ಶ್ರೀನಗರ(ಜು.19): ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ವಾರ್ಷಿಕ ಈ ಪವಿತ್ರ ಯಾತ್ರಿಕರ ಮೇಲೆ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಯೋಜಿಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಹೀಗಾಗಿ, ಜು.21ರಂದು ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾತ್ರೆ ಆರಂಭಕ್ಕೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಹೀಗಾಗಿ, ಉಗ್ರರ ಟಾರ್ಗೆಟ್‌ ಅಮರನಾಥ ಯಾತ್ರೆಯೇ ಆಗಿರಬಹುದು ಎನ್ನಲಾಗಿದೆ.

ಅಮರನಾಥ ಯಾತ್ರೆ ದಿನಾಂಕ ಪ್ರಕಟ: ಈ ಬಾರಿ ಕೊರೋನಾದಿಂದ ಭಕ್ತರಿಗೆ ಕೊಂಚ ನಿರಾಸೆ!

2017ರಲ್ಲಿ ಅಮರನಾಥ ಯಾತ್ರೆ ಮೇಲೆ ದಾಳಿ ನಡೆಸಿದ್ದ ಉಗ್ರರು 8 ಮಂದಿಯನ್ನು ಬಲಿಪಡೆದಿದ್ದರು. ಈ ದಾಳಿ ವೇಳೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾಗ್ಯೂ, 50ಕ್ಕೂ ಹೆಚ್ಚು ಪ್ರಯಾಣಿಕರ ಹೊತ್ತಿದ್ದ ಬಸ್ಸನ್ನು ಚಾಲಕ ಸಲೀಂ ಮಿರ್ಜಾ ಎಂಬುವರು ಬಸ್ಸನ್ನು ನಿಲ್ಲಿಸದೆ 1 ಕಿ.ಮೀ ದೂರದವರೆಗೆ ಚಾಲನೆ ಮಾಡಿದ್ದರು. ಈ ಮೂಲಕ 50 ಯಾತ್ರಿಕರ ಜೀವಗಳು ಚಾಲಕನ ಸಮಯ ಪ್ರಜ್ಞೆಯಿಂದ ಬಚಾವಾಗಿತ್ತು.