ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ 2024ರಲ್ಲಿ ಭಾರತೀಯ?
ವರ್ಷಾಂತ್ಯಕ್ಕೆ ಭಾರತದ ಮಾನವ ಸಹಿತ ಗಗನಯಾನ ಮತ್ತು 2024ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುವ ಕುರಿತು ಭಾರತ ಮತ್ತು ಅಮೆರಿಕ ದೇಶಗಳು ಮಹತ್ವದ ಮಾತುಕತೆ ಆರಂಭಿಸಿವೆ.
ನವದೆಹಲಿ: ವರ್ಷಾಂತ್ಯಕ್ಕೆ ಭಾರತದ ಮಾನವ ಸಹಿತ ಗಗನಯಾನ ಮತ್ತು 2024ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕರೆದೊಯ್ಯುವ ಕುರಿತು ಭಾರತ ಮತ್ತು ಅಮೆರಿಕ ದೇಶಗಳು ಮಹತ್ವದ ಮಾತುಕತೆ ಆರಂಭಿಸಿವೆ. ಜಿ20 ಶೃಂಗಸಭೆಗಾಗಿ (G20 Summit) ನವದೆಹಲಿಗೆ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಸುಮಾರು 52 ನಿಮಿಷಗಳ ಕಾಲ ಸುದೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಭಾರತದ ಚಂದ್ರಯಾನ 3 (Chandrayaan 3) ಮತ್ತು ಸೂರ್ಯಯಾನ ನೌಕೆಯ ಯಶಸ್ವಿ ಉಡ್ಡಯನಕ್ಕಾಗಿ ಬೈಡೆನ್ ಭಾರತವನ್ನು ಅಭಿನಂದಿಸಿದರು.
ಬಳಿಕ ಉಭಯ ನಾಯಕರು ಬಾಹ್ಯಾಕಾಶ ವಲಯದಲ್ಲಿನ (space sector) ಉಭಯ ದೇಶಗಳ ಸಹಕಾರವನ್ನು ಇನ್ನಷ್ಟುವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದರು. ಈ ವೇಳೆ ವರ್ಷಾಂತ್ಯಕ್ಕೆ ಇಸ್ರೋ ನಡೆಸಲು ಉದ್ದೇಶಿಸಿರುವ ಮಾನವ ಸಹಿತ ಗಗನಯಾಕ್ಕೆ ವ್ಯೂಹಾತ್ಮಕ ಚೌಕಟ್ಟು ರೂಪಿಸುವ ಕುರಿತು ಉಭಯ ದೇಶಗಳು ಮಾತುಕತೆ ನಡೆಸಿದವು. ಇದೇ ವೇಳೆ ಅಮೆರಿಕದಿಂದ 31 ಎಂಕ್ಯೂ-9ಬಿ ಡ್ರೋನ್ (MQ-9B drones) ಖರೀದಿಗೆ ಭಾರತದ ರಕ್ಷಣಾ ಸಚಿವಾಲಯವು ಕೋರಿಕೆ ಪತ್ರ ಬಿಡುಗಡೆ ಮಾಡಿದ್ದನ್ನು ಬೈಡೆನ್ ಸ್ವಾಗತಿಸಿದರು. ಅಲ್ಲದೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್‌ಎಎಲ್ ಮತ್ತು ಅಮೆರಿಕದ ಜಿಇ ಏರೋಸ್ಪೇಸ್ (GE Aerospace of America) ಸಹಭಾಗಿತ್ವದಲ್ಲಿ ಜೆಟ್ ಎಂಜಿನ್ ಉತ್ಪಾದನೆ ಕುರಿತು ಸಂಸದೀಯ ಅಧಿಸೂಚನೆ ಹಾಗೂ ವಾಣಿಜ್ಯ ಒಪ್ಪಂದ ಕುರಿತ ಅಧಿಕೃತ ಮಾತುಕತೆ ಆರಂಭವಾಗಿರುವುದನ್ನು ಸ್ವಾಗತಿಸಿದರು.
ಇಸ್ರೋ ಸೋಲಾರ್ ಮಿಷನ್ ಆದಿತ್ಯ ಎಲ್1 ಹಿಂದಿರುವ ಇಸ್ರೋ ವಿಜ್ಞಾನಿಗಳ ವಿದ್ಯಾರ್ಹತೆ
ಜಾಗತಿಕ ವಿಶ್ವಾಸ ಕೊರತೆಗೆ ಅಂತ್ಯ ಹೇಳೋಣ: ಮೋದಿ
ಜಗತ್ತು ಈಗ ವಿಶ್ವಾಸದ ಕೊರತೆ ಎಂಬ ಸವಾಲನ್ನು ಎದುರಿಸುತ್ತಿದೆ. ಹೀಗಾಗಿ ಜಾಗತಿಕ ವಿಶ್ವಾಸ ಕೊರತೆಯನ್ನು ಕೊನೆಗಾಣಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವ ನಾಯಕರಿಗೆ ಕರೆ ನೀಡಿದ್ದಾರೆ. ಪ್ರದರ್ಶನ ಹಾಗೂ ಸಮ್ಮೇಳನ ಸಭಾಂಗಣವಾಗಿರುವ ‘ಭಾರತ ಮಂಟಪಂ’ನಲ್ಲಿ ಜಿ20 ಶೃಂಗಸಭೆಯನ್ನು (G20 President) ಉದ್ದೇಶಿಸಿ ಶನಿವಾರ ಮಾತನಾಡಿದ ಪ್ರಧಾನಿ, ಕೋವಿಡ್ ಬಳಿಕ ವಿಶ್ವಾಸ ಕೊರತೆ ಎಂಬ ಹೊಸ ಸವಾಲನ್ನು ವಿಶ್ವ ಎದುರಿಸುವಂತಾಗಿದೆ. ದುರಾದೃಷ್ಟವೆಂದರೆ, ಯುದ್ಧಗಳು ಆ ವಿಶ್ವಾಸ ಕೊರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ ಒಂದು ವಿಷಯ ನೆನಪಿನಲ್ಲಿಡಿ. ಕೋವಿಡ್ ಅನ್ನೇ ನಾವು ಗೆಲ್ಲುವುದಾದರೆ, ವಿಶ್ವಾಸ ಕೊರತೆಯ ಸವಾಲನ್ನೂ ಜಯಿಸಬಹುದು. ಜಾಗತಿಕ ವಿಶ್ವಾಸ ಕೊರತೆಯನ್ನು ವಿಶ್ವಾಸ ಹಾಗೂ ಆತ್ಮವಿಶ್ವಾಸವಾಗಿ ಬದಲಿಸಲು ಇಡೀ ಜಗತ್ತಿಗೆ ಜಿ20 ಅಧ್ಯಕ್ಷನಾಗಿ ಭಾರತ ಇಂದು ಕರೆ ಕೊಡಲಿದೆ ಎಂದು ತಿಳಿಸಿದರು.
ಪುರಾತನ ಸವಾಲುಗಳು ನಮ್ಮಿಂದ ಹೊಸ ಪರಿಹಾರಗಳನ್ನು ಬಯಸುವ ಸಮಯ ಇದಾಗಿದೆ. ಹೀಗಾಗಿ ಮಾನವ ಕೇಂದ್ರಿತ ಪ್ರಯತ್ನದೊಂದಿಗೆ ನಮ್ಮ ಜವಾಬ್ದಾರಿಗಳನ್ನು ಈಡೇರಿಸಲು ನಾವು ಮುನ್ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ಭೂಮಿ, ಚಂದ್ರನ ಫೋಟೋ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್-1 ನೌಕೆ