೂ ಗ ಪ್ರಚಲಿತದಲ್ಲಿದೆ. ವಿಶ್ವಸಂಸ್ಥೆ ಯೋಗದಿನವನ್ನು ಘೋಷಣೆ ಮಾಡಿದ ಬಳಿಕ ಇದು ಜಾಗತಿಕವಾಗಿ ಮಾರ್ಪಟ್ಟಿದೆ. 

ನವದೆಹಲಿ (ಜೂ.17): ವಿಶ್ವ ಯೋಗ ದಿನಾಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವಸಂಸ್ಥೆಯು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಅದ್ಧೂರಿಯಾಗಿ ಆಚರಿಸಲಿದೆ. ವಿಶ್ವಸಂಸ್ಥೆಯ ಕಟ್ಟಡದಲ್ಲಿ 180 ದೇಶಗಳ ಪ್ರತಿನಿಧಿಗಳು ಈ ಬಾರಿ ಯೋಗ ಮಾಡಲಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಯೋಗ ಮಾಡಲಿದ್ದಾರೆ. ವರದಿಗಳ ಪ್ರಕಾರ, ರಾಜತಾಂತ್ರಿಕರು, ಕಲಾವಿದರು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳು ಸೇರಿದಂತೆ ಜೀವನದ ವಿವಿಧ ಕ್ಷೇತ್ರಗಳ ಪ್ರಮುಖರು ಯುಎನ್‌ನಲ್ಲಿ ಯೋಗ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೂನ್‌ 21 ರಿಂದ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದೇ ದಿನ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಭಾರತದ ಯೋಗ ಅಭ್ಯಾಸವನ್ನು ಜಾಗತಿಕವಾಗಿ ಮನ್ನಣೆ ಗಿಟ್ಟಿಸುವಂತೆ ಮಾಡುವುದು ಪ್ರಧಾನಿ ಮೋದಿ ಅವರ ದೊಡ್ಡ ಕನಸಾಗಿತ್ತು. ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿ ಮತ್ತು ಸಂತೋಷವಾಗಿರಿಸುವುದರೊಂದಿಗೆ ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ ಎಂದು ಪ್ರಧಾನಿ ಶುಕ್ರವಾರ ಹೇಳಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಪ್ರಧಾನಿ ಮೋದಿ ಈ ಮಾತು ಹೇಳಿದ್ದಾರೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 9 ವರ್ಷವಾದ ಹಿನ್ನಲೆಯಲ್ಲಿ ಯೋಗ ದಿನವನ್ನು ದೊಡ್ಡದಾಗಿ ಆಚರಣೆ ಮಾಡಲಿದೆ.ಪಕ್ಷದ ಪದಾಧಿಕಾರಿಗಳು ಕೂಡ ಯೋಗ ದಿನಾಚರಣೆಗೆ ವ್ಯಾಪಕ ಪ್ರಚಾರ ನೀಡುತ್ತಿದ್ದಾರೆ. ಅಲ್ಲದೆ, ಜೂನ್ 21 ರಂದು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಾರತ ಸರ್ಕಾರವು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ. ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಉತ್ತರ ಲಾನ್‌ನಲ್ಲಿ ಬೆಳಗ್ಗೆ 8 ರಿಂದ 9 ರವರೆಗೆ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮೋದಿ ನೇತೃತ್ವ ವಹಿಸಲಿದ್ದಾರೆ.

2014 ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ, ಮೋದಿ ಅವರು ಆ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಕರೆ ನೀಡಿದರು. ಯೋಗವು ಮಾನವೀಯತೆಗೆ ಭಾರತದ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದ್ದರು. ಯೋಗ ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುತ್ತದೆ. ಇದು ಮನುಷ್ಯ ಮತ್ತು ಪ್ರಕೃತಿಯ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವಸಂಸ್ಥೆಯಲ್ಲಿ ನರೇಂದ್ರ ಮೋದಿಯವರ ಮನವಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

ಡಿಸೆಂಬರ್ 2014 ರಲ್ಲಿ ಭಾರತವು ಮಂಡಿಸಿದ ನಿರ್ಣಯವನ್ನು ಜಾಗತಿಕ ವೇದಿಕೆಯಲ್ಲಿ ದಾಖಲೆಯ 175 ಸದಸ್ಯ ರಾಷ್ಟ್ರಗಳು ಅನುಮೋದಿಸಿದ್ದವು. ಈ ನಿರ್ಣಯವು ಉತ್ತಮ ಆರೋಗ್ಯವನ್ನು ಉತ್ತೇಜಿಸುವ ಜೀವನಶೈಲಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಅಂದಿನಿಂದ ಪ್ರಧಾನಿ ಮೋದಿ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳೊಂದಿಗೆ ಯೋಗ ದಿನದಂದು ದೇಶದ ವಿವಿಧ ಭಾಗಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದ ಜೊತೆಗೆ, ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮತ್ತು ಇತರ ದೇಶಗಳಲ್ಲಿ ವಲಸಿಗ ಭಾರತೀಯರು ಮತ್ತು ವಿದೇಶಿಯರಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ.

ನೀವು ಸೋಮಾರಿಯಾಗಿದ್ರೂ ಶವಾಸನ ಮಾಡಿ ಆರೋಗ್ಯ ಸಮಸ್ಯೆ ನಿವಾರಿಸಬಹುದು…

ಅದರೊಂದಿಗೆ ಮೋದಿಯವರ ಅಮೆರಿಕ ಪ್ರವಾಸ ನ್ಯೂಯಾರ್ಕ್ ನಲ್ಲಿ ಆರಂಭವಾಗಲಿದೆ. ಜೂನ್ 21 ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. ಆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಶ್ವೇತಭವನದಲ್ಲಿ ಮೋದಿಗೆ ಆತಿಥ್ಯ ನೀಡಲಿದ್ದಾರೆ. ಮೋದಿ ಅವರು ಅಮೆರಿಕ ಕಾಂಗ್ರೆಸ್‌ನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದಲ್ಲದೇ ವಾಷಿಂಗ್ಟನ್ ನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿರುವ ಕಾರ್ಯಕ್ರಮದಲ್ಲೂ ಪ್ರಧಾನಿ ಭಾಗವಹಿಸಲಿದ್ದಾರೆ.

ಕಚೇರಿಯಲ್ಲೇ ಕೆಲಸದ ನಡುವೆ ಅಲ್ಪಾವಧಿಯ ಯೋಗ ಮಾಡಿ: ಸಿಬ್ಬಂದಿಗೆ ಕೇಂದ್ರ ಸರ್ಕಾರ ಸಲಹೆ