ನವದೆಹಲಿ[ಡಿ.26]: 166 ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ರೈಲ್ವೆ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದೆ. 2018-19ನೇ ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆಯಲ್ಲಿ ಅಪಘಾತ ಮೊದಲಾದ ಘಟನೆಗಳಿಗೆ ಒಬ್ಬನೇ ಒಬ್ಬ ವ್ಯಕ್ತಿ ಬಲಿಯಾಗಿಲ್ಲ. ಈ ಮೂಲಕ 2019, ರೈಲ್ವೆಯ ಅತ್ಯಂತ ಸುರಕ್ಷಿತ ವರ್ಷ ಎನಿಸಿಕೊಂಡಿದೆ.

ಭಾರತೀಯ ರೈಲ್ವೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ರೈಲುಗಳ ಡಿಕ್ಕಿ, ಬೆಂಕಿ ಅನಾಹುತ, ಲೆವೆಲ್‌ ಕ್ರಾಸಿಂಗ್‌ ವೇಳೆ ಉಂಟಾಗುವ ಅಪಘಾತಗಳು ಮತ್ತು ಹಳಿ ತಪ್ಪುವ ಘಟನೆಗಳು 38 ವರ್ಷಗಳಲ್ಲಿ ಶೇ.95ರಷ್ಟುಇಳಿಕೆ ಆಗಿವೆ.

2018ನೇ ಹಣಕಾಸು ವರ್ಷದಲ್ಲಿ 73 ರೈಲ್ವೆ ಅಪಘಾತಗಳು ಸಂಭವಿಸಿದ್ದವು. ಅವುಗಳ ಸಂಖ್ಯೆ 2019ರಲ್ಲಿ 59ಕ್ಕೆ ಇಳಿಕೆ ಆಗಿದೆ. ರೈಲ್ವೆ ಸುರಕ್ಷತೆಗೆ ಕೈಗೊಂಡ ಕ್ರಮಗಳಿಂದಾಗಿ 10 ಲಕ್ಷ ಕಿ.ಮಿ.ಗೆ ಅಪಘಾತ ಪ್ರಮಾಣ ಸಾರ್ವಕಾಲಿಕ 0.06ಕ್ಕೆ ಇಳಿಕೆಯಾಗಿದೆ. 1990​ರಿಂದ 1995ರ ಅವಧಿಯಲ್ಲಿ 500 ರೈಲ್ವೆ ಅಪಘಾತಗಳು ಸಂಭವಿಸಿದ್ದು, 2,400 ಮಂದಿ ಸಾವಿಗೀಡಾಗಿದ್ದರು. 2013​ರಿಂದ 2018ರ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ 110 ಅಪಘಾತಗಳು ಸಂಭವಿಸಿದ್ದು, 990 ಮಂದಿ ಬಲಿಯಾಗಿದ್ದರು.