Asianet Suvarna News Asianet Suvarna News

ಇಂದು ದೇಶದ ಸಂವಿಧಾನ ಜಾರಿಗೆ ಬಂದ ದಿನ: ಘನತೆಯತ್ತ ಸಾಗುತ್ತಿದೆ ಭಾರತದ ಗಣತಂತ್ರ

ಭಾರತ ಇಂದು ಜಗತ್ತಿನ 5ನೇ ಪ್ರಬಲ ಆರ್ಥಿಕ ಶಕ್ತಿಯಾಗಿದೆ. ಹಾಲು, ಸಕ್ಕರೆ, ಧಾನ್ಯ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಹಲವಾರು ಪ್ರಥಮಗಳನ್ನು ಸಾಧಿಸಿದೆ. ನೆರೆಯ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಆದರೆ ಭಾರತ ತನ್ನ ಶೇ.80ರಷ್ಟು ಜನರಿಗೆ ಉಚಿತ ಆಹಾರಧಾನ್ಯ ಹಂಚುವಷ್ಟು ಸಮೃದ್ಧವಾಗಿದೆ

Indias Republic is Moving Towards Dignity grg
Author
First Published Jan 26, 2023, 7:39 AM IST

ಭಾರತ ಇಂದು ಜಗತ್ತಿನ 5ನೇ ಪ್ರಬಲ ಆರ್ಥಿಕ ಶಕ್ತಿಯಾಗಿದೆ. ಹಾಲು, ಸಕ್ಕರೆ, ಧಾನ್ಯ, ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಹಲವಾರು ಪ್ರಥಮಗಳನ್ನು ಸಾಧಿಸಿದೆ. ನೆರೆಯ ದೇಶಗಳಲ್ಲಿ ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಆದರೆ ಭಾರತ ತನ್ನ ಶೇ.80ರಷ್ಟು ಜನರಿಗೆ ಉಚಿತ ಆಹಾರಧಾನ್ಯ ಹಂಚುವಷ್ಟು ಸಮೃದ್ಧವಾಗಿದೆ. ವ್ಯಾಪಾರ, ವ್ಯವಹಾರ, ವೈದ್ಯಕೀಯ ಮತ್ತು ರಾಜತಾಂತ್ರಿಕತೆ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ವಿಷಯದಲ್ಲೂ ಭಾರತವನ್ನು ಕಡೆಗಣಿಸಲಾಗದ ಸ್ಥಿತಿ ಜಾಗತಿಕ ವಲಯದಲ್ಲಿ ನಿರ್ಮಾಣವಾಗಿದೆ. ಭಯೋತ್ಪಾದನೆ, ದೇಶದ್ರೋಹ, ನಕ್ಸಲ್‌ವಾದಗಳ ಮಗ್ಗಲು ಮುರಿದಿದೆ. ಪ್ರಬಲ ರಕ್ಷಣಾ ವ್ಯವಸ್ಥೆಯ ವ್ಯೂಹ ದೇಶವನ್ನು ಆಂತರಿಕ ಮತ್ತು ಬಾಹ್ಯ ವೈರಿಗಳಿಂದ ಸುರಕ್ಷಿತವಾಗಿಸಿದೆ. ಇಡೀ ಜಗತ್ತಿಗೆ ಆರ್ಥಿಕ ಕುಸಿತ ಉಂಟಾದರೂ ಭಾರತ ನಲುಗದಂತೆ ನಿಂತಿದೆ. ಕೊರೊನಾದಂತಹ ಹೆಮ್ಮಾರಿಯನ್ನು ಕಟ್ಟಿಹಾಕುವ ಔಷಧಿ ಕಂಡು ಹಿಡಿದಿದೆ. ಅಭಿವೃದ್ಧಿಯ ಹೊಸ ಪರ್ವವೇ ಆರಂಭವಾಗಿದೆ. ಹೀಗಾಗಿ ಜಗತ್ತು ಇಂದು ಭಾರತದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.

ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ಪ್ರಬಲ ರಾಷ್ಟ್ರವಾಗಲಿದೆ. ಅದಕ್ಕೆಲ್ಲ ಕಾರಣ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ವಿದೇಶಾಂಗ ನೀತಿ, ಅಭಿವೃದ್ಧಿ ಯೋಜನೆಗಳು ಮತ್ತು ಸರ್ವೋತ್ತಮ ನಾಯಕತ್ವ. ಸಂವಿಧಾನ ನಿರ್ಮಾಪಕರ ಉದ್ದೇಶ ಈ ದೇಶ ಸಹಕಾರಿ ತತ್ವದ ಮೇಲೆ ರಚನೆಯಾದ ಸಶಕ್ತ ಒಕ್ಕೂಟ ವ್ಯವಸ್ಥೆಯಾಗಬೇಕು. ಪಕ್ಷ ರಾಜಕಾರಣದ ಭಿನ್ನ ಹಿತಾಸಕ್ತಿಯ ಕಾರಣಕ್ಕೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಡೋಮಿನಿಯನ್‌ ರೀತಿಯಲ್ಲಿ ವರ್ತಿಸಬಾರದು ಎಂಬುದಾಗಿತ್ತು. ಅಭಿವ್ಯಕ್ತಿ ಹೆಸರಿನಲ್ಲಿ ಸ್ಯೂಡೋ ಸೆಕ್ಯೂಲರ್‌ಗಳು, ಭಯೋತ್ಪಾದಕರು ಹಾಗೂ ಅಭಿವೃದ್ಧಿವಿರೋಧಿ ಮನಸ್ಥಿತಿಯ ಕೆಲ ಮಾಧ್ಯಮಗಳು ದೇಶದ ಅಖಂಡತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಲೇ ಇದ್ದರೂ ಕಠಿಣ ಕಾನೂನು ವ್ಯವಸ್ಥೆ ಮತ್ತು ಸಶಕ್ತ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತಿವೆ.

ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ!

ಸಂವಿಧಾನ ಬದಲಾಗಲೇಬಾರದೆ?

ಸಂವಿಧಾನ ಎಂಬುದು ಗುರಿಯನ್ನು ತಲುಪುವ ಒಂದು ವಿಧಾನ ಮಾತ್ರ. ಆದರೆ ಸಂವಿಧಾನವೇ ಗುರಿಯಲ್ಲ ಎಂದು ಸಂವಿಧಾನ ಕಾರ್ಯವಿಧಾನ ಪುನರವಲೋಕನ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅವರು ಹೇಳಿದ ಮಾತು ಸಂವಿಧಾನ ಏತಕ್ಕಾಗಿ ರಚನೆಗೊಂಡಿದೆ ಮತ್ತು ಅದನ್ನು ಹೇಗೆ ಅನುಸರಿಸಬೇಕು ಎಂಬ ಆಲೋಚನೆಯನ್ನು ಹುಟ್ಟುಹಾಕುತ್ತದೆ. ಸಂವಿಧಾನ ಉಲ್ಲಂಘನೆಯಾಗುತ್ತಿದೆ, ಸಂವಿಧಾನವನ್ನು ರಕ್ಷಿಸಬೇಕು ಎಂಬ ಹುಯಿಲನ್ನು ಕೆಲವರು ಎಬ್ಬಿಸುತ್ತಿದ್ದಾರೆ. ಆದರೆ ಸಂವಿಧಾನ ಯಾವ ರೀತಿ ಉಲ್ಲಂಘನೆಯಾಗುತ್ತಿದೆ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.

ಪ್ರಜಾಪ್ರಭುತ್ವದಲ್ಲಿ ಸಂಸತ್ತೇ ಪಾರಮ್ಯವಾದದ್ದು. ಪ್ರಜಾಹಿತಕ್ಕಾಗಿ ಅನುಕೂಲಕರ ಕಾನೂನು ರಚನೆ, ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆ. ಕಾಲಕ್ಕೆ ತಕ್ಕಂತೆ ಹೊಂದಿಕೆಯಾಗದ ಜಗತ್ತಿನ ಹಲವಾರು ಕಾನೂನು, ಸಂವಿಧಾನಗಳು ಬದಲಾವಣೆಯಾಗಿವೆ. ಶಿಕಾಗೋ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ 1789ರಿಂದ 2006ರಲ್ಲಿ ರಚನೆಯಾದ 792 ಸಂವಿಧಾನಗಳಲ್ಲಿ 518 ಸಂವಿಧಾನಗಳು ಬದಲಾವಣೆಗೊಂಡಿವೆ. 82 ಸಂವಿಧಾನಗಳು ತೆಗೆದುಹಾಕಲ್ಪಟ್ಟಿವೆ. ಕೇವಲ 17 ವರ್ಷಗಳಲ್ಲಿ ಈ ಸಂವಿಧಾನಗಳು ಬದಲಾಗಿವೆ. ತಿದ್ದುಪಡಿಗೆ ಒಗ್ಗಿಕೊಂಡ 192 ಸಂವಿಧಾನಗಳು ಅಸ್ತಿತ್ವದಲ್ಲಿ ಉಳಿದುಕೊಂಡಿವೆ. ಈ ಅಧ್ಯಯನ ಸಾಬೀತುಪಡಿಸಿದ್ದೇನೆಂದರೆ; ಸಂವಿಧಾನಗಳು ಪ್ರಜಾಹಿತದ ಪಠ್ಯ ಪುಸ್ತಕಗಳು. ಪಠ್ಯ ಮತ್ತು ಪಾಠ ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ ಎಂಬುದು.

ಅಲ್ಪಸಂಖ್ಯಾತ ವ್ಯಾಖ್ಯಾನ ಪರಿಷ್ಕರಣೆ

ಭಾರತ ಸಂವಿಧಾನದ ಒಟ್ಟು 395 ಕಲಮುಗಳಲ್ಲಿ 250 ಕಲಮುಗಳು ಬಾಲ್ಡವಿನ್‌ ಕ್ಯಾಬಿನೆಟ್‌ ಪಾಸುಮಾಡಿದ ಗೌರ್ನಮೆಂಟ್‌ ಆಫ್‌ ಇಂಡಿಯಾ ಆಕ್ಟ್ 1935ರಿಂದ ಪಡೆದುಕೊಂಡವುಗಳು. ಇಂತಹ ಎರವಲು ನಿಯಮಗಳು ಕಾಲಕ್ಕೆ ತಕ್ಕಂತೆ ತಿದ್ದುಪಡಿಯನ್ನು ಬಯಸಿದರೆ, ಅದನ್ನು ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಅಲ್ಪಸಂಖ್ಯಾತ ಎಂಬ ವ್ಯಾಖ್ಯಾನ ಪರಾಮರ್ಶೆಯಾಗಬೇಕಾಗಿದೆ. ಏಕೆಂದರೆ ಲಕ್ಷದ್ವೀಪ, ಕಾಶ್ಮೀರ ಮುಂತಾದ ರಾಜ್ಯಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಮಿಜೋರಾಮ್‌, ಮೇಘಾಲಯ, ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದಾರೆ. ಆದರೂ ಅವರು ಅಲ್ಪಸಂಖ್ಯಾತ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದು ಸಾಮಾಜಿಕ ನ್ಯಾಯ, ಸಮಾನತೆಗೆ ವಿರುದ್ಧ ಅಲ್ಲವೇ? ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಜನಸಂಖ್ಯಾವಾರು ಮತ್ತು ರಾಜ್ಯವಾರು ಅಲ್ಪಸಂಖ್ಯಾತ ಸ್ಥಾನಮಾನವನ್ನು ತೀರ್ಮಾನಿಸಬೇಕೆಂದು ಅಲ್ಪಸಂಖ್ಯಾತರ ಆಯೋಗಕ್ಕೆ ಸೂಚಿಸಿದೆ.

ಸಂವಿಧಾನದ ಆಶಯ ಏನು?

ಇತ್ತೀಚೆಗೆ ಸಂಸತ್ತು ಪಾಸುಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ ಎಂದು ಅಪಸ್ವರ ಎತ್ತಲಾಗುತ್ತಿದೆ. ಈ ತಿದ್ದುಪಡಿ ಧರ್ಮದ ಆಧಾರದ ಮೇಲೆ ಪೌರತ್ವವನ್ನು ನೀಡುತ್ತದೆ. ಮುಸ್ಲಿಂ ವಲಸಿಗರನ್ನು ಪೌರತ್ವದಿಂದ ಹೊರಗಿಡುತ್ತದೆ. ಇದು ಸಮಾನತೆ ಎಂಬ ಮೂಲಭೂತ ಹಕ್ಕಿನ ತತ್ವಕ್ಕೆ ವಿರುದ್ಧ ಮತ್ತು ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿದ ಜಾತ್ಯತೀತತೆ ತತ್ವಕ್ಕೆ ವಿರುದ್ಧ ಎಂದು ವಾದಿಸಲಾಗುತ್ತಿದೆ. ಆದರೆ ಸಂವಿಧಾನದ ಪ್ರಸ್ತಾವನೆ ಭಾರತದ ಜನಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ... ಎಂದು ಆರಂಭವಾಗುತ್ತದೆ. ಇಲ್ಲಿ ಭಾರತದ ಜನಗಳಾದ ನಾವು... ಅದರ ಸಮಸ್ತ ನಾಗರಿಕರಿಗೆ... ಎಂಬ ಪದಗಳ ಅರ್ಥವನ್ನು ಗ್ರಹಿಸಬೇಕು. ಈ ಸಂವಿಧಾನ ಭಾರತೀಯ ನಾಗರಿಕರಿಗೆ ಮಾತ್ರ ಎಂಬುದು ಅದರ ಉದ್ದೇಶ. ಭಾರತೀಯರಿಗೆ ಅನ್ವಯಿಸಬಹುದಾದ ಹಕ್ಕುಗಳನ್ನು ಅಕ್ರಮ ನುಸುಳುಕೋರರಿಗೂ ಅನ್ವಯಿಸಲು ಸಾಧ್ಯವೇ? ದೇಶವನ್ನು ಒಡೆಯುವವರು, ಮತ್ತಷ್ಟುಭಯೋತ್ಪಾದಕರು ಒಳ ನುಸುಳಬೇಕು, ಅವರಿಗೆ ಆಜಾದಿ ಲಭಿಸಬೇಕು, ಬಾಂಬ್‌ಗಳು ಸಿಡಿಯಬೇಕು, ರಕ್ತಪಾತವಾಗಬೇಕು, ಅದರಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳಬೇಕು ಎಂದು ಕೆಲ ಮತಬ್ಯಾಂಕ್‌ ರಾಜಕೀಯ ಪಕ್ಷಗಳು ಬಯಸುತ್ತವೆ. ಅದು ದೇಶದ ಸಮಗ್ರತೆಗೆ ಅಪಾಯಕಾರಿ.

ಸಂಕುಚಿತ ಮನಸ್ಥಿತಿ ತೊರೆಯೋಣ

ಬಾಬಾಸಾಹೇಬ ಅಂಬೇಡ್ಕರ್‌ ಅವರು ಸಂವಿಧಾನ ಎಷ್ಟುಶ್ರೇಷ್ಠವಾಗಿದ್ದರೇನು ಅದನ್ನು ಅನುಷ್ಠಾನಗೊಳಿಸುವವರ ಆಲೋಚನೆ ಕನಿಷ್ಠವಾಗಿದ್ದರೆ ಸಂವಿಧಾನದ ಉದ್ದೇಶ ವಿಫಲವಾಗುತ್ತದೆ ಎಂದು ಹೇಳಿದ್ದರು. ಸಂವಿಧಾನವು ನಾವು ಯಾವ ದಿಸೆಯಲ್ಲಿ ಸಾಗಬೇಕು ಎಂಬುದನ್ನು ಮಾತ್ರ ಹೇಳುತ್ತದೆ. ಸಾಮಾಜಿಕ ಸಂರಚನೆಗಳು ಆ ಅಂಶಗಳನ್ನು ಯಾವ ಗತಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ರಾಜ್ಯಶಾಸ್ತ್ರಜ್ಞ ಆ್ಯಂಡ್ರೆ ಬೆಟ್ಲೇ ಹೇಳುವ ಮಾತು ಗಮನಾರ್ಹ. ಭಾರತದ ಸಂವಿಧಾನದಲ್ಲಿ ಸೇರಿಸಲಾಗದ ಹಲವಾರು ಅಂಶಗಳನ್ನು ಬ್ರಿಟನ್‌ ಮಾದರಿಯಂತೆ ಸಂಪ್ರದಾಯದ ಮೂಲಕ ಆಚರಣೆಗೆ ತರಬೇಕು. ಅಂತಹ ವಾತಾವರಣ ಮತ್ತು ಮನೋಭಾವವನ್ನು ಸಮಾಜದಲ್ಲಿಯ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಬಾಬು ರಾಜೇಂದ್ರ ಪ್ರಸಾದ್‌ ಸಂವಿಧಾನ ರಚನೆಯ ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ನಾವು ಅರ್ಥಮಾಡಿಕೊಳ್ಳ$್ಳಬೇಕು. ಗೋಹತ್ಯೆ ನಿಷೇಧ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಂತೆ ಸಂವಿಧಾನ ಹೇಳಿದ ತತ್ವಗಳ ಜಾರಿಗೆ ನಾವು ಅಣಿಯಾಗಬೇಕು.

'ಗಣರಾಜ್ಯೋತ್ಸವ ಆಚರಣೆ ನಡೆಸಿ..' ಕೆಸಿಆರ್‌ ಸರ್ಕಾರಕ್ಕೆ ಖಡಕ್‌ ವಾರ್ನಿಂಗ್‌ ನೀಡಿದ ತೆಲಂಗಾಣ ಹೈಕೋರ್ಟ್‌!

ಆದರೆ, ಇವತ್ತಿನ ರಾಜಕಾರಣ ತನ್ನ ಮತಬ್ಯಾಂಕನ್ನು ಕ್ರೋಢೀಕರಣಗೊಳಿಸಲು, ಅಧಿಕಾರ ಗಿಟ್ಟಿಸಲು ತಂತ್ರಗಳನ್ನು ಹೆಣೆಯುತ್ತಿದೆ. ಟ್ರಿಪಲ್‌ ತಲಾಖ್‌, ರಾಮಜನ್ಮ ಭೂಮಿ ಹಕ್ಕು, ಕಲಂ 370 ರದ್ದತಿ ಮುಂತಾದವುಗಳನ್ನು ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಎಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ. ಇದೇ ಕಾರಣಗಳಿಗಾಗಿ ಹುದುಗಿದ್ದ ಬೇಗುದಿ ಪೌರತ್ವ ಕಾಯ್ದೆಯ ಮೂಲಕ ಅಸಹನೆಯ ಉರಿಯಾಗಿ ಹೊಮ್ಮುವಂತೆ ಮಾಡಲಾಗುತ್ತಿದೆ. ಈ ಉರಿಯಲ್ಲಿ ರಾಜಕೀಯ ಲೆಕ್ಕಾಚಾರಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಜಾತಿ, ಮತ, ಭಾಷೆ, ಪ್ರದೇಶಕ್ಕಿಂತ ದೇಶ ದೊಡ್ಡದು ಎಂಬ ಸತ್ಯ ನಮಗೆ ಅರಿವಾಗಬೇಕು. ನಿಮ್ಮ ಜಾತಿ-ಮತ ನಿಮಗೆ ಅನ್ನ ಆಶ್ರಯ ನೀಡಲಾರದು. ಆದರೆ ಈ ಭಾರತ ಮಾತೆ ನೀಡುತ್ತಾಳೆ. ಬನ್ನಿ ಕಷ್ಟಪಟ್ಟು ಗಳಿಸಿದ ಈ ಗಣರಾಜ್ಯವನ್ನು ಘನತೆಯಿಂದ ಕಟ್ಟೋಣ. ಜಾತಿಮತಗಳ ಎಲ್ಲೆ ಮೀರೋಣ.

ಭಾರತ ಸಂವಿದಾನದ ಒಟ್ಟು 395 ಕಲಮುಗಳಲ್ಲಿ 250 ಕಲಮುಗಳು ಬಾಲ್ಡ್‌ವಿನ್‌ ಕ್ಯಾಬಿನೆಟ್‌ ಪಾಸು ಮಾಡಿದ ಗೌರ್ನಮೆಂಟ್‌ ಆಫ್‌ ಇಂಡಿಯಾ ಆಕ್ಟ್‌ 1935 ರಿಂದ ಪಡೆದಕೊಂಡವುಗಳು. ಇಂತಹ ಎರವಲು ನಿಯಮಗಳು ಕಾಲಕ್ಕೆ ತಕ್ಕಂತೆ ತಿದ್ದುಪಡಿಯನ್ನು ಬಯಸಿದರೆ, ಅದನ್ನು ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ: ಧಾರವಾಡದ ಡಾ.ಮಲ್ಲಿಕಾರ್ಜುನ ಗುಮ್ಮಗೋಳ

Follow Us:
Download App:
  • android
  • ios