Asianet Suvarna News Asianet Suvarna News

ಶತ್ರು ವಿನಾಶಕ: ಭಾರತೀಯ ನೌಕಾಪಡೆಯ ಸಾಮರ್ಥ್ಯ ವರ್ಧಿಸಲಿದೆ ಐಎನ್ಎಸ್ ಅರಿಘಾತ್

ಭಾರತೀಯ ನಿರ್ಮಾಣದ, ಪರಮಾಣು ಚಾಲಿತ ಜಲಾಂತರ್ಗಾಮಿಗಳ ವರ್ಗವಾದ ಅರಿಹಂತ್ ವರ್ಗದಲ್ಲಿ ಐಎನ್ಎಸ್ ಅರಿಘಾತ್ ಎರಡನೇ ಜಲಾಂತರ್ಗಾಮಿ ನೌಕೆಯಾಗಿದೆ. ಈ ಜಲಾಂತರ್ಗಾಮಿ ನೌಕೆ 2009ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿರುವ ಐಎನ್ಎಸ್ ಅರಿಹಂತ್ ಜೊತೆ ಸೇರಲಿದೆ. ಭಾರತೀಯ ನೌಕಾಪಡೆ ಈಗಾಗಲೇ ಈ ಜಲಾಂತರ್ಗಾಮಿಗಳಿಂದ ದೂರ ವ್ಯಾಪ್ತಿಯ ಪರಮಾಣು ಕ್ಷಿಪಣಿಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ಶೀಘ್ರವಾಗಿ ಮೂರನೇ ಜಲಾಂತರ್ಗಾಮಿ ನೌಕೆಯನ್ನೂ ಸೇರ್ಪಡೆಗೊಳಿಸಲು ಉದ್ದೇಶಿಸಿದೆ. 

INS Arighat will enhance the capabilities of the Indian Navy grg
Author
First Published Aug 29, 2024, 7:04 PM IST | Last Updated Aug 29, 2024, 7:04 PM IST

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಬೆಂಗಳೂರು(ಆ.29):  ಭಾರತೀಯ ನೌಕಾಪಡೆಯ ಎರಡನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯಾಗಿರುವ (ಎಸ್ಎಸ್‌ಬಿಎನ್) ಐಎನ್ಎಸ್ ಅರಿಘಾತ್ ಅಥವಾ ಎಸ್3, ಆಗಸ್ಟ್ 29, ಗುರುವಾರದಂದು ನೌಕಾಪಡೆಗೆ ಅಧಿಕೃತವಾಗಿ ನಿಯೋಜನೆಗೊಂಡಿತು. ಮೂಲಗಳ ಪ್ರಕಾರ, ಸಮಾರಂಭದಲ್ಲಿ ಉನ್ನತ ರಕ್ಷಣಾ ಅಧಿಕಾರಿಗಳು, ರಾಷ್ಟ್ರೀಯ ಭದ್ರತಾ ಮತ್ತು ಮಿಲಿಟರಿ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಭಾರತೀಯ ನಿರ್ಮಾಣದ, ಪರಮಾಣು ಚಾಲಿತ ಜಲಾಂತರ್ಗಾಮಿಗಳ ವರ್ಗವಾದ ಅರಿಹಂತ್ ವರ್ಗದಲ್ಲಿ ಐಎನ್ಎಸ್ ಅರಿಘಾತ್ ಎರಡನೇ ಜಲಾಂತರ್ಗಾಮಿ ನೌಕೆಯಾಗಿದೆ. ಈ ಜಲಾಂತರ್ಗಾಮಿ ನೌಕೆ 2009ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿರುವ ಐಎನ್ಎಸ್ ಅರಿಹಂತ್ ಜೊತೆ ಸೇರಲಿದೆ. ಭಾರತೀಯ ನೌಕಾಪಡೆ ಈಗಾಗಲೇ ಈ ಜಲಾಂತರ್ಗಾಮಿಗಳಿಂದ ದೂರ ವ್ಯಾಪ್ತಿಯ ಪರಮಾಣು ಕ್ಷಿಪಣಿಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದು, ಶೀಘ್ರವಾಗಿ ಮೂರನೇ ಜಲಾಂತರ್ಗಾಮಿ ನೌಕೆಯನ್ನೂ ಸೇರ್ಪಡೆಗೊಳಿಸಲು ಉದ್ದೇಶಿಸಿದೆ. 2035-36ರ ವೇಳೆಗೆ ಇನ್ನೆರಡು ಸ್ವದೇಶಿ ನಿರ್ಮಿತ ಜಲಾಂತರ್ಗಾಮಿಗಳನ್ನು ಸೇರಿಸಲು ನೌಕಾಪಡೆ ಯೋಜನೆ ರೂಪಿಸಿದೆ.
ಅರಿಹಂತ್ ವರ್ಗಕ್ಕೆ ಸಂಸ್ಕೃತ ಭಾಷೆಯಲ್ಲಿ 'ಅರಿಹಂತ್' ಎಂದು ಹೆಸರಿಡಲಾಗಿದ್ದು, 'ಶತ್ರುಗಳ ವಿನಾಶಕ' ಎಂಬ ಅರ್ಥವನ್ನು ಹೊಂದಿದೆ. ಈ ಹೆಸರು ಪರಮಾಣು ಚಾಲಿತ ನೌಕೆಗಳು ಭಾರತದ ಕಾರ್ಯತಂತ್ರಕ್ಕೆ ಎಷ್ಟು ಮಹತ್ತರವಾದದ್ದು ಎಂಬುದನ್ನೂ ಸೂಚಿಸುತ್ತದೆ.

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ

ಈ ವರ್ಗಕ್ಕೆ ಹೆಸರಿಡುವ ಸಂದರ್ಭದಲ್ಲಿ ಲಭ್ಯವಿದ್ದ ಹಲವಾರು ಆಯ್ಕೆಗಳ ಪೈಕಿ ಅರಿಹಂತ್ ಅನ್ನೇ ಎಲ್ಲ ಹಂತಗಳಲ್ಲೂ ಆರಿಸಲಾಯಿತು. ಅರಿಹಂತ್ ಎಂಬ ಹೆಸರು ಭಾರತದ ಬದ್ಧತೆಯನ್ನು ಸೂಕ್ತವಾಗಿ ಮತ್ತು ನಿಸ್ಸಂಶಯವಾಗಿ ಪ್ರತಿನಿಧಿಸುತ್ತದೆ ಎಂದು ಅಭಿಪ್ರಾಯ ಪಡಲಾಗಿತ್ತು.

ಭಾರತ ಸರ್ಕಾರ ದೇಶದ ನೌಕಾ ಸೇನೆಯ ಸಾಮರ್ಥ್ಯವನ್ನು ಸಮರ್ಥವಾಗಿ ವೃದ್ಧಿಸುವ ಸಲುವಾಗಿ ಪರಮಾಣು ಚಾಲಿತ ಮತ್ತು ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ದೀರ್ಘಾವಧಿಯ ಯೋಜನೆ ಹಾಕಿಕೊಂಡಿದೆ. ಭಾರತ ಐದು ಅರಿಹಂತ್ ವರ್ಗದ ಜಲಾಂತರ್ಗಾಮಿ ನೌಕೆಗಳು, ಆರು ಪರಮಾಣು ದಾಳಿ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಗುರಿ ಹಾಕಿಕೊಂಡಿದ್ದು, ಅದನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ವರದಿಗಳ ಪ್ರಕಾರ, ಭಾರತೀಯ ನೌಕಾ ಸೇನೆಯ ಬಳಿ ಪ್ರಸ್ತುತ ಆರು ಕಲ್ವರಿ ವರ್ಗದ ಸಾಂಪ್ರದಾಯಿಕ ಜಲಾಂತರ್ಗಾಮಿಗಳಿದ್ದು, ಭಾರತ ಪ್ರಾಜೆಕ್ಟ್ - 75 ಇಂಡಿಯಾ, ಪ್ರಾಜೆಕ್ಟ್ - 76 ಮತ್ತು ಪ್ರಾಜೆಕ್ಟ್ - 76 ಎಸ್ ಅಡಿಯಲ್ಲಿ ಇನ್ನೂ 15 ಜಲಾಂತರ್ಗಾಮಿಗಳನ್ನು ನಿರ್ಮಿಸಲು ಉದ್ದೇಶಿಸಿದೆ.

ಇನ್ನೊಂದು ವರದಿಯ ಪ್ರಕಾರ, 6,000 ಟನ್ ತೂಕದ ಐಎನ್ಎಸ್ ಅರಿಘಾತ್ ಜಲಾಂತರ್ಗಾಮಿ ನೌಕೆ 750 ಕಿಲೋಮೀಟರ್ ವ್ಯಾಪ್ತಿಯ ಕೆ-15 ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಳವಡಿಸಿಕೊಂಡು, ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ದೀರ್ಘವ್ಯಾಪ್ತಿಯ ಗಸ್ತು ನಡೆಸಲಿದೆ. ಭಾರತದ ಮೂರನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯಾದ ಐಎನ್ಎಸ್ ಅಂಡಮಾನ್ (ಎಸ್4 ಎಂಬ ಹೆಸರೂ ಇದೆ) ಮುಂದಿನ ವರ್ಷ ನೌಕಾಪಡೆಗೆ ನಿಯೋಜನೆಗೊಳ್ಳುವ ನಿರೀಕ್ಷೆಗಳಿವೆ. ಅದಾದ ಕೆಲ ಸಮಯದಲ್ಲೇ ನಾಲ್ಕನೇ ಜಲಾಂತರ್ಗಾಮಿ ನೌಕೆಯೂ (ಎಸ್4* ಎಂಬ ಕೋಡ್ ಹೆಸರು) ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ ಎಂದು ಅನಾಮಧೇಯ ಮೂಲಗಳು ಮಾಹಿತಿ ನೀಡಿವೆ.
ಐಎನ್ಎಸ್ ಅರಿಘಾತ್ 111.6 ಮೀಟರ್‌ಗಳಷ್ಟು ಉದ್ದವಿದ್ದು, 11 ಮೀಟರ್‌ಗಳ ಬೀಮ್ ಮತ್ತು 9.5 ಮೀಟರ್‌ಗಳ ಡ್ರಾಟ್ ಹೊಂದಿದೆ. ಇದನ್ನು ಅಮೆರಿಕಾದ ಎಚ್‌ವೈ - 80 ಉಕ್ಕಿನ ಗುಣಮಟ್ಟಕ್ಕೆ ಹೋಲಿಸಬಹುದಾದ, ರಷ್ಯನ್ ಉಕ್ಕನ್ನು ಬಳಸಿ ನಿರ್ಮಿಸಲಾಗಿದೆ. ಐಎನ್ಎಸ್ ಅರಿಹಂತ್ ಏಳು ವಿಭಾಗಗಳನ್ನು ಹೊಂದಿದ್ದು, ಮುಖ್ಯ ವಿಭಾಗ ಪ್ರೊಪಲ್ಷನ್ ವ್ಯವಸ್ಥೆ, ಯುದ್ಧ ನಿರ್ವಹಣಾ ವ್ಯವಸ್ಥೆ ಮತ್ತು ಪ್ಲಾಟ್‌ಫಾರಂ ನಿರ್ವಹಣಾ ಕೇಂದ್ರ ಮತ್ತು ಟಾರ್ಪೆಡೋ ಕೊಠಡಿಗಳನ್ನು ಹೊಂದಿದೆ.

ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಸ್ಥಾನವನ್ನು ಗಮನಿಸಿದರೆ, ಭಾರತದ ಎರಡು ಎಸ್ಎಸ್‌ಬಿಎನ್‌ಗಳು (ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಗಳು) ಮಹತ್ತರ ಕಾರ್ಯತಂತ್ರದ ಮೇಲುಗೈ ಒದಗಿಸಿ, ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯ ಬೀರಲು ಪ್ರಯತ್ನಿಸುವ ಯಾವುದೇ ಶತ್ರು ನೌಕಾಪಡೆಗಳ ವಿರುದ್ಧ ರಕ್ಷಣೆ ಒದಗಿಸಬಲ್ಲವು. ಐಎನ್ಎಸ್ ವರ್ಗದ ಎರಡೂ ಜಲಾಂತರ್ಗಾಮಿ ನೌಕೆಗಳಲ್ಲಿ ದೇಶೀಯವಾಗಿ ನಿರ್ಮಿಸಿರುವ ಪರಮಾಣು ರಿಯಾಕ್ಟರ್‌ಗಳು ಮತ್ತು ಕ್ಷಿಪಣಿಗಳನ್ನು ಅಳವಡಿಸಲಾಗಿದೆ.

ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್‌ಗಳು ಶಕ್ತಿಶಾಲಿಯಾದ 83 ಮೆಗಾವ್ಯಾಟ್ ಪ್ರೆಶರೈಸ್ಡ್ ಲೈಟ್ ವಾಟರ್ ರಿಯಾಕ್ಟರ್‌ಗಳಿಂದ ಶಕ್ತಿ ಪಡೆಯುತ್ತವೆ. ಈ ಜಲಾಂತರ್ಗಾಮಿಗಳ ತಳಹದಿಯಲ್ಲಿ ಅಳವಡಿಸಲಾಗಿರುವ ಪರಮಾಣು ರಿಯಾಕ್ಟರ್‌ಗಳ ಕಾರಣದಿಂದ, ಈ ಜಲಾಂತರ್ಗಾಮಿ ನೌಕೆಗಳು ತಿಂಗಳುಗಳ ಕಾಲ ಮೇಲೆ ಬರದೆ ನೀರಿನಾಳದಲ್ಲೇ ಉಳಿಯಬಹುದು. ಆದರೆ, ಸಾಂಪ್ರದಾಯಿಕ ಜಲಾಂತರ್ಗಾಮಿಗಳು ಈ ಸಾಮರ್ಥ್ಯ ಹೊಂದಿಲ್ಲ. ಅವುಗಳು ನಿರ್ದಿಷ್ಟ ಕಾಲಾವಧಿಯ ಬಳಿಕ ತಮ್ಮ ಬ್ಯಾಟರಿಗಳನ್ನು ಆಮ್ಲಜನಕದಿಂದ ಮರುಪೂರಣ ನಡೆಸಲು ಕೆಲವು ದಿನಗಳಿಗೊಮ್ಮೆ ನೀರಿನ ಮೇಲ್ಮೈಗೆ ಬರಬೇಕಾಗುತ್ತದೆ, ಅಥವಾ ಸ್ನಾರ್ಕೆಲ್ ಎಂದು ಕರೆಯುವ ಕೊಳವೆಗಳನ್ನು ಬಳಸಬೇಕಾಗುತ್ತದೆ. ಹೊಸ ಜಲಾಂತರ್ಗಾಮಿ ನೌಕೆ ಗಾತ್ರ, ಉದ್ದ, ಮತ್ತು ತೂಕದಲ್ಲಿ ಐಎನ್ಎಸ್ ಅರಿಹಂತ್ ನೌಕೆಯನ್ನೇ ಹೋಲುತ್ತದಾದರೂ, ಇದು ಹೆಚ್ಚು ಕೆ-15 ಕ್ಷಿಪಣಿಗಳನ್ನು ಒಯ್ಯಬಲ್ಲದು. ಬಲ್ಲ ಮೂಲಗಳ ಪ್ರಕಾರ, ಐಎಸ್ಎಸ್ ಅರಿಘಾತ್ ಹೆಚ್ಚಿನ ಸಾಮರ್ಥ್ಯ, ದಕ್ಷತೆ ಮತ್ತು ಇನ್ನಷ್ಟು ಉತ್ತಮ ಸ್ಟೆಲ್ತ್ ಸಾಮರ್ಥ್ಯ ಹೊಂದಿದೆ.

ಬಂಗಾಳ ಕೊಲ್ಲಿಯಲ್ಲಿ ತಳಮಳ: ಸೈಂಟ್ ಮಾರ್ಟಿನ್ಸ್ ದ್ವೀಪ ಮತ್ತು ಶೇಖ್ ಹಸೀನಾ ಪದಚ್ಯುತಿ ನಡುವೆ ಒಳಸಂಚು?

ಎಸ್-4* ಎಸ್ಎಸ್‌ಬಿಎನ್ ನೌಕಾ ಸೇನೆಗೆ ನಿಯೋಜನೆ ಹೊಂದಿದ ಬಳಿಕ, ಭಾರತ ಹೊಸ ವರ್ಗದ, ಇನ್ನಷ್ಟು ದೊಡ್ಡದಾದ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ಹೊಸ ವರ್ಗದ ಜಲಾಂತರ್ಗಾಮಿ ನೌಕೆಗಳು 3,000 ಕಿಲೋಮೀಟರ್ ವ್ಯಾಪ್ತಿಯ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದ್ದು, ಹೆಚ್ಚುವರಿ ಕ್ಷಿಪಣಿ ಟ್ಯೂಬ್‌ಗಳನ್ನು ಒಳಗೊಳ್ಳಲಿವೆ.

ಭಾರತದ ಬಳಿ ಈಗಾಗಲೇ ಅಗ್ನಿ ಸರಣಿಯಂತಹ ಭೂ ಆಧಾರಿತ ಪರಮಾಣು ಕ್ಷಿಪಣಿಗಳಿದ್ದು, ಆಕಾಶದಿಂದಲೂ ಪರಮಾಣು ಕ್ಷಿಪಣಿಗಳನ್ನು ಉಡಾವಣೆಗೊಳಿಸುವ ಸಾಮರ್ಥ್ಯವನ್ನೂ ಭಾರತ ಗಳಿಸಿದೆ. ಈಗ ಎಸ್ಎಸ್‌ಬಿಎನ್ ಗಳು ಭಾರತದ ಪರಮಾಣು ಸಾಮರ್ಥ್ಯದ ಅತ್ಯಂತ ಶಕ್ತಿಶಾಲಿ ಅಂಗವಾಗಿ ಹೊರಹೊಮ್ಮಿವೆ.

Latest Videos
Follow Us:
Download App:
  • android
  • ios