ಬಿಹಾರದಲ್ಲಿ ಗ್ರಾಮಸ್ಥರು ದಂಪತಿಗೆ ಅಮಾನುಷ ಶಿಕ್ಷೆ ನೀಡಿದ್ದಾರೆ. ಮಹಿಳೆಯನ್ನು ಅರೆನಗ್ನಗೊಳಿಸಿ ಮೆರವಣಿಗೆ ಮಾಡಿದ ಘಟನೆ ವರದಿಯಾಗಿದೆ.

ಪಾಟನಾ: ಬಿಹಾರದ ಜುಮೈನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಇಡೀ ಊರಿನ ಮುಂದೆಯೇ ಗಂಡ-ಹೆಂಡತಿಯ ಬಟ್ಟೆ ಬಿಚ್ಚಲಾಗಿದೆ. ದಂಪತಿಯನ್ನು ಅರೆನಗ್ನಗೊಳಿಸಿ ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ. ದಂಪತಿಯ ಮುಖಕ್ಕೆ ಕಪ್ಪು ಮಸಿ ಬಳೆದು ಕೊರಳಿಗೆ ಬೂಟು-ಚಪ್ಪಲಿ ಹಾರ ಹಾಕಿ ಮತ್ತು ಕೂದಲನ್ನು ಸಹ ಕತ್ತರಿಸಲಾಗಿತ್ತು. ಇಂತಹವರಿಂದ ಸಮಾಜ ಹಾಳಾಗುತ್ತಿದ್ದು, ಇವರಿಗೆ ಇದೇ ಸರಿಯಾದ ಶಿಕ್ಷೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು 12 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಈ ಘಟನೆ ಝಾಝಾ ಕ್ಷೇತ್ರದ ತಾರಾಕುರಾ ಎಂಬ ಗ್ರಾಮದಲ್ಲಿ ನಡೆದಿದೆ. ವಿವಾಹಿತ ಮಹಿಳೆ ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಮೂರು ಮಕ್ಕಳನ್ನು ಬಿಟ್ಟು ಆತನ ಜೊತೆ ಐದು ದಿನಗಳ ಹಿಂದೆ ಓಡಿ ಹೋಗಿದ್ದಳು. ಐದು ದಿನದ ನಂತರ ಮಹಿಳೆ ಹಿಂದಿರುಗಿ ಬಂದಾಗ ಗ್ರಾಮದಲ್ಲಿ ಪಂಚಾಯ್ತಿ ನಡೆಸಿ ಈ ಶಿಕ್ಷೆ ನೀಡಲಾಗಿದೆ. ಮೊದಲು ಗ್ರಾಮಸ್ಥರು ಮನೆಯಲ್ಲಿದ್ದ ಗಂಡ-ಹೆಂಡತಿಯನ್ನು ಹೊರಗೆ ಎಳೆದುಕೊಂಡು ಬಂದು ಕೂದಲು ಕತ್ತರಿಸಿದ್ದಾರೆ. ನಂತರ ಇಬ್ಬರನ್ನು ಅರೆನಗ್ನಗೊಳಿಸಲಾಗಿದೆ. ಆ ಬಳಿಕ ಮುಖಕ್ಕೆ ಕಪ್ಪು ಮಸಿ ಬಳೆದು, ಬೂಟು-ಚಪ್ಪಲಿ ಹಾರ ಕೊರಳಿಗೆ ಹಾಕಿ ಊರು ತುಂಬೆಲ್ಲಾ ಮೆರವಣಿಗೆ ಮಾಡಿದ್ದಾರೆ. ಗ್ರಾಮದ ಕೆಲ ಯುವಕರು ಈ ಎಲ್ಲಾ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಪೊಲೀಸರು 12 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದು, ಅಕ್ಕಪಕ್ಕದ ಜಿಲ್ಲೆಯಲ್ಲಿ ಆಶ್ರಯಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಬಂಧನಕ್ಕೆ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಎಲ್ಲರನ್ನೂ ಅರೆಸ್ಟ್ ಮಾಡಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿ ಸಂಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.