ನವದೆಹಲಿ (ಏ.25):  ಕೊರೋನಾ ವೈರಸ್‌ ವಿರುದ್ಧ ಒಂದೆಡೆ ಭಾರತ ಹೋರಾಡುತ್ತಿದ್ದರೆ, ಪಕ್ಕದ ಪಾಕಿಸ್ತಾನಕ್ಕೆ ಭಯೋತ್ಪಾದನೆಯದ್ದೇ ಚಿಂತೆ. ಪಾಕಿಸ್ತಾನವು ತನ್ನ ಕಳ್ಳಸಾಗಣೆ ಹಾಗೂ ಭೂಗತ ಗುಂಪುಗಳ ಸಹಾಯದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

26/11 ಮುಂಬೈ ದಾಳಿಯ ಮಾದರಿಯಲ್ಲೇ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ, ದೇಶದ ಪಶ್ಚಿಮ ಕರಾವಳಿಯನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇದೆ. ಪಾಕಿಸ್ತಾನದ ಭೂಗತ ಸಂಘಟನೆಗಳು ಅಥವಾ ಸಣ್ಣ ಪುಟ್ಟಸ್ಮಗ್ಲಿಂಗ್‌ ಗುಂಪುಗಳು ಸಿಂಧ್‌ ಪ್ರಾಂತ್ಯದ ಅರಬ್ಬಿ ಸಮುದ್ರದ ತಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಾಳಿ ನಡೆಸಲು ಸಹಾಯ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂಬ ಮಾಹಿತಿ ಲಭಿಸಿದೆ.

ಕೊರೋನಾ ಪೀಡಿತರಿಗೆ ಸೋಂಕುನಾಶಕ ದ್ರವ ಚುಚ್ಚಿ: ಟ್ರಂಪ್ ಭಯಾನಕ ಐಡಿಯಾ!

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಒಂದು ಬಂದರು ಭಾರತದ ಕರಾವಳಿಗೆ ಸಮೀಪವಾಗಿದೆ. ಇಲ್ಲಿಯೇ ಈ ಗುಂಪುಗಳು ಕಳ್ಳಸಾಗಣೆ ಮಾರ್ಗ ಹೊಂದಿವೆ. ಈ ಗುಂಪುಗಳಿಗೆ ಕಳ್ಳಸಾಗಣೆಗೆ ಐಎಸ್‌ಐ ಸಹಕಾರ ನೀಡುತ್ತಿದೆಯಲ್ಲದೇ, ಭಯೋತ್ಪಾದಕ ತರಬೇತಿ ಕೂಡ ನೀಡುತ್ತಿದೆ ಎಂದು ಗೊತ್ತಾಗಿದೆ.

ಇನ್ನೊಂದು ಕಡೆ ಕಾಶ್ಮೀರದಲ್ಲಿ ಕೂಡ ನಿರಂತರ ಉಗ್ರ ಚಟುವಟಿಕೆಗಳನ್ನು ಪಾಕಿಸ್ತಾನ ನಡೆಸುತ್ತಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ ಸೇನೆ, ಉಗ್ರರರನ್ನು ಕಾಶ್ಮೀರದ ಒಳಗೆ ಕಳಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಟ್ವೀಟರ್‌ ಖಾತೆ ಅಮಾನತು:

ಇದೇ ವೇಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ನಕಲಿ ಟ್ವಿಟರ್‌ ಖಾತೆಗಳ ಮೂಲಕ ಗಲ್ಪ್‌ ರಾಷ್ಟ್ರಗಳಲ್ಲಿ ಭಾರತದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಐಎಸ್‌ಐ ಬಳಕೆ ಮಾಡುತ್ತಿದ್ದ ನಕಲಿ ಖಾತೆಯನ್ನು ಟ್ವಿಟರ್‌ ಸಂಸ್ಥೆ ಡಿಲೀಟ್‌ ಮಾಡಿದೆ.