ನವದೆಹಲಿ(ಜು.12): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ಹಾರಾಟ ಆಗಸ್ಟ್‌ನಿಂದ ಆರಂಭವಾಗುವ ಸಾಧ್ಯತೆ ಇದೆ. ನಿಗದಿಯಂತೆ ಜು.15ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭವಾಗಬೇಕಿತ್ತು. ಆದರೆ, ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಇದ್ದ ನಿಷೇಧ ಅವಧಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಜು.31ರವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಹೀಗಾಗಿ ಸೀಮಿತ ಸಾಮರ್ಥ್ಯದೊಂದಿಗೆ ಆಗಸ್ಟ್‌ ಮೊದಲ ವಾರದಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ದ್ವಿಪಕ್ಷೀಯ ಒಪ್ಪಂದದ ಮೇರೆಗೆ ಅಮೆರಿಕ, ಯುರೋಪ್‌ ಮತ್ತು ಗಲ್‌್ಫ ರಾಷ್ಟ್ರಗಳಿಗೆ ವಿಮಾನ ಸೇವೆ ಆರಂಭಿಸುವ ಬಗ್ಗೆಯೂ ಪ್ರಯತ್ನಗಳು ಆರಂಭಗೊಂಡಿವೆ.

ಈ ಕುರಿತು ಸಿಳಿವು ನೀಡಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಅರವಿಂದ್‌ ಸಿಂಗ್‌, ‘ಅಂತಾರಾಷ್ಟ್ರೀಯ ವಿಮಾನಯಾನವನ್ನು ಆರಂಭಿಸುವ ಸಂಬಂಧ ಅಮೆರಿಕ, ಕೆನಡಾ, ಯುರೋಪಿಯನ್‌ ಮತ್ತು ಗಲ್‌್ಫ ರಾಷ್ಟ್ರಗಳ ಜೊತೆ ಭಾರತ ಮಾತುಕತೆ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.