ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ತೀವ್ರ ವಿರೋಧ, ಪಟ್ಟಿಯಿಂದ ಕೈಬಿಡಲು ಆಗ್ರಹ!
ತೇಜಸ್ವಿ ಸೂರ್ಯ ಜರ್ಮನಿ ಕಾರ‍್ಯಕ್ರಮಕ್ಕೆ ತೀವ್ರ ವಿರೋಧ| ಭಾಷಣಕಾರರ ಪಟ್ಟಿಯಿಂದ ಕೈಬಿಡಲು ಆಗ್ರಹ
ಹ್ಯಾಂಬರ್ಗ್ (ಆ.06): ಇಲ್ಲಿನ ಭಾರತೀಯ ದೂತಾವಾಸ ಹಮ್ಮಿಕೊಂಡಿರುವ ಸ್ಟಾರ್ಟಪ್ ಸಮ್ಮೇಳನಕ್ಕೆ ಬೆಂಗಳೂರು ದಕ್ಷಿಣದ ಸಂಸದರೂ ಆಗಿರುವ ಯುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರನ್ನು ಆಹ್ವಾನಿಸಿರುವುದು ವಿವಾದಕ್ಕೀಡಾಗಿದೆ. ಸೂರ್ಯ ಅವರನ್ನು ಭಾಷಣಕಾರರ ಪಟ್ಟಿಯಿಂದ ಕೈಬಿಡಬೇಕು ಎಂದು ಯುರೋಪ್ನ ಕೆಲವು ಭಾರತೀಯ ಸಂಘಟನೆಗಳು ಒತ್ತಾಯಿಸಿವೆ.
‘ತೇಜಸ್ವಿ ಅವರು ವಿಭಜಕ ಅಜೆಂಡಾ ಹೊಂದಿದ್ದಾರೆ. ಹಿಂದುಯೇತರರ ವಿರುದ್ಧದ ನಿಲುವು ಅವರದ್ದು. ಇದು ಯುರೋಪ್ನ ಸಮಾನತೆ, ವೈವಿಧ್ಯತೆ ಹಾಗೂ ಸಹಬಾಳ್ವೆಯ ಮೌಲ್ಯಗಳಿಗೆ ವಿರುದ್ಧವಾದುದು. ಯುರೋಪ್ ಸಹಿ ಹಾಕಿರುವ ಅಂತಾರಾಷ್ಟ್ರೀಯ ಒಪ್ಪಂದಗಳಿಗೂ ವಿರುದ್ಧವಾದುದು. ಹೀಗಾಗಿ ಅವರನ್ನು ಆಹ್ವಾನಿತರ ಪಟ್ಟಿಯಿಂದ ತೆಗೆದು ಹಾಕಬೇಕು’ ಎಂದು ಒತ್ತಾಯಿಸಿವೆ. ಗಮನಾರ್ಹ ಎಂದರೆ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು.
ಇಂಡಿಯಾ ಸಾಲಿಡ್ಯಾರಿಟಿ ಜರ್ಮನಿ, ಹ್ಯುಮ್ಯಾನಿಸಂ ಪ್ರಾಜೆಕ್ಟ್, ಸಾಲಿಡ್ಯಾರಿಟಿ ಬೆಲ್ಜಿಯಂ, ಇಂಡಿಯನ್ಸ್ ಅಗೇನ್ಸ್ಟ್ ಸಿಎಎ-ಎನ್ಆರ್ಸಿ-ಎನ್ಪಿಆರ್, ಭಾರತ ಡೆಮಾಕ್ರಸಿ ವಾಚ್, ಇಂಡಿಯಾ ಅಲಯನ್ಸ್ ಪ್ಯಾರಿಸ್, ಫೌಂಡೇಶನ್ ದ ಲಂಡನ್ ಸ್ಟೋರಿ- ಇವು ತೇಜಸ್ವಿ ವಿರುದ್ಧ ದೂರಿರುವ ಭಾರತೀಯ ಐರೋಪ್ಯ ಸಂಘಟನೆಗಳು.
ತೇಜಸ್ವಿ ಸಿಎಎ ವಿರೋಧಿ ಹೊರಾಟದ ವಿರುದ್ಧ ಮಾಡಿರುವ ಕೆಲವು ಟ್ವೀಟ್‌ಗಳು ಹಾಗೂ ಭಾಷಣಗಳನ್ನು ಈ ಸಂಘಟನೆಗಳು ತಮ್ಮ ದೂರಿನಲ್ಲಿ ಉದಾಹರಿಸಿವೆ. ‘ಮೋದಿ ವಿರುದ್ಧ ಮಾತಾಡಿದವರು ದೇಶವಿರೋಧಿಗಳು ಎಂದು ತೇಜಸ್ವಿ ಹೇಳಿದ್ದಾರೆ. ಅಲ್ಲದೆ, ಬೆಂಗಳೂರಿನ ಟೌನ್ಹಾಲ್ ಹೊರಗೆ ಭಾಷಣ ಮಾಡುವಾಗ, ‘ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವವರು ಅನಕ್ಷರಸ್ಥರು, ಅವಿದ್ಯಾವಂತರು ಹಾಗೂ ಪಂಕ್ಚರ್ವಾಲಾಗಳು’ ಎಂದಿದ್ದಾರೆ. ಇಂಥವರಿಗೆ ಯುರೋಪ್ ಪ್ರವೇಶ ಬೇಡ’ ಎಂದು ಸಂಘಟನೆಗಳು ದೂರಿವೆ.
ತಮ್ಮ ಈ ಕೂಗಿಗೆ ಯುರೋಪ್ನ ಭಾರತೀಯ ಸಮುದಾಯ ದನಿಗೂಡಿಸಬೇಕು. ತೇಜಸ್ವಿ ಬದಲು ಜಾತ್ಯತೀತ ನಿಲುವುಳ್ಳ ಹಾಗೂ ಅನುಭವ ಉಳ್ಳವರನ್ನು ಆಹ್ವಾನಿಸಬೇಕು ಎಂದೂ ಅವು ಕೋರಿವೆ.