Asianet Suvarna News Asianet Suvarna News

ಮುನ್ನಾಭಾಯ್ ಎಂಬಿಬಿಎಸ್‌ ಪ್ರೇರಣೆ... ನಕಲು ಮಾಡಲು ಹೋಗಿ ಸಿಕ್ಕಿಬಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು

  • ಶಸ್ತ್ರಚಿಕಿತ್ಸೆಯ ಮೂಲಕ ಕಿವಿಒಳಗೆ ಬ್ಲೂಟೂಥ್ ಅಳವಡಿಸಿ ನಕಲಿಗೆ ಯತ್ನ
  • ಇಂದೋರ್‌ನಲ್ಲಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳ ವಿರುದ್ಧ ಕೇಸ್‌
  • ಪರೀಕ್ಷೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಬಳಸಿ ನಕಲಿಗೆ ಯತ್ನ
Inspired by Munnabhai MBBS two Indore Medical Students Caught Cheating they Using surgical Bluetooth for copying akb
Author
Bangalore, First Published Feb 23, 2022, 1:06 PM IST | Last Updated Feb 23, 2022, 1:07 PM IST

ಮುನ್ನಾಭಾಯ್ ಎಂಬಿಬಿಎಸ್‌ ಸಿನಿಮಾದಿಂದ ಪ್ರೇರಣೆಗೊಂಡ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸರ್ಜಿಕಲ್ ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವ ವಿಚಾರದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳು ಎತ್ತಿದ ಕೈ. ನಕಲು ಮಾಡುವ ಸಲುವಾಗಿ ಅವರು ತಮ್ಮ ಮಿದುಳನ್ನು ಬಹಳ ಚಾಣಾಕ್ಷತನದಿಂದ ಬಳಸುತ್ತಾರೆ. ಇದಕ್ಕಾಗಿ ಎಲ್ಲಾ ತಂತ್ರಜ್ಞಾನವನ್ನು ಬಳಸಲು ಸಿದ್ದರಿರುತ್ತಾರೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ ಹೀಗೆ ಮೋಸ ಮಾಡುವವರು ಕೂಡ ಈ ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಸಂಜಯ್‌ ದತ್‌ ಅವರ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ನೋಡಿದ್ದೀರಾ. ಈ ಘಟನೆಯನ್ನು ಕೇಳಿದರೆ ನಿಮಗೆ ಖಂಡಿತ ಆ ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಿಂದ ಪ್ರೇರಣೆಗೊಂಡ ಇಬ್ಬರು ಮೆಡಿಕಲ್‌ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವ ಸಲುವಾಗಿ ತಮ್ಮ ದೇಹದಲ್ಲಿ ಸಣ್ಣದಾದ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ಬ್ಲೂಟೂಥ್‌ ಡಿವೈಸ್‌ನ್ನು ತಮ್ಮ ದೇಹದ ಒಳಗೆ ಅಳವಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ಈ ಘಟನೆ ನಡೆದಿದೆ. ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ತಮ್ಮ ಕಿವಿಯಲ್ಲಿ ಸೂಕ್ಷ್ಮ ಗಾತ್ರದ ಬ್ಲೂಟೂತ್ ಸಾಧನಗಳನ್ನು ಶಸ್ತ್ರಚಿಕಿತ್ಸೆಯಿಂದ ಅಳವಡಿಸಿಕೊಂಡಿದ್ದಾರೆ.

Boman Irani: ಅಂದು ಹೋಟಲ್‌ ಮಾಣಿ ಇಂದು ಫೇಮಸ್‌ ನಟ

ಈ ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ವೈದ್ಯಕೀಯ ಕಾಲೇಜಿನಲ್ಲಿ ( Mahatma Gandhi Memorial (MGM) Medical College) ಎಂಬಿಬಿಎಸ್ ಕೋರ್ಸ್‌ನ ಕೊನೆಯ ವರ್ಷದ ಪರೀಕ್ಷೆ ಬರೆಯುತ್ತಿದ್ದಾಗ ದೇವಿ ಅಹಲ್ಯಾ ವಿಶ್ವವಿದ್ಯಾಲಯದ (ಡಿಎವಿವಿ) ( Devi Ahilya Vishwavidyalaya ) ಫ್ಲೈಯಿಂಗ್ ಸ್ಕ್ವಾಡ್ ಈ ಇಬ್ಬರನ್ನು ಸೆರೆ ಹಿಡಿದಿದೆ. ಈ ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ, ಅರಬಿಂದೋ ವೈದ್ಯಕೀಯ ಕಾಲೇಜು ( Aurobindo Medical College)ಮತ್ತು ಇಂಡಸ್ ವೈದ್ಯಕೀಯ ಕಾಲೇಜಿನ (Indus Medical College) ಒಟ್ಟು 80 ವಿದ್ಯಾರ್ಥಿಗಳು ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆ ಬರೆಯುತ್ತಿದ್ದರು. 

ವಿದ್ಯಾರ್ಥಿಯೊಬ್ಬ ತಮ್ಮ ಶರ್ಟ್ ಒಳಗೆ ಧರಿಸುವ ಬನಿಯನ್‌ನಲ್ಲಿ ಸಿಮ್ ಹೊಂದಿರುವ ಸಣ್ಣ ಸಾಧನವನ್ನು ಮರೆಮಾಡಿದ್ದ. ಅದನ್ನು ಮೊಬೈಲ್ ಫೋನ್‌ನಂತೆ ಬಳಸಲಾಗುತ್ತಿತ್ತು. ಹಾಗೆಯೇ ಮತ್ತೊಬ್ಬ ವಿದ್ಯಾರ್ಥಿ ಸಾಮಾನ್ಯ ಮೊಬೈಲ್‌ನಲ್ಲಿ ಪರೀಕ್ಷೆಯ ಸಮಯದಲ್ಲಿ ಫೋನ್ ಕರೆಗಳನ್ನು ಮಾಡುತ್ತಿದ್ದಿದ್ದು ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದರು. ಯಾರೂ ಗಮನಿಸದ ಅಥವಾ ನೋಡಲು ಸಾಧ್ಯವಾಗದ ರೀತಿಯಲ್ಲಿ ನಕಲು ಮಾಡಲು ಇಬ್ಬರೂ ತಮ್ಮ ಕಿವಿಯಲ್ಲಿ ಬ್ಲೂಟೂತ್ ಚಾಲಿತ ಮೈಕ್ರೊಫೋನ್‌ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಇರಿಸಿದ್ದರು ಎಂದು ಅವರು ಹೇಳಿದರು. 

Hi-tech Cheating: ನಕಲು ಮಾಡಲು ವಿಗ್‌ ಧರಿಸಿ ಬಂದು ತಗಲಾಕೊಂಡ ಯುವಕ

ಡಿಎವಿವಿ ಉಪಕುಲಪತಿ (Vice Chancellor) ರೇಣು ಜೈನ್ (Renu Jain) ಮಾತನಾಡಿ, ಈ ಮೈಕ್ರೊಫೋನ್‌ಗಳನ್ನು ಎರಡೂ ವಿದ್ಯಾರ್ಥಿಗಳ ಕಿವಿಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಗಿದೆ ಎಂದು ನಾವು ಭಾವಿಸುತ್ತೇವೆ. ಇಬ್ಬರೂ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಡಿಎವಿವಿ ಸಮಿತಿಯು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಎಂಜಿಎಂ ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜಯ್ ದೀಕ್ಷಿತ್ (Sanjay Dixit) ಮಾತನಾಡಿ, ಕಾಲೇಜು ಆಡಳಿತ ಮಂಡಳಿಯು ಡಿಎವಿವಿ ಜತೆ ಎಲ್ಲ ಮಾಹಿತಿ ಹಂಚಿಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಪರೀಕ್ಷೆಯಲ್ಲಿ ನಕಲು ಮಾಡಲು ಏನೆಲ್ಲಾ ಐಡಿಯಾ ಬಳಸುತ್ತಾರೆಂಬುದು ನಕಲು ಮಾಡುವವರು ಸಿಕ್ಕಿ ಬಿದ್ದಾಗಲೇ ಗೊತ್ತಾಗುವುದು.  ನಕಲು ಮಾಡಲು ಇವರಿಗೆ ಹೊಳೆಯುವ ಐಡಿಯಾವನ್ನು ಇವರು ಓದುವಾಗಲೂ ಬಳಸಿದ್ದರೆ ಹೀಗೆ ನಕಲು ಮಾಡಿ ಸಿಕ್ಕಿ ಬೀಳುವ ಸಂದರ್ಭ ಬರುತ್ತಿರಲಿಲ್ಲವೇನೋ

Latest Videos
Follow Us:
Download App:
  • android
  • ios