ವ್ಯಾಪಾರ ವಹಿವಾಟು ಸಂಬಂಧ ‘ಮದರ್ ಆಫ್ ಆಲ್ ಡೀಲ್ಸ್’ಗೆ ಭಾರತ ಹಾಗೂ ಐರೋಪ್ಯ ಒಕ್ಕೂಟಗಳು ಸಹಿ ಹಾಕಿದ ಬೆನ್ನಲ್ಲೇ ಅಚ್ಚರಿಯ ಹಾಗೂ ದಿಢೀರ್ ಬೆಳವಣಿಗೆಯೊಂದು ಸೋಮವಾರ ನಡೆದಿದೆ. ಭಾರತದ ಜತೆಗೆ ತಾವೂ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿ ನೀಡಿರುವುದಾಗಿ ಟ್ರಂಪ್ ಅವರು ಘೋಷಿಸಿದ್ದಾರೆ.
ನವದೆಹಲಿ: ವ್ಯಾಪಾರ ವಹಿವಾಟು ಸಂಬಂಧ ‘ಮದರ್ ಆಫ್ ಆಲ್ ಡೀಲ್ಸ್’ಗೆ ಭಾರತ ಹಾಗೂ ಐರೋಪ್ಯ ಒಕ್ಕೂಟಗಳು ಸಹಿ ಹಾಕಿದ ಬೆನ್ನಲ್ಲೇ ಅಚ್ಚರಿಯ ಹಾಗೂ ದಿಢೀರ್ ಬೆಳವಣಿಗೆಯೊಂದು ಸೋಮವಾರ ನಡೆದಿದೆ. ಭಾರತದ ಜತೆಗೆ ತಾವೂ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸೋಮವಾರ ಸಂಜೆ ದೂರವಾಣಿ ಮಾತುಕತೆ ನಡೆಸಿದ ಟ್ರಂಪ್ ಅವರು ಕೆಲ ಹೊತ್ತಿನ ಬಳಿಕ ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣವಾಗಿರುವ ‘ಟ್ರುತ್’ನಲ್ಲಿ ಬರೆದುಕೊಂಡಿದ್ದಾರೆ. ಇದು ಜಾಗತಿಕವಾಗಿ ಸಂಚಲನಕ್ಕೆ ಕಾರಣವಾಗಿದ್ದು, ಸುಂಕ ಸಮರ ಹೇರಿದ್ದ ಅಮೆರಿಕ ಜತೆಗೆ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಭಾರತದ ವಿಜಯ ಇದು ಎಂದು ಬಣ್ಣಿಸಲಾಗುತ್ತಿದೆ.
ವ್ಯಾಪಾರ ಒಪ್ಪಂದದ ಪ್ರಕಾರ, ಭಾರತದ ಉತ್ಪನ್ನಗಳ ಮೇಲಿನ ಪ್ರತಿತೆರಿಗೆಯನ್ನು ಅಮೆರಿಕ ಶೇ.25ರಿಂದ ಶೇ.18ಕ್ಕೆ ಇಳಿಸಲಿದೆ. ಭಾರತ ಕೂಡ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದು, ಕಡಿತ ಪ್ರಮಾಣದ ಬಗ್ಗೆ ಭಾರತ ಸರ್ಕಾರದಿಂದ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ.
ಈ ನಡುವೆ ಬೆಳವಣಿಗೆ ಕುರಿತು ಭಾರತದ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ‘ಭಾರತದ ಉತ್ಪನ್ನಗಳ ತೆರಿಗೆ ಶೇ.18ಕ್ಕೆ ಇಳಿಸಿರುವುದು ಸಂತೋಷ ತಂದಿದೆ. ಅಧ್ಯಕ್ಷ ಟ್ರಂಪ್ ಅವರಿಗೆ 140 ಕೋಟಿ ಜನರ ಪರವಾಗಿ ಧನ್ಯವಾದ’ ಎಂದು ಹೇಳಿದ್ದಾರೆ.
ವ್ಯಾಪಾರ ಒಪ್ಪಂದ:
ವ್ಯಾಪಾರ ಒಪ್ಪಂದ ಕುರಿತು ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ನೀಡಿರುವ ಅಧ್ಯಕ್ಷ ಟ್ರಂಪ್, ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಮುಂಜಾನೆ (ಭಾರತೀಯ ಕಾಲಮಾನ ಸಂಜೆ) ಮಾತುಕತೆ ನಡೆಸಿದೆ. ಅವರು ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರು ಹಾಗೂ ತಮ್ಮ ದೇಶದ ಅತ್ಯಂತ ಪ್ರಭಾವಿ ಮತ್ತು ಗೌರವಾನ್ವಿತ ನಾಯಕರಾಗಿದ್ದಾರೆ. ನಾವು ವ್ಯಾಪಾರ ಸೇರಿದಂತೆ ಹಲವು ವಿಷಯ ಹಾಗೂ ರಷ್ಯಾ- ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಮಾತುಕತೆ ನಡೆಸಿದೆವು’ ಎಂದು ಹೇಳಿದ್ದಾರೆ.
ಜೊತೆಗೆ, ‘ಮಾತುಕತೆ ವೇಳೆ ಅವರು (ಮೋದಿ) ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಬಗ್ಗೆ ಮತ್ತು ಅಮೆರಿಕ ಮತ್ತು ಸಾಧ್ಯವಾದರೆ ವೆನಿಜುವೆಲಾದಿಂದ ಹೆಚ್ಚು ತೈಲ ಖರೀದಿಗೆ ಒಪ್ಪಿದ್ದಾರೆ. ಇದು ಉಕ್ರೇನ್ ಯುದ್ಧ ನಿಲ್ಲಿಸಲು ಮತ್ತು ಪ್ರತಿದಿನವೂ ನಡೆಯುತ್ತಿರು ಸಾವಿರಾರು ಜನರ ಸಾವನ್ನು ತಪ್ಪಿಸಲು ನೆರವಾಗಲಿದೆ’ ಎಂದಿದ್ದಾರೆ.
ಜೊತೆಗೆ, ‘ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮೆರಿಕ ಮತ್ತು ಭಾರತದ ನಡುವೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದೇವೆ. ಇದರ ಅನ್ವಯ ಭಾರತದ ಉತ್ಪನ್ನಗಳ ಮೇಲಿನ ಅಮೆರಿಕದ ಪ್ರತಿತೆರಿಗೆಯನ್ನು ಶೇ.25ರಿಂದ ಶೇ.18ಕ್ಕೆ ಇಳಿಸಲಾಗುವುದು. ಇದೇ ವೇಳೆ ಭಾರತ ಕೂಡಾ ಅಮೆರಿಕದ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಿದ್ದಾರೆ’ ಎಂದು ಪ್ರಕಟಿಸಿದ್ದಾರೆ.
ಅಲ್ಲದೆ, ‘ಪ್ರಧಾನಿ ಮೋದಿ, ಈಗಾಗಲೇ ನಡೆಯುತ್ತಿರುವ 500 ಶತಕೋಟಿ ಡಾಲರ್ ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರೆ ಉತ್ಪನ್ನಗಳ ಖರೀದಿ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಒಪ್ಪಿದ್ದಾರೆ. ಈ ಒಪ್ಪಂದದ ಬಳಿಕ ಭಾರತದೊಂದಿಗೆ ನಮ್ಮ ಅತ್ಯದ್ಭುತ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ. ಪ್ರಧಾನಿ ಮೋದಿ ಮತ್ತು ನಾನು, ಕೆಲಸ ಮಾಡಿ ಮುಗಿಸುವಂತ ವ್ಯಕ್ತಿಗಳು. ಇದನ್ನು ಬಹಳಷ್ಟು ಜನರ ವಿಷಯದಲ್ಲಿ ಹೇಳಲು ಸಾಧ್ಯವಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋದಿ ಹರ್ಷ:
ಟ್ರಂಪ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ‘ಭಾರತದಲ್ಲಿ ತಯಾರಾದ ಉತ್ಪನ್ನಗಳ ಮೇಲಿನ ತೆರಿಗೆಯನ್ನೀಗ ಶೇ.18ಕ್ಕೆ ಇಳಿಸಿರುವುದು ಸಂತೋಷ ತಂದಿದೆ. ಅಧ್ಯಕ್ಷ ಟ್ರಂಪ್ ಅವರಿಗೆ 140 ಕೋಟಿ ಜನರ ಪರವಾಗಿ ಧನ್ಯವಾದ. ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಗಳು ಒಟ್ಟಾಗಿ ಕೆಲಸ ಮಾಡಿದಾಗ, ನಮ್ಮ ಜನರಿಗೆ ಪ್ರಯೋಜವಾಗುತ್ತದೆ ಮತ್ತು ಪರಸ್ಪರ ಸಹಕಾರಕ್ಕೆ ಅವಕಾಶಗಳನ್ನು ತೆರೆಯುತ್ತದೆ.ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವ ಅತ್ಯಗತ್ಯ. ಶಾಂತಿಗಾಗಿ ಅವರ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ. ನಮ್ಮ ಪಾಲುದಾರಿಕೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ತಕ್ಷಣದಿಂದ ಒಪ್ಪಂದ
ಅಮೆರಿಕ- ಭಾರತ ವ್ಯಾಪಾರಕ್ಕೆ ತಕ್ಷಣದಿಂದ ಒಪ್ಪಿಗೆ ಸೂಚಿಸಿದ್ದೇನೆ. ಭಾರತದ ಉತ್ಪನ್ನಗಳ ಮೇಲಿನ ಅಮೆರಿಕದ ತೆರಿಗೆ ಶೇ.25ರಿಂದ ಶೇ.18ಕ್ಕೆ ಇಳಿಯಲಿದೆ.
- ಡೊನಾಲ್ಡ್ ಟ್ರಂಪ್
ಸಂತೋಷವಾಗಿದೆ
ಭಾರತೀಯ ಉತ್ಪನ್ನಗಳ ತೆರಿಗೆಯನ್ನು ಅಮೆರಿಕ 18%ಕ್ಕೆ ಇಳಿಸಿರುವುದು ಸಂತೋಷ ತಂದಿದೆ. ಟ್ರಂಪ್ ಅವರಿಗೆ 140 ಕೋಟಿ ಭಾರತೀಯರ ಪರ ಧನ್ಯವಾದ.
- ನರೇಂದ್ರ ಮೋದಿ, ಪ್ರಧಾನಿ


