ನವದೆಹಲಿ[ಡಿ.30]: ಪ್ರಯಾಣಿಕ ರೈಲು ಸೇವೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕೇಂದ್ರ ಸರ್ಕಾರ, ದೇಶದ 100 ಮಾರ್ಗಗಳಲ್ಲಿ 150 ಖಾಸಗಿ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ಪೈಕಿ ಕರ್ನಾಟಕದ ರಾಜಧಾನಿ ಬೆಂಗಳೂರು ಮೂಲಕ ಹಾದು ಹೋಗುವ 8 ದೂರಸಂಚಾರ ಮಾರ್ಗವೂ ಸೇರಿದೆ ಎನ್ನಲಾಗಿದೆ.

ಇಂಥದ್ದೊಂದು ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಸರ್ಕಾರಿ- ಖಾಸಗಿ ಮೌಲ್ಯಮಾಪನ ಸಮಿತಿ ಡಿ.19ರಂದು ನಡೆಸಿದ ಸಭೆಯಲ್ಲಿ ಅನುಮೋದನೆ ನೀಡಿದೆ. ಜನವರಿ ಅಂತ್ಯದ ವೇಳೆಗೆ ಖಾಸಗಿ ರೈಲು ಓಡಿಸಲು ಅರ್ಹ ಕಂಪನಿಗಳಿಂದ ಬಿಡ್ಡಿಂಗ್‌ ಆಹ್ವಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಖಾಸಗೀಕರಣಗೊಳ್ಳಲಿರುವ ಮಾರ್ಗಗಳ ಪೈಕಿ ರಾಜಧಾನಿ ದೆಹಲಿ ಸಂಪರ್ಕಿಸುವ 35, ಮುಂಬೈ ಸಂಪರ್ಕಿಸುವ 26, ಕೋಲ್ಕತಾ ಸಂಪರ್ಕಿಸುವ 12, ಚೆನ್ನೈ ಸಂಪರ್ಕಿಸುವ 11 ಮತ್ತು ಬೆಂಗಳೂರು ಸಂಪರ್ಕಿಸುವ 8 ಮಾರ್ಗಗಳು ಸೇರಿವೆ. ಬೆಂಗಳೂರನ್ನು ಹಾದು ಹೋಗುವ ಮಾರ್ಗಗಳ ಪೈಕಿ ಬೆಂಗಳೂರು- ನವದೆಹಲಿ, ಬೆಂಗಳೂರು- ಪುಣೆ ಸೇರಿದೆ ಎಂದು ಮೂಲಗಳು ತಿಳಿಸಿವೆ.