ನವದೆಹಲಿ[ಜ.09]: ದೇಶದ 100 ಮಾರ್ಗಗಳಲ್ಲಿ 150 ರೈಲುಗಳನ್ನು ಓಡಿಸಲು ಖಾಸಗಿ ಕಂಪನಿಗಳಿಗೆ ಅವಕಾಶ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಈ ಸಂಬಂಧ ಕರಡು ನಿಯಮಗಳನ್ನು ರೂಪಿಸಿದೆ. ಖಾಸಗಿ ರೈಲು ಹೊರಟ 15 ನಿಮಿಷಗಳ ಅವಧಿಯಲ್ಲಿ ಅದೇ ಮಾರ್ಗದಲ್ಲಿ ಮತ್ತೊಂದು ರೈಲನ್ನು ಓಡಿಸಲು ಬಿಡುವುದಿಲ್ಲ. ಈ ಖಾಸಗಿ ರೈಲುಗಳು ನಿಗದಿಪಡಿಸುವ ಪ್ರಯಾಣ ದರಕ್ಕೆ ಯಾವುದೇ ಮಿತಿ ಇರುವುದಿಲ್ಲ. ಏನಾದರೂ ಅನಾಹುತವಾದರೆ ಅದಕ್ಕೆ ರೈಲ್ವೆ ಇಲಾಖೆ ಪರಿಹಾರ ನೀಡುವುದಿಲ್ಲ ಎಂಬ ಅಂಶಗಳು ಈ ನಿಯಮಗಳಲ್ಲಿ ಇವೆ.

ಬುಲೆಟ್ ರೈಲು ಮಾರ್ಗದಲ್ಲಿ ಜ. 17ರಿಂದ ಖಾಸಗಿ ತೇಜಸ್!

ಉದ್ದೇಶಿತ ಖಾಸಗಿ ರೈಲುಗಳು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸಬಹುದು. ಈ ರೈಲುಗಳಿಗೆ ಬೇಕಾದ ಗಾರ್ಡ್‌ ಹಾಗೂ ಇತರೆ ಸಿಬ್ಬಂದಿಯನ್ನು ಆಯಾ ಕಂಪನಿಗಳೇ ನೇಮಕ ಮಾಡಿಕೊಳ್ಳಬೇಕು. ರೈಲು ಹೊರಟ ಮಾರ್ಗದಲ್ಲಿ 15 ನಿಮಿಷಗಳ ಅವಧಿಯಲ್ಲಿ ಮತ್ತೊಂದು ರೈಲು ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಖಾಸಗಿ ರೈಲು ಗರಿಷ್ಠ 15 ನಿಮಿಷ ತಡವಾಗಿ ಗಮ್ಯವನ್ನು ತಲುಪಬಹುದು. ಅದಕ್ಕಿಂತ ತಡವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು. ಈ ರೈಲಿನ ವಿಳಂಬವನ್ನು ಅದೇ ಮಾರ್ಗದಲ್ಲಿ ಚಲಿಸುವ ರೈಲ್ವೆ ಇಲಾಖೆಯ ಗರಿಷ್ಠ ವೇಗದ ರೈಲಿನ ಜತೆ ತುಲನೆ ಮಾಡಲಾಗುತ್ತದೆ ಎಂದು ನೀತಿ ಆಯೋಗ ಸಿದ್ಧಪಡಿಸಿರುವ ಪ್ರಸ್ತಾವ ಹೇಳುತ್ತದೆ.

ರೈಲಿನಲ್ಲಿ ಕನಿಷ್ಠ 16 ಬೋಗಿಗಳು ಇರಬೇಕು. ಕನಿಷ್ಠ 450 ಕೋಟಿ ರು. ಮೌಲ್ಯ ಹೊಂದಿರುವ ಹಾಗೂ ರೈಲ್ವೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಕಂಪನಿಗಳು ಖಾಸಗಿ ರೈಲು ಓಡಿಸಬಹುದು. ಈ ರೈಲುಗಳ ಪ್ರಯಾಣ ದರಕ್ಕೆ ಯಾವುದೇ ಮಿತಿ ಇರುವುದಿಲ್ಲ. ಹಾಗೆಯೇ ಈ ರೈಲುಗಳಿಂದ ಜೀವ ಹಾನಿ, ಗಾಯ, ಸರಕು ಕಳ್ಳತನವಾದರೆ ಅದಕ್ಕೆ ಆಯಾ ಕಂಪನಿಗಳೇ ವಿಮೆ ಮೂಲಕ ಪರಿಹಾರ ಭರಿಸಬೇಕು ಎಂಬ ಅಂಶಗಳು ಇವೆ.

ರೈಲು ಪ್ರಯಾಣ ವೇಳೆ ಮನೆ ಕಳ್ಳತನವಾದರೆ 1 ಲಕ್ಷ ರು. ವಿಮೆ!